ತಂತ್ರಜ್ಞಾನ ಇದೀಗ ಸಿಕ್ಕಾಪಟ್ಟೆ ಮುಂದುವರೆದಿದೆ. ಅದು ಎಷ್ಟರಮಟ್ಟಿಗೆ ಎಂದರೆ, ಅಮೆರಿಕದಲ್ಲಿ ಕುಳಿತು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆಯಬಹುದಾದ ದರೋಡೆಯನ್ನು ಮಹಿಳೆಯೊಬ್ಬರು ತಡೆದಿದ್ದಾರೆ. ಅದರ ಡಿಟೇಲ್ಸ್ ಇಲ್ಲಿದೆ...
ತಂತ್ರಜ್ಞಾನ ಇದೀಗ ಸಿಕ್ಕಾಪಟ್ಟೆ ಮುಂದುವರೆದಿದೆ. ಅದು ಎಷ್ಟರಮಟ್ಟಿಗೆ ಎಂದರೆ, ಅಮೆರಿಕದಲ್ಲಿ ಕುಳಿತು ಭಾರತದ ಯಾವುದೋ ಮೂಲೆಯಲ್ಲಿ ನಡೆಯಬಹುದಾದ ಕಳ್ಳತನದ ಬಗ್ಗೆ ಎಲರ್ಟ್ ನೀಡಿ ಅದನ್ನು ತಪ್ಪಿಸಬಹುದಾಗಿದೆ. ಹಾಗೆಂದು ಇದು ಎಲ್ಲಿಯೋ ನಡೆದ ಘಟನೆಯಲ್ಲ. ಬದಲಿಗೆ ಬಾಗಲಕೋಟೆಯ ಮುಧೋಳದಲ್ಲಿ ವೃದ್ಧ ದಂಪತಿ ಇದೇ ತಂತ್ರಜ್ಞಾನದಿಂದ ಬಚಾವಾಗಿದ್ದಾರೆ. ಅಮೆರಿಕದಲ್ಲಿ ಇರುವ ವೃದ್ಧ ದಂಪತಿಯ ಪುತ್ರಿ ಅಲ್ಲಿಂದಲೇ ಬುದ್ಧಿ ಉಪಯೋಗಿಸಿ ಇಲ್ಲಿರುವ ಅಪ್ಪ-ಅಮ್ಮನನ್ನು ಕಳ್ಳತನದಿಂದ ರಕ್ಷಿಸಿದ್ದಾರೆ.
ಚಡ್ಡಿ ಗ್ಯಾಂಗ್ ಎನ್ನುವ ದೊಡ್ಡ ದರೋಡೆಕೋರರ ಗುಂಪು ಬಾಗಲಕೋಟೆ ಸೇರಿದಂತೆ ಹಲವು ಕಡೆಗಳಲ್ಲಿ ದರೋಡೆ ಮಾಡುತ್ತಲೇ ಇರುತ್ತವೆ. ಇವರ ಹಾವಳಿ ಹೆಚ್ಚಾಗಿದೆ. ಸಾಮಾನ್ಯವಾಗಿ ಎಲ್ಲಾ ಕಳ್ಳರಿಗೂ ಸುಲಭದ ಟಾರ್ಗೆಟ್ ಎಂದರೆ ವೃದ್ಧರು ಇರುವ ಮನೆ. ಈಗಂತೂ ಇದು ಸರ್ವೇಸಾಮಾನ್ಯ ಆಗಿಬಿಟ್ಟಿದೆ. ಮಕ್ಕಳು ಎಲ್ಲಿಯೋ ದೂರದಲ್ಲಿ ಇರುವುದು, ಮನೆಯಲ್ಲಿ ವಯಸ್ಸಾದ ಗಂಡ-ಹೆಂಡತಿ ಇರುವುದು ಎಲ್ಲಾ ಊರುಗಳಲ್ಲಿಯೂ ಕಾಮನ್ ಆಗಿಬಿಟ್ಟಿದೆ. ಮಗಳು ಗಂಡನ ಮನೆಗೆ ಹೋಗುವುದು ಅನಿವಾರ್ಯವಾದರೆ, ಮಗನಾದವ ದೂರದ ಊರಿನಲ್ಲಿ ಕೆಲಸಕ್ಕೋ ಇಲ್ಲವೇ ತನ್ನ ಕುಟುಂಬ ಸಹಿತ ಬೇರೆ ಮನೆ ಮಾಡುವುದೋ ಇದ್ದೇ ಇದೆ. ಇಂಥ ಸಂದರ್ಭದಲ್ಲಿ ಅವರಿಗೆ ವಯಸ್ಸಾದ ಅಪ್ಪ-ಅಮ್ಮನ ನೆನಪಾಗುವುದಿಲ್ಲ. ಆದ್ದರಿಂದ ಹಲವು ಊರು-ಕೇರಿಗಳು ವೃದ್ಧಾಶ್ರಮ ಆಗಿಬಿಟ್ಟಿವೆ.
ಇದೇ ಇಂಥ ಕಳ್ಳರ ಟಾರ್ಗೆಟ್. ಅದೇ ರೀತಿ, ಬಾಗಲಕೋಟೆಯ ಮುಧೋಳದಲ್ಲಿ ನಿವೃತ್ತ ಪಿಡಬ್ಲ್ಯುಡಿ ಇಂಜಿನಿಯರ್ ಹನುಮಂತಗೌಡ ದಂಪತಿ ವಾಸವಾಗಿದ್ದರು. ಆಗಸ್ಟ್ 27 ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಇವರ ಮನೆಗೆ ಕನ್ನ ಹಾಕಲು ಕಳ್ಳರು ಬಂದಿದ್ದರು. ಅವರ ಪುತ್ರಿ ಶ್ರುತಿ ಅಮೆರಿಕದಲ್ಲಿ ಇದ್ದು, ಅವರು, ಮನೆಗೆ ಸಿಸಿಟಿವಿ ಹಾಕಿಸಿ, ಅದರ ಚಲನವಲನಗಳನ್ನು ನೋಡಲು ತಮ್ಮ ಮೊಬೈಲ್ಗೆ ಕನೆಕ್ಟ್ ಮಾಡಿದ್ದರು. ಅಂದು ಕಳ್ಳರು ಮನೆಗೆ ನುಗ್ಗುತ್ತಲೇ ಅಲಾರಾಂ ಹೊಡೆದಿದೆ. ಇದು ಅಮೆರಿಕದಲ್ಲಿ ಸಿಸಿಟಿವಿಗೆ ಆ್ಯಕ್ಸೀಸ್ ಇರುವ ಮಗಳ ಮೊಬೈಲ್ನಲ್ಲಿ ಕೇಳಿಸಿದೆ. ಏನೋ ಅವಘಡ ಸಂಭವಿಸಿದೆ ಎಂದು ತಿಳಿಯುತ್ತಲೇ ಅವರು ಕೂಡಲೇ ನಡುರಾತ್ರಿ ಅಪ್ಪನಿಗೆ ಕರೆ ಮಾಡಿದ್ದಾರೆ.
ಅಲ್ಲಿ ಮನೆಯಲ್ಲಿಯೇ ಈ ಘಟನೆ ನಡೆಯುತ್ತಿದ್ದರೂ, ಅದು ಅವರಿಗೆ ತಿಳಿದಿರಲಿಲ್ಲ. ಆದರೆ ಮಗಳು ಶ್ರುತಿ ಕಾಲ್ ಮಾಡುತ್ತಲೇ ಅವರು ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಎಲ್ಲಾ ಕಡೆಗಳ ಲೈಟ್ ಆನ್ ಮಾಡಿ ಬಾಗಿಲು ತೆರೆದಂತೆ ಮಾಡಿದ್ದಾರೆ. ಇದರಿಂದ ಭಯಗೊಂಡ ಕಳ್ಳರು ಅಲ್ಲಿಂದ ಓಡಿ ಹೋಗಿದ್ದಾರೆ. ಪೊಲೀಸರು ಬಂದುಬಿಟ್ಟರೆ ಎನ್ನುವ ಭಯವಾಯಿತು ಎಂದು ತೋರುತ್ತದೆ, ಇದರಿಂದ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಒಟ್ಟಿನಲ್ಲಿ ತಂತ್ರಜ್ಞಾನ ಹಾಗೂ ಮಗಳ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
