ಆನ್‌ಲೈನ್ ವಂಚನೆ ಬಗ್ಗೆ ಎಷ್ಟೇ ಮಾಧ್ಯಮಗಳವರು, ಪೊಲೀಸರು ಎಚ್ಚರಿಕೆ ಕೊಡುತ್ತಲಿದ್ದರೂ ಹಲವರಿಗೆ ಇದು ತಿಳಿಯುವುದೇ ಇಲ್ಲ. ಇದೀಗ ಆನ್‌ಲೈನ್‌ನಲ್ಲಿ ಹಾಲು ತರಿಸಿಕೊಳ್ಳಲು ಹೋಗಿ 71 ವರ್ಷದ ವೃದ್ಧೆಯೊಬ್ಬರು 18.5 ಲಕ್ಷ ರೂ. ಕಳೆದುಕೊಂಡಿದ್ದಾರೆ. ಆಗಿದ್ದೇನು ನೋಡಿ...
ಮುಂಬೈನ 71 ವರ್ಷದ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಪ್ರಯತ್ನಿಸುವಾಗ ಸೈಬರ್ ಗೂಂಡಾಗಳಿಂದ 18.5 ಲಕ್ಷ ರೂ.ಗಳನ್ನು ವಂಚಿಸಲಾಗಿದೆ. ವಡಾಲಾ ನಿವಾಸಿಯಾಗಿರುವ ಈ ಮಹಿಳೆ ಆಗಸ್ಟ್ ಆರಂಭದಲ್ಲಿ ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಮೂಲಕ ಹಾಲು ಆರ್ಡರ್ ಮಾಡಲು ಪ್ರಯತ್ನಿಸಿದ್ದರು. ಅವರು ಮಾಡಿದ್ದು ಅಷ್ಟೇ. ಆದರೆ ಮುಂದಾದದ್ದೆಲ್ಲಾ ಅನಾಹುತ. ಸೈಬರ್ ಕ್ರೈಂಗೆ ಬಲಿಯಾದ ಮಹಿಳೆ, 18.5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಆಗಸ್ಟ್ 4 ರಂದು, ಮಹಿಳೆಗೆ ದೀಪಕ್ ಎಂಬಾತ, ತಾನು ಹಾಲು ಕಂಪನಿಯ ಉದ್ಯೋಗಿ ಎಂದು ಪರಿಚಯಿಸಿಕೊಂಡು ಕರೆ ಮಾಡಿದ. ಮನೆಗೆ ಹಾಲು ಸರಬರಾಜು ಮಾಡುವುದಾಗಿ ಹೇಳಿದ. ಆನ್‌ಲೈನ್‌ನಲ್ಲಿ ಹಾಲಿನ ಬಗ್ಗೆ ಮಹಿಳೆ ಸರ್ಚ್ ಮಾಡುತ್ತಿದ್ದುದು ಈ ಖದೀಮರಿಗೆ ತಿಳಿದಿತ್ತು (ಅದಕ್ಕೇ ಹೇಳುವುದು ನಾವು ಗೂಗಲ್ನಲ್ಲಿ ಏನೇ ಸರ್ಚ್ ಮಾಡಿದರೂ ಅದರ ಮೇಲೆ ಇಂಥ ಕ್ರಿಮಿನಲ್ಸ್ ಕಣ್ಣು ನೆಟ್ಟಿರುತ್ತದೆ ಎಂದು! ). ಆದ್ದರಿಂದ ಆ ಆಸಾಮಿ ದೀಪಕ್ ಎಂದು ಪರಿಚಯಿಸಿಕೊಂಡು ವೃದ್ಧೆಯನ್ನು ನಂಬಿಸಿದ.
ಕೊನೆಗೆ ಹಾಲು ಮಾರಾಟ ಸುಲಭವಾಗಲಿದೆ ಎಂದು ಹೇಳಿ, ಆಕೆಯ ನಂಬರ್ಗೆ ಒಂದು ಲಿಂಕ್ ಕಳುಹಿಸಿದ. ಇದನದ್ನು ಕ್ಲಿಕ್ ಮಾಡಿ ಅದರಲ್ಲಿ ಇರುವ ಡಿಟೇಲ್ಸ್ ಫಿಲ್ ಮಾಡಿದರೆ ಮನೆಗೆ ಹಾಲು ಸರಬರಾಜು ಆಗುತ್ತದೆ ಎಂದ. ಅಜ್ಜಿಗೆ ಸಿಕ್ಕಾಪಟ್ಟೆ ಖುಷಿಯಾಗಿ ಹೋಯಿತು. ತಾನು ಅಂದುಕೊಂಡದ್ದು ಇಷ್ಟು ಬೇಗ ಆಗಿಹೋಯಿತಲ್ಲ, ಮನೆಯ ಬಾಗಿಲಿಗೇ ತಂತಾನೇ ಹಾಲು ಬರುತ್ತದೆಯಲ್ಲ ಎಂದು ಖುಷಿಪಟ್ಟುಕೊಂಡಳು.ಆಕೆಯನ್ನು ಇನ್ನಷ್ಟು ನಂಬಿಸಲು ಆ ಖದೀಮ, ಫೋನ್‌ನಲ್ಲಿ ದೀರ್ಘ ಸಂಭಾಷಣೆ ನಡೆಸಿದ.
ವೃದ್ಧೆ ಸಂಪೂರ್ಣ ತನ್ನ ಬುಟ್ಟಿಗೆ ಬಿದ್ದಳು ಎಂದು ತಿಳಿಯುತ್ತದ್ದಂತೆಯೇ ಲಿಂಕ್ಕಳುಹಿಸಿ. ಅದರಂತೆ ಲಿಂಕ್ ಓಪನ್ ಮಾಡಿದ ಮಹಿಳೆ, ಅಲ್ಲಿರುವ ಫಾರ್ಮ್ ತುಂಬಿದಳು. ನಂತರ ಹಾಲು ಬರಲಿಲ್ಲ. ಅದೇ ಫೋನ್ಗೆ ಕರೆ ಮಾಡಿದಾಗ ಕರೆಯೂ ಸಿಗಲಿಲ್ಲ. ಕೊನೆಗೆ, ಆಕೆಯ ಫೋನ್ಗೆ ಒಂದು ಬ್ಯಾಂಕ್ ಖಾತೆಯಿಂದ 1.7 ಲಕ್ಷ ರೂಪಾಯಿ ಹಾಗೂ ಇತರ ಬ್ಯಾಂಕ್ ಖಾತೆ ಎಲ್ಲವು ಸೇರಿ, 18.5 ಲಕ್ಷ ರೂಪಾಯಿ ವಿತ್ಡ್ರಾ ಆಗಿರುವುದು ತಿಳಿದಿದೆ. ಅದಾದ ಮೇಲೆ ವೃದ್ಧೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಅವರು ತನಿಖೆ ಮಾಡಿದಾಗ ಹಾಲಿನ ವಿಷಯ ಹೇಳಿದ್ದಾಳೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
