Asianet Suvarna News Asianet Suvarna News

ಬಾವಿಯ ತುಂಬಾ ಹೆಣಗಳ ರಾಶಿ: ಶ್ರೀರಾಮ ಉಳಿದ ಪ್ರಯಾಗರಾಜ್​ನ ಕೌತುಕ ವಿವರಿಸಿದ್ದಾರೆ ಡಾ.ಬ್ರೋ

ಪ್ರಯಾಗರಾಜದಲ್ಲಿರುವ ಪಾತಾಳ ಮಂದಿರ ವಿಶೇಷತೆಯ ಕುರಿತು ಡಾ.ಬ್ರೋ ವಿವರಿಸಿದ್ದಾರೆ. ರಾಮನಿಗೂ ನಂಟಿರುವ ಇದರ ವಿಶೇಷತೆಗಳೇನು?
 

Dr Bro explained about the specialty of Patala Mandir in Prayagaraja connection with Ram suc
Author
First Published Jan 21, 2024, 5:55 PM IST

ಉತ್ತರ ಪ್ರದೇಶದ ಅಯೋಧ್ಯೆಯಿಂದ ಸುಮಾರು 168 ಕಿಲೋ ಮೀಟರ್​ ದೂರವಿರುವ ಕ್ಷೇತ್ರ ಪ್ರಯಾಗರಾಜ್​. ಶ್ರೀರಾಮನಿಗೂ ಪ್ರಯಾಗರಾಜಕ್ಕೂ ಅವಿನಾಭಾವ ಸಂಬಂಧ.   14 ವರ್ಷ ವನವಾಸಕ್ಕೆ ಹೋಗುವ ಪೂರ್ವದಲ್ಲಿ ರಾಮ-ಸೀತಾ  ಭೇಟಿ ಕೊಟ್ಟ ಸ್ಥಳವಿದು. ಪ್ರಯಾಗರಾಜ ಎಂದರೆ ಕುಂಭಮೇಳಕ್ಕೆ ಹೆಸರುವಾಸಿ. ಅರ್ಧ ಕುಂಭಮೇಳ, ಪೂರ್ಣ ಕುಂಭಮೇಳ, ಮಹಾ ಕುಂಭಮೇಳ ಇಲ್ಲಿ ನಡೆಯುತ್ತದೆ. ಇದಕ್ಕೆ ಪ್ರಪಂಚದ ಮೂಲೆ ಮೂಲೆಗಳಿಂದ ಕೋಟ್ಯಂತರ ಮಂದಿ ಬರುವುದು ವಿಶೇಷವೇ ಸರಿ. ಇದೀಗ ಪ್ರಯಾಗರಾಜ್​ನಲ್ಲಿರುವ ಪಾತಾಳ ಮಂದಿರದ ಇನ್ನೊಂದು ಕೌತುಕವನ್ನು ವೀಕ್ಷಕರ ಮುಂದೆ ತೆರೆದಿಟ್ಟಿದ್ದಾರೆ ಡಾ.ಬ್ರೋ. ನಾಳೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ಇದಾಗಲೇ ಶ್ರೀರಾಮನಿಗೆ ಸಂಬಂಧಿಸಿದ, ಆತನ ಕುರುಹು ಇರುವ ಹಲವಾರು ಸ್ಥಳಗಳ ಪರಿಚಯ ಮಾಡಿಸಿರುವ ಡಾ.ಬ್ರೋ ಅರ್ಥಾತ್​ ಗಗನ್​ ಅವರು ಇದೀಗ ಪ್ರಯಾಗರಾಜದಲ್ಲಿನ ಪಾತಾಳ ಮಂದಿರ ಪರಿಚಯವನ್ನೂ ಮಾಡಿಸಿದ್ದಾರೆ. ಇಲ್ಲಿರುವ ಬಾವಿಗಳಲ್ಲಿ ಹೆಣದ ರಾಶಿಗಳ ಕೌತುಕವನ್ನು ಅವರು ತೆರೆದಿಟ್ಟಿದ್ದಾರೆ. ಟೈಟ್​ ಸೆಕ್ಯುರಿಟಿ ಇರುವ ಸ್ಥಳದಲ್ಲಿಯೂ ಅಲ್ಲಿ ಸಮೀಪ ಹೋಗಿ ವೀಕ್ಷಕರಿಗೆ ಸಂಪೂರ್ಣ ದರ್ಶನವನ್ನು ಮಾಡಿಸುವಲ್ಲಿ ಸಫಲರಾಗಿದ್ದಾರೆ ಡಾ. ಬ್ರೋ.

ಮೊದಲಿಗೆ ಇಲ್ಲಿರುವ ಬಾವಿಗಳು ಹಾಗೂ ಅದರಲ್ಲಿರುವ ರಾಶಿ ರಾಶಿ ಹೆಣಗಳ ಕುರಿತು ಗಗನ್​ ಅವರು ವಿವರಿಸಿದ್ದಾರೆ. ಅಕ್ಬರನ ಆಳ್ವಿಕೆಯಲ್ಲಿಯೇ ಈ ಬಾವಿಯನ್ನು ಮುಚ್ಚಲಾಗಿದ್ದರೂ ಅದರ ಕುರುಹು ಇಂದಿಗೂ ಇದೆ. ಅಷ್ಟಕ್ಕೂ ಈ ಬಾವಿಯಲ್ಲಿ ಹೆಣಗಳ ರಾಶಿ ಇರಲು ಕಾರಣವೂ ಇದೆ. ಅದೇನೆಂದರೆ 15-16ನೇ ಶತಮಾನದಲ್ಲಿ ಪಾತಾಳದಿಂದ ನೀರು ಬರುತ್ತಿರುವ ಈ ಬಾವಿಯಲ್ಲಿ ಬಿದ್ದರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎನ್ನುವ ಕಲ್ಪನೆ ಇತ್ತಂತೆ. ಇದೇ ಕಾರಣಕ್ಕೆ ಜನರು ಇಲ್ಲಿಗೆ ಬಂದು ಸಾವನ್ನಪ್ಪುತ್ತಿದ್ದರು. ಇದೇ ಕಾರಣಕ್ಕೆ ಬಾವಿಗಳ ತುಂಬಾ ಹೆಣದ ರಾಶಿಯೇ ತುಂಬಿ ಹೋಗಿತ್ತು ಎನ್ನುವ ಮಾಹಿತಿ ನೀಡಿದ ಡಾ.ಬ್ರೋ ನಂತರ ಅಕ್ಬರ ಅದನ್ನು ಮುಚ್ಚಿಸಿರುವ ಮಾಹಿತಿ ನೀಡಿದರು.

ಗಂಗಾ, ಯಮುನೆ, ಸರಸ್ವತಿಯ ಒಡಲು ತ್ರಿವೇಣಿ ಸಂಗಮದ ಸಂಪೂರ್ಣ ದರ್ಶನ ಮಾಡಿ ಪುಳಕಿತರಾದ ಭಕ್ತರು

ಅಲ್ಲಿಯೇ ಸಮೀಪ ಇರುವುದೇ ಪಾತಾಳ ಮಂದಿರ. ಇದರ ಸಂಪೂರ್ಣ ಪರಿಚಯ ಮಾಡಿಸಿದ್ದಾರೆ ಗಗನ್​. ಈ ಪಾತಾಳ ಮಂದಿರ ಕುರಿತು ಒಂದಿಷ್ಟು ಮಾಹಿತಿ ನೀಡುವುದಾದರೆ, ದೇವಾಲಯವು ಕೋಟೆಯ ಅಂಗಳದಲ್ಲಿ ಹಿಂದಿನ ದ್ವಾರದ ನೆಲದ ಕೆಳಗೆ ನೆಲಮಾಳಿಗೆಯಲ್ಲಿದೆ. ಪೂರ್ವ-ಪಶ್ಚಿಮದಲ್ಲಿ ಇದರ ಉದ್ದ 84 ಅಡಿ ಮತ್ತು ಅಗಲ 49.5 ಅಡಿ ಹೊಂದಿದೆ. ಮೇಲಿನ ಕಲ್ಲಿನ ಚಾವಣಿಯು ಆರೂವರೆ ಅಡಿ ಎತ್ತರದ ಕಂಬಗಳ ಮೇಲೆ ನಿಂತಿದೆ. ತಲಾ 12 ಕಂಬಗಳ ಏಳು ಸಾಲುಗಳಿವೆ.  ದಾರಿಯಲ್ಲಿ ಬಲಬದಿಯಲ್ಲಿ ಕುಳಿತಿರುವ ಧರ್ಮರಾಜನ ದೊಡ್ಡ ಪ್ರತಿಮೆಯಿದೆ. ಅದೇ ರಚನೆಯ ಒಳಗೆ ಗಣೇಶ, ಗೋರಖನಾಥ ಮತ್ತು ನರಸಿಂಹ ಅವತಾರ ಇತ್ಯಾದಿ ಅನೇಕ ದೊಡ್ಡ ಪ್ರತಿಮೆಗಳಿವೆ. ಈಗ ಈ ಕೋಟೆಯನ್ನು ಸೈನ್ಯವು ಬಳಸುತ್ತಿದೆಯಾದರೂ, ಈ ದೇವಾಲಯದ ವ್ಯವಸ್ಥೆಯು ಸೈನ್ಯಕ್ಕಿಂತ ಭಿನ್ನವಾಗಿದೆ. ಅದನ್ನು ಕಾಪಾಡುವ ಜವಾಬ್ದಾರಿ ಗೋಸ್ವಾಮಿ ಕುಟುಂಬಕ್ಕಿದೆ.

ಈ ಮಂದಿರದ ಪರಿಚಯವನ್ನು ಡಾ.ಬ್ರೋ ಮಾಡಿಸಿದ್ದಾರೆ. ಸದ್ಯ ಈ ಭಾಗ ಸೇನೆಯ ವಶದಲ್ಲಿ ಇರುವ ಬಗ್ಗೆ ಉಲ್ಲೇಖಿಸಿದ್ದಾರೆ. ದೇವಾಲಯದಲ್ಲಿ 43 ದೇವರು ಮತ್ತು ದೇವತೆಗಳ ಪ್ರತಿಮೆ ಇವೆ.  ರಾಮ ಮತ್ತು ಸೀತೆ ದೇವಸ್ಥಾನದ ಅಕ್ಷಯವತ್ ಅಡಿಯಲ್ಲಿ ತಂಗಿದ್ದರು ಎಂದು ಹೇಳಲಾಗುತ್ತದೆ. ವನವಾಸಕ್ಕೆ ಹೋಗುವ ಪೂರ್ವದಲ್ಲಿ  ರಾಮ, ಸೀತೆ ಮತ್ತು ಲಕ್ಷ್ಮಣರು ಸಹ ದೇವಾಲಯದಲ್ಲಿರುವ ತಂಗಿದ್ದರು. ಅಷ್ಟೇ ಅಲ್ಲದೇ ಈ ದೇವಾಲಯದಲ್ಲಿ ಬ್ರಹ್ಮ ದೇವರಿಂದ ಸ್ಥಾಪಿಸಲ್ಪಟ್ಟ ಶೂಲ್ ಟಂಕೇಶ್ವರ ಶಿವಲಿಂಗವೂ ಇದೆ. ಮೊಘಲ್ ದೊರೆ ಅಕ್ಬರನ ಪತ್ನಿ ಜೋಧಾ ಬಾಯಿ ಈ ಶಿವಲಿಂಗಕ್ಕೆ ಜಲಾಭಿಷೇಕ ಮಾಡುತ್ತಿದ್ದರು. ಬ್ರಹ್ಮಾಜಿ ಆಲದ ಮರದ ಕೆಳಗೆ ಮೊದಲ ಯಜ್ಞ ಮಾಡಿದರು ಎಂದು ಇನ್ನಷ್ಟು ವಿವರಣೆ ಈ ಮಂದಿರದ ಬಗ್ಗೆ ಸಿಗುತ್ತದೆ.

ಶ್ರೀರಾಮ 11 ವರ್ಷ ವನವಾಸ ಮಾಡಿದ ಚಿತ್ರಕೂಟ ಹೇಗಿದೆ? ಗುಪ್ತ ಗೋದಾವರಿಯೂ ಇಲ್ಲೇ ಇದ್ದಾಳೆ!

Follow Us:
Download App:
  • android
  • ios