Asianet Suvarna News Asianet Suvarna News

ಬೆಂಗಳೂರು ಜನತೆಗೆ ಗುಡ್‌ನ್ಯೂಸ್ ಕೊಟ್ಟ ಬಿಎಂಆರ್‌ಸಿಎಲ್: ಮೆಜೆಸ್ಟಿಕ್‌ನಿಂದ ಬೆಳಗ್ಗೆ 5ಕ್ಕೆ ಮೆಟ್ರೋ ಸೇವೆ ಆರಂಭ

ರೈಲು ಹಾಗೂ ಇಂಟರ್‌ಸಿಟಿ ಬಸ್‌ಗಳಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರು ವಾಸ ಸ್ಥಳಕ್ಕೆ ತೆರಳಲು ಅನುಕೂಲ ಆಗುವಂತೆ ಮೆಜೆಸ್ಟಿಕ್‌ನಿಂದ ಎಲ್ಲ ದಿಕ್ಕುಗಳಿಗೂ  ಬೆಳಗ್ಗೆ 5 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ.

BMRCL has given another good news to Bengalureans Majestic Metro service will start from 5 AM sat
Author
First Published Feb 23, 2024, 2:23 PM IST

ಬೆಂಗಳೂರು (ಫೆ.23): ರಾಜ್ಯದ ವಿವಿಧ ನಗರ, ಪಟ್ಟಣ ಪ್ರದೇಶಗಳಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರು ವಾಸ ಸ್ಥಳಕ್ಕೆ ತೆರಳಲು ಅನುಕೂಲ ಆಗುವಂತೆ ಮೆಜೆಸ್ಟಿಕ್‌ನಿಂದ ಬೆಳಗ್ಗೆ 5 ಗಂಟೆಗೆ ಎಲ್ಲ ದಿಕ್ಕುಗಳಿಗೂ ಮೆಟ್ರೋ ಸೇವೆ ಆರಂಭಿಸಲಾಗುತ್ತದೆ. ಜೊತೆಗೆ, ಫೆ.26ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಜನದಟ್ಟಣೆ ಅವಧಿಯಲ್ಲಿ ಪ್ರತಿ 3 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲ್‌ ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿದಿನ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬೆಳ್ಳಂಬೆಳಗ್ಗೆ ಆಗಮಿಸುವ ಪ್ರಯಾಣಿಕರು ತಮ್ಮ ವಾಸ ಸ್ಥಳಕ್ಕೆ ತೆರಳಲು ಅನುಕೂಲ ಆಗುವಂತೆ ಮೆಜೆಸ್ಟಿಕ್‌ನಿಂದ (ನಾಡಪ್ರಭು ಕೆಂಪೇಗೌಡ ನಿಲ್ದಾಣ) ಬೆಳಗ್ಗೆ 5 ಗಂಟೆಗೆ ಎಲ್ಲ ದಿಕ್ಕುಗಳಿಗೂ ಮೆಟ್ರೋ ರೈಲು ಸೇವೆಯನ್ನು ಆರಂಭಿಸಲಾಗುತ್ತಿದೆ. ಇದರಿಂದ ಭಾರತೀಯ ರೈಲ್ವೆ / ಇಂಟರ್‌ಸಿಟಿ ಬಸ್‌ಗಳ ಮೂಲಕ ಬೆಂಗಳೂರು ನಗರಕ್ಕೆ ಮುಂಜಾನೆ ಆಗಮಿಸುವ ಪ್ರಯಾಣಿಕರ ಅನುಕೂಲವಾಗಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ-ಮೆಜೆಸ್ಟಿಕ್ ನಿಂದ ಎಲ್ಲಾ ದಿಕ್ಕುಗಳಿಗೆ ಮೊದಲ ರೈಲು (ಭಾನುವಾರ ಹೊರತುಪಡಿಸಿ) ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಲಿದೆ.

ಮಲ್ಲೇಶ್ವರ, ಕೆಂಗೇರಿ, ಮಂಡ್ಯ ಸೇರಿ 15 ರೈಲ್ವೆ ನಿಲ್ದಾಣಗಳಿಗೆ ಸ್ಮಾರ್ಟ್‌ ಟಚ್; 372.13 ಕೋಟಿ ವೆಚ್ಚ ಮೀಸಲು

ಜೊತೆಗೆ, ಫೆ.26ರಿಂದ ನಾಡಪ್ರಭು ಕೆಂಪೇಗೌಡ ನಿಲ್ಯಾಣ ಮೆಜೆಸ್ಟಿಕ್ ಮತ್ತು ಗರುಡಾಚಾರ್ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗ್ಗೆ 8.45ರಿಂದ ಬೆಳಗ್ಗೆ 10.20ರವರೆಗೆ ಪ್ರತಿ 3 ನಿಮಿಷಕ್ಕೊಂದರಂತೆ ಹೆಚ್ಚುವರಿ ಮೆಟ್ರೋ ರೈಲು ಸೇವೆಗಳನ್ನು ಒದಗಿಸಲಾಗುತ್ತದೆ. ಇದು ಟ್ರಿನಿಟಿ, ಇಂದಿರಾನಗರ, ಬೆನ್ನಿಗಾನಹಳ್ಳಿ, ಮತ್ತು ಕೆಆರ್ ಪುರ ಮೆಟ್ರೋ ನಿಲ್ದಾಣಗಳ ಕಡೆಗೆ ಹೋಗುವ ಪ್ರಯಾಣಿಕರ ಅವಶ್ಯಕತೆಗಳನ್ನು ಪೂರೈಸಲು ಸಹಾಯವಾಗಲಿದೆ. ಈ ಮಾರ್ಗದಲ್ಲಿ ಬೆಳಿಗೆ 8.45 ರಿಂದ 10.20 ಗಂಟೆಯವರೆಗೆ, ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಸೇವೆಗಳು ವಾರದ ಎಲ್ಲಾ ದಿನಗಳಲ್ಲಿ (ಶನಿವಾರ, ಭಾನುವಾರ ಮತ್ತು ಸಾಮಾನ್ಯ ರಜಾದಿನಗಳನ್ನು ಹೊರತುಪಡಿಸಿ) ಲಭ್ಯವಿರುತ್ತವೆ.

Follow Us:
Download App:
  • android
  • ios