ಅಮರನಾಥ ಅಪರ ದರ್ಶನ; ಮೇಘಸ್ಫೋಟದ ನಂತರದ ಕ್ಷಣಗಳು

ರಮಣೀಯ ಪ್ರಕೃತಿ, ಆಹ್ಲಾದಕರ ವಾತಾವರಣ, ಭೂಲೋಕದ ಸ್ವರ್ಗ ಅಂದರೆ ಇದೇ ಅನ್ನುವಷ್ಟುಚೆಂದ. ಆದರೆ ಈ ಖುಷಿ ಯಾವ ಹೊತ್ತಲ್ಲಿ ಬೇಕಿದ್ದರೂ ದಿಗಿಲು, ಆಘಾತ, ನೋವಿನ ಕ್ಷಣವಾಗಿ ಬದಲಾಗಬಹುದು. ಅದು ಕಾಶ್ಮೀರ. ಅಲ್ಲಿನ ಒಳ ಹೊರಗಿನ ನೋಟ ಇಲ್ಲಿದೆ.

Amarnath Apara Darshana, Moments After Cloudburst

- ಡೆಲ್ಲಿ ಮಂಜು

ಇದು ಅಚ್ಚರಿ ಅಲ್ಲ, ಹಾಗಂತ ನಿರೀಕ್ಷೆಯೂ ಇರಲಿಲ್ಲ.

‘ಏಕಾಏಕಿ ನಡೆದ ಗುಂಡಿನ ದಾಳಿಗೆ ಪೊಲೀಸ್‌ ಸಿಬ್ಬಂದಿಯೊಬ್ಬರು ಹುತಾತ್ಮರಾದರು. ಇದು ಭಯೋತ್ಪಾದಕರ ಅಟ್ಟಹಾಸ’. ಹೀಗೆ ಎರಡು ಸಾಲಿನ ಟ್ವೀಟ್‌ ನನ್ನ ಮೊಬೈಲ್‌ಗೆ ಬಿದ್ದಾಗ ಹೆಚ್ಚು ಕಡಿಮೆ ರಾತ್ರಿ ಎಂಟೂಕಾಲು ಗಂಟೆ. ಮೇಘ ಸಂದೇಶದ ಒಳ ಹೊಕ್ಕು ನೋಡಿದರೆ ಎರಡು ಮೂರು ದಿನಗಳ ಹಿಂದೆ ನಾವು ಸುತ್ತಾಡಿದ್ದು ಅದೇ ಜಾಗದಲ್ಲಿ! ಆ ಜಾಗ ಭೂಮಿಯ ಮೇಲಿನ ಸ್ವರ್ಗ. ಕಾಶ್ಮೀರದ ರಾಜಧಾನಿ ಶ್ರೀನಗರ. ಶ್ರೀನಗರ ಎಂದ ಕೂಡಲೇ ಗುಂಡಿನ ಶಬ್ದ ಅಂದಾಗ ಅಚ್ಚರಿ ಅಲ್ಲ ಅನ್ನಿಸಿಬಿಡುತ್ತೆ. ಆದ್ರೆ ಅರೆ ಸೇನಾ ಪಡೆಗಳ ಗಸ್ತು, ಈದ್‌ ಮಿಲಾದ್‌ ಹಬ್ಬ ಅನ್ನುವ ಕಾರಣವನ್ನು ಮುಂದಿಟ್ಟು ನೋಡಿದಾಗ ಅಂದಿನ ಗುಂಡಿನ ಶಬ್ದವನ್ನು ಯಾರು ನಿರೀಕ್ಷೆ ಮಾಡಿರಲಿಲ್ಲ.

ಕಾಶ್ಮೀರ ಕಣಿವೆಗಳ ನಡುವೆ ಹಿಮನಾಥನಾಗಿ ಕುಳಿತಿರುವ ಅಮರನಾಥನ ಗುಹೆಯ ಬಳಿ ವರುಣ ವ್ಯಾಘ್ರ ರೂಪ ತೋರಿದ ಕೂಡಲೇ ನಮಗೆ ಅಲರ್ಚ್‌ ಬಂತು ‘ಕಾಶ್ಮೀರ್‌ ಕಾಲಿಂಗ್‌’ ಅಂತ. ಶ್ರೀನಗರದ ಬಗ್ಗೆ, ಅಲ್ಲಿನ ಭಯೋತ್ಪಾದನೆಯ ಸುದ್ದಿಗಳ ಬಗ್ಗೆ ಕೇಳಿ, ಓದಿ, ಖುದ್ದು ಬರೆದಿದ್ದ ನಾನು ಅದೇ ಗುಂಗಿನಲ್ಲಿ ಶ್ರೀನಗರ ವಿಮಾನ ಹತ್ತಿದೆ. ಬೆಳಗ್ಗೆ ಆರು ಗಂಟೆಗೆ ಶ್ರೀನಗರ ಬಿಟ್ಟು ಬಾಲ್ಟಾಲ್‌ ಬೇಸ್‌ ಕ್ಯಾಂಪ್‌ನತ್ತ ಹೋಗಬೇಕಾಗಿತ್ತು. ಅಲ್ಲಿಗೆ ಹೋಗೋಕೆ ನಮಗೆ ರಥ ಸಾರಥಿಯಾಗಿ ಸಿಕ್ಕಿದ್ದು ಶೌಕತ್‌ ಅಹಮದ್‌ ಬಾಯ್‌.

ಡ್ರೈವರ್‌ ಪಕ್ಕದ ಸೀಟ್‌ನಲ್ಲಿ ಕೂತಿದ್ದ ನನಗೆ ಹಾಗೂ ಕ್ಯಾಮರಾ ಗೆಳೆಯರಿಗೆ ಖುಷಿ ತುಂಬುತ್ತಿದ್ದ ಶೌಕತ್‌ ಬಾಯ್‌. ಇನೋವಾ ಕಾರಲ್ಲಿ ಕೂತ ಕೂಡಲೇ, ‘ವೆಲ್‌ ಕಂ ಟು ಕಾಶ್ಮೀರ್‌ ಸಾರ್‌’ ಎಂದು ಮಾತು ಆರಂಭಿಸಿ, ‘ಈಸ್ಟ್‌ ಆರ್‌ ವೆಸ್ಟ್‌ ಕಾಶ್ಮೀರ್‌ ಈಸ್‌ ದಿ ಬೆಸ್ಟ್‌’ ಅಂದ. ಪಕ್ಕದಲ್ಲಿ ಹಾದು ಹೋಗುತ್ತಿದ್ದ, ದಾಲ್‌ ಲೇಕ್‌, ಅದು ಕಾಶ್ಮೀರವನ್ನು ಆವರಿಸಿಕೊಂಡಿರುವ ರೀತಿ, ಪಕ್ಕದಲ್ಲೇ ಹರಿಯುತ್ತಿದ್ದ ಸಿಂಧು ನದಿಯ ಬಗ್ಗೆ ವಿವರಣೆ ಕೊಡುತ್ತಿದ್ದ. ‘ದೇವರ ಖಜಾನೆಯಿಂದ ಬರುವ ನೀರು ಸಾರ್‌ ಇದು..’ ಎಂದು ನಮ್ಮನ್ನು ಇಂಪ್ರೆಸ್‌ ಮಾಡಲು ಪ್ರಯತ್ನಿಸುತ್ತಿದ್ದ. ‘ನಂಬಿಕೆಗೆ ಮತ್ತೊಂದು ಹೆಸರು ಕಾಶ್ಮೀರಿಗಳು. ಭಾಯ್‌, ಒಮ್ಮೆ ನಂಬಿದ್ರೆ ನಿಮಗೆ ಇಲ್ಲಿ ಸಿಗುವುದು ಸಿಹಿ ಅಷ್ಟೆ’ ಎಂದು ಕಾಶ್ಮೀರದ ಬಗ್ಗೆ ನಮಗೆ ಇದ್ದ ಮನಸ್ಥಿತಿಯನ್ನು ಬದಲಾಯಿಸುತ್ತಿದ್ದ. ‘ನಾವು ಪ್ರವಾಸೋದ್ಯಮವನ್ನೇ ನಂಬಿಕೊಂಡವರು ಸಾರ್‌. ಪ್ರವಾಸಿಗರೇ ನಮಗೆ ದೇವರು’ ಅಂತಲೂ ಏಣಿ ಹತ್ತಿಸುತ್ತಿದ್ದ.

ಶ್ರೀನಗರದಿಂದ ಹಿಮನಾಥನ ದರ್ಶನಕ್ಕೆ ಹೋಗಬೇಕಾದ್ರೆ ಹೆಚ್ಚು ಕಡಿಮೆ 100 ಕಿಲೋಮೀಟರ್‌ ಹಾದಿ ಸವೆಸಬೇಕು. ದೆಹಲಿಯಲ್ಲಿ ಕಳೆದ ಎರಡು ತಿಂಗಳಿಂದ ಸೂರ್ಯನ ಕೋಪತಾಪಗಳಿಗೆ ತುತ್ತಾಗಿ, ನಿತ್ಯವೂ ಬಿಸಿಲಿನ ಧಗೆಯಲ್ಲಿ ಬೇಯುತ್ತಿದ್ದ ನಮಗೆ ಶ್ರೀನಗರ ದಾಟಿದ ಕೂಡಲೇ ಗುಂಡ್ಲುಪೇಟೆಯ ಹಿಮವದ್‌ ಗೋಪಾಲಸ್ವಾಮಿ ಬೆಟ್ಟವನ್ನು ನೆನಪಿಸುವಂತಹ ಹವೆ ಆಹ್ಲಾದ ತಂದಿತು. ಹವಾಮಾನ ಕೂಲ್‌ಗೆ ಜಾರುತ್ತಿತ್ತು. ಸ್ವರ್ಗವೇ ಕಣ್ಣು ಮುಂದೆ ಬಂದ ಹಾಗೆ ನಿಸರ್ಗ ಸೌಂದರ್ಯ. ಕಣಿವೆಗಳ ನಡುವೆ ಬೋರ್ಗರೆಯುತ್ತಿದ್ದ ಪರಿಶುದ್ಧ ಜಲಮಾತೆ ಹೆಚ್ಚು ಕಡಿಮೆ ನೂರು ಕಿಲೋಮಿಟರ್‌ ನಮಗೆ ಕಂಪನಿ ಕೊಡ್ತು. ನೀರು, ಅದರ ಜೊತೆ ಕಣಿವೆಯ ಸೌಂದರ್ಯ, ಇನ್ನೇನು ಬೇಕು ಖುಷಿಗೆ..

ಇಷ್ಟರ ನಡುವೆ ಹಾದಿಯಲ್ಲಿ ನಮಗೆ ಕಂಡಿದ್ದು ಅರೆಸೇನಾ ತುಕಡಿಗಳ ಯೋಧರು. ಇದನ್ನು ನೋಡಿ ನಮ್ಮ ಡ್ರೈವರ್‌ ಅಣ್ಣ ಅಬ್ಜೆಕ್ಷನ್‌ ಶುರು ಮಾಡಿದ. ‘ಇಷ್ಟುಸೇನೆ ಯಾಕೆ ಸಾರ್‌. ನಮಗೂ ಮತ್ತು ಪ್ರವಾಸಿಗರಿಗೂ ಪ್ರತೀ ದಿನವೂ ಇವರು ಕಷ್ಟಕೊಡ್ತಾರೆ. ಪ್ರತಿ 15 ಅಡಿಗೆ ಒಬ್ಬ ಯೋಧ ಸಿಗ್ತಾನೆ. ಇದು ಪ್ರವಾಸಿಗರಿಗೆ ಬೇರೆಯದ್ದೇ ಭಾವನೆ ಮೂಡಿಸುತ್ತೆ. ಸಾಲದ್ದಕ್ಕೆ ಹತ್ತಾರು ಷರತ್ತುಗಳು ಇವನ್ನೆಲ್ಲ ಪ್ರವಾಸಿಗರು ಇಷ್ಟಪಡುವುದಿಲ್ಲ’ ಎಂದ. ಆ ವೇಳೆ ರಥ ಸಾರಥಿ ಬದಲಾಗಿ ಮುಂದಿನ ದಾರಿಯಲ್ಲಿ ನಮಗೆ ಜೊತೆಯಾಗಿದ್ದು ಹತ್ತಾರು ಹಿಂದಿ ಹಾಡುಗಳು. ಈ ಗೀತೆಗಳಿಗೆ ನಮ್ಮ ಧ್ವನಿ ಸೇರಿಸಿ, ಲಿಪ್‌ ಸಿಂಕ್‌ ಮಾಡುತ್ತಾ ಮುಂದಿನ 100 ಕಿಲೋಮೀಟರ್‌ ಹಾದಿ ಕ್ರಮಿಸುತ್ತಿದ್ದೆವು. ಎರಡೂವರೆ ಮೂರು ತಾಸುಗಳ ಜರ್ನಿ ಬಳಿಕ ಸ್ವರ್ಗದ ಬಾಗಿಲಲ್ಲೇ..

ಒಂದು ಕಡೆ ನಿಸರ್ಗದ ವಿಕೋಪ. ಮತ್ತೊಂದು ಕಡೆ ಹೊಸದಾಗಿ ಬೈಪಾಸ್‌ ರಸ್ತೆ ಮಾಡಿದ ಕಾರಣಕ್ಕೆ ಸ್ವರ್ಗದ ಬಾಗಿಲು ಎನ್ನಿಸಿಕೊಳ್ಳುವ ಅಮರನಾಥನ ತಪ್ಪಲಲ್ಲಿ ಬರುವ ಸೋನಾ ಮಾಗ್‌ರ್‍ನ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ. ಕಾಶ್ಮೀರ ಪೊಲೀಸರು ಬೈಪಾಸ್‌ ರಸ್ತೆಯ ಮೂಲಕವೇ ವಾಹನಗಳು ಚಲಿಸುವಂತೆ ಪ್ಲ್ಯಾನ್‌ ಮಾಡಿದ್ದರು. ನಮ್ಮ ಬಳಿ ಮೀಡಿಯಾ ಕಾರ್ಡ್‌ ಇದ್ದ ಕಾರಣಕ್ಕೆ ನೇರವಾಗಿ ಸ್ವರ್ಗದ ಬಾಗಿಲಿನಲ್ಲೇ ಇಳಿದೆವು. ಸೋನಾ ಮಾಗ್‌ರ್‍ನಲ್ಲಿ ನಾವು ಇಳಿದಾಗ ಹವಾಮಾನ ಹದವಾಗಿತ್ತು. ಡೆಲ್ಲಿಯ 36 ಡಿಗ್ರಿ ಕಂಡಿದ್ದ ನಮಗೆ ಇಲ್ಲಿಯ ಏಕ್‌ದಂ ಹದಿಮೂರು, ಹದಿನಾಲ್ಕು ಡಿಗ್ರಿಯ ಹವಾಮಾನ ಹಿತವೆನಿಸಿತು.

ಶೂನ್ಯದಲ್ಲಿ ದೇವರ ಕಾಣು ಅಂತಾರಲ್ಲ ಇದಕ್ಕೆ ಇರಬೇಕು ಅನ್ನಿಸ್ತು. ಅಲ್ಲಿ ಬರೀ ನಿಸರ್ಗ ಮತ್ತು ನೀವು. ಪ್ರಕೃತಿ ದೈವೀ ಸ್ವರೂಪದಲ್ಲಿ ಆವರಿಸಿಕೊಂಡು ಬಿಡುತ್ತೆ. ಇದಕ್ಕೆ ಮತ್ತಷ್ಟುಮೆರಗು ತುಂಬೋದು ಬಫ್‌ರ್‍ ಅಂದರೆ ಮಂಜು. ಇದು ಈ ಜಾಗದ ಪ್ರಮುಖ ಆಕರ್ಷಣೆ ಕೂಡ. ಇದೇ ಕಾರಣಕ್ಕೆ ಹಿಮನಾಥ ಅಮರನಾಥನಾಗಲು ಈ ಜಾಗ ಆಯ್ಕೆ ಮಾಡಿಕೊಂಡ ಅಂತ ಅನ್ನಿಸುತ್ತೆ. ನಿಸರ್ಗದ ಸೊಬಗು ನೋಡೋ ನೋಡುತ್ತಾ ಬಾಲ್ಟಲ್‌ ಬೇಸ್‌ ಕ್ಯಾಂಪ್‌ನಿಂದ ಹೆಜ್ಜೆ ಹಾಕಿದ್ರೆ ಅಮರನಾಥನನ್ನು ಮುಟ್ಟುವುದು ಗೊತ್ತೇ ಆಗುವುದಿಲ್ಲ. ಪಹಾಡಿಯ ಕಷ್ಟದ ಹಾದಿಯಲ್ಲಿ, ಹ್ಯೂಮನ್‌ ಟ್ರಾಫಿಕ್‌ ಜಾಮ್‌ ಆದರೂ ಬೋಲೇನಾಥನಿಗೆ ಜೈ ಅನ್ನುತ್ತಾ ಭಕ್ತರು 10 ರಿಂದ 12 ತಾಸುಗಳಲ್ಲಿ ಯಾತ್ರೆ ಮುಗಿಸುತ್ತಾರೆ. ಹಿಮನಾಥನ ಮುಂದೆ ನಿಂತು ಕಣಿವೆಯ ಸೌಂದರ್ಯ ಕಣ್ಣು ತುಂಬಿಕೊಂಡಾಗ ಜೀವನ ಸಾರ್ಥಕ ಅನ್ನಿಸಿಬಿಡುತ್ತೆ. ಕಾಶ್ಮೀರ ಕಣಿವೆಯಲ್ಲಿ ನಿಂತು ಮೈಮರೆತರೂ ಆ ಶೂನ್ಯದಲ್ಲೇ ಸಾಕ್ಷಾತ್ಕಾರ ಆಗುತ್ತೆ.

ಹನುಮಾನ್‌ ಚಾಲೀಸ್‌
ರಾತ್ರಿ 7.50ಕ್ಕೆ ಮುಳುಗೋ ಸೂರ್ಯನ ಕೊನೆಯ ಕಿರಣಗಳು ಸೋನಾಮಾರ್ಗ ಕಣಿವೆಯ ಮೇಲೆ ಬೀಳುತ್ತಿದ್ದಾಗ ಅಚ್ಚರಿಯ ಧ್ವನಿಯಾಗಿ ಕೇಳಿ ಬಂದಿದ್ದು ಹನುಮಾನ್‌ ಚಾಲೀಸ್‌. ಪತ್ರಕರ್ತನಾಗಿದ್ದ ಕಾರಣಕ್ಕೆ ಸ್ವಾಭಾವಿಕವಾಗಿ ನನ್ನ ಗ್ರಹಿಕೆ ಅತ್ತ ಕಡೆ ಜಾರಿತು. ಆಗಷ್ಟೆಮಹಾರಾಷ್ಟ್ರ, ಉತ್ತರಪ್ರದೇಶ, ಕರ್ನಾಟಕ ರಾಜ್ಯಗಳ ಹನುಮಾನ್‌ ಚಾಲೀಸ್‌ ಸುದ್ದಿಗಳನ್ನು ಖುದ್ದು ಬರೆದಿದ್ದ ನನಗೆ ಕಾಶ್ಮೀರದಲ್ಲಿ ಹನುಮನ ಜಪದ ಬಗ್ಗೆ ಯಾರನ್ನಾದ್ರು ಕೇಳಬೇಕು ಅಂತ ಅನ್ನಿಸ್ತು. ಅಲ್ಲಿದ್ದ ಟ್ರಾವೆಲ್ಸ್‌ ಬಾಯ್‌ಗೆ ಕೇಳಿದ್ರೆ, ‘ಇದು ಇಲ್ಲಿ ಡೈಲಿ ರೊಟೀನ್‌ ಸಾರ್‌. ಇತ್ತ ಕಡೆ ಬರುತ್ತಿರುವ ಧ್ವನಿಯೂ ಕೇಳಿ, ಆಜಾನ್‌ ಕೇಳುತ್ತೆ’ ಅಂದ. ಆತನ ಮಾತುಗಳನ್ನು ಪಕ್ಕದಲ್ಲಿ ಹರಿಯುತ್ತಿದ್ದ ಸಿಂಧೂ ನದಿ ತಣ್ಣಗೆ ಕೇಳುತ್ತಿತ್ತು.

ಇಂಥ ತಣ್ಣಗಿನ ನೀರು ಕಾಶ್ಮೀರದ ಜಿಲ್ಲಾ ಕೇಂದ್ರ ಗಂಡೆರಬಾಲ್‌ನಲ್ಲಿ ಹತ್ತಾರು ವರ್ಷಗಳಿಂದ ಮನುಷ್ಯನ ರಕ್ತದ ಕಲೆಗಳನ್ನು ಸೇರಿಸಿಕೊಂಡು ಮುನ್ನುಗ್ಗುತ್ತಿತ್ತು. ಅಮರನಾಥನ ದರ್ಶನಕ್ಕೆ ಹೋಗುವ ದಾರಿಯಲ್ಲಿ ಗಂಡೆರಬಾಲ್‌ ಸಿಟಿ ಅತಿಸೂಕ್ಷ್ಮ ಪ್ರದೇಶ. ಭಕ್ತರನ್ನು ಹೊತ್ತು ಬರುವ ವಾಹನಗಳ ಮೇಲೆ ಏಕಾಏಕಿ ಕಲ್ಲುಗಳು ಬೀಳುತ್ತಿದ್ದವಂತೆ. ದೌರ್ಜನ್ಯಗಳು ನಡೆಯುತ್ತಿದ್ದವು ಅಂತೆಲ್ಲ ಪತ್ರಿಕೆಗಳಲ್ಲಿ ಸುದ್ದಿಗಳು ಆಗಿವೆ. ಇದನ್ನು ಲೆಕ್ಕ ಹಾಕಿಕೊಂಡೇ ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಸಾಹೇಬ್ರು ಈ ಬಾರಿ ಹೆಜ್ಜೆಗೊಬ್ಬ ಯೋಧರನ್ನು ನಿಲ್ಲಿಸಿ, ಕಲ್ಲು ಬೀಸುವ ದುಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಹೀಗೆ 100 ಕಿಲೋಮಿಟರ್‌ ಉದ್ದಕ್ಕೂ ¶ೌಜಿಗಳನ್ನು ನಿಲ್ಲಿಸಿಬಿಟ್ಟಿದ್ದರು. ಹಾಗಾಗಿ ಸಿಂಧು ನದಿಯ ದಡದ ಕಲ್ಲುಗಳು ರಕ್ತ ಸ್ಪರ್ಶದ ಬದಲಾಗಿ ಶುದ್ಧ ಜಲ ಸ್ಪರ್ಶದಲ್ಲೇ ಹೊಳೆಯುತ್ತಿದ್ದವು.

ಥಾಯ್‌ವಾಸ್‌ - ಜುಲೈನಲ್ಲಿ ಬಫ್‌ರ್‍ ನೋಡಲು ಸಿಗುವ ಸ್ಥಳ. ಸೋನಾ ಮಾಗ್‌ರ್‍ನಲ್ಲಿ ಸೋನೆ ಶುರುವಾದ್ರೆ ಆರು ಕಿಲೋಮೀಟರ್‌ ಪಹಾಡಿ ಹಾದಿಯಲ್ಲಿ ಪಕ್ಕಕ್ಕೆ ಹೊಂದಿಕೊಂಡಿರುವ ಥಾಯ್‌ವಾಸ್‌ನಲ್ಲೂ ಸೋನೆ ಮಾತಾಡಿಸುತ್ತೆ. ಪಹಾಡಿ ಜಾಗ ಆದ ಕಾರಣ ಕುದುರೆ ಇಲ್ಲಿ ಪ್ರಮುಖ ವಾಹನವಾಗುತ್ತೆ. ಅದರಂತೆ ಅಲ್ಲಿಗೆ ಹೋಗಿ ಮಂಜುಗಡ್ಡೆ ನೋಡಬೇಕಾದರೆ ಸಣ್ಣ ಟ್ರೆಕ್ಕಿಂಗ್‌ ಮಾಡಬೇಕಾಗುತ್ತೆ. ತಣ್ಣನೆ ಹವೆಯಲ್ಲೂ ಟ್ರೆಕ್ಕಿಂಗ್‌ ಮೈ ಬೆವರು ಇಳಿಸುತ್ತೆ. ಮೇಲಕ್ಕೆ ಹೋದಾಗ ಹಲವು ವರ್ಷಗಳಿಂದ ಗಡ್ಡೆಗಟ್ಟಿದ್ದ ಮಂಜಿನ ನೀರು ಅಂದರೆ ಗ್ಲೇಶಿಯರ್‌ ಇನ್ನು ಜಿನುಗುತ್ತಿತ್ತು. ಅಲ್ಲಿನ ಶುದ್ದ ಹಿಮಗಡ್ಡೆಯಲ್ಲಿ ನಿಂತು ಆ ನೀರಲ್ಲೇ ಹಿಮನಾಥನಿಗೆ ಅಘ್ರ್ಯ ಕೊಟ್ಟಾಗ ಮನಸ್ಸಿಗೆ ಆದ ಆಹ್ಲಾದÜ ಹೇಳತೀರದು. ನಮ್ಮ ಕುದುರೆ ಬಾದಲ್‌ನ ಮಾಲೀಕ ಕಣ್ಣೆದುರಿನ ಬೃಹತ್‌ ಗ್ಲೇಶಿಯರ್‌ ಬಗ್ಗೆ ವಿವರಣೆ ನೀಡುತ್ತಾ, ‘ಮೂರ್ನಾಲ್ಕು ಸಾವಿರ ಕುದುರೆಗಳಿಗೆ ಈ ಸೀಜನ್‌ನಲ್ಲಿ ಕೆಲಸ ಇರುತ್ತೆ. ಇಲ್ಲೇ ಸಲ್ಮಾನ್‌ ಖಾನ್‌ ನಟನೆಯ ‘ಭಜರಂಗಿ ಭಾಯ್‌ಜಾನ್‌’ ಚಿತ್ರದ ಕೊನೆ ಸೀನ್‌ ಶೂಟ್‌ ಆಗಿದ್ದು. ಅಮಿತಾಬ್‌ರ ‘ಸತ್ತೇ ಪೇ ಸತ’್ತ ಸಿನಿಮಾ ಶೂಟ್‌ ಆಗಿದ್ದೂ ಇಲ್ಲೇ’ ಅಂತ ಹೇಳಿದ್ರು. ನನ್ನ ಹೊತ್ತಿದ್ದ ಬಾದಲ್‌ (ಕುದುರೆಯ ಹೆಸರು) ಸಿಂಧೂ ನದಿಯ ನೀರಿನಲ್ಲಿ ಹೆಜ್ಜೆ ಹಾಕಿದಾಗ ಆ ಮಜವೇ ಬೇರೆ ಬಿಡಿ.

Latest Videos
Follow Us:
Download App:
  • android
  • ios