ಹವಾಮಾನ ವಿಜ್ಞಾನಿಗಳು 'ಗಾಡ್ಜಿಲ್ಲಾ ಎಲ್ ನಿನೋ' ಎಂಬ ಭೀಕರ ಹವಾಮಾನ ವಿದ್ಯಮಾನದ ಬಗ್ಗೆ ಎಚ್ಚರಿಸಿದ್ದಾರೆ. ಪೆಸಿಫಿಕ್ ಸಾಗರದಲ್ಲಿ ಉಷ್ಣಾಂಶ ಏರಿಕೆಯಿಂದ ಉಂಟಾಗುವ ಈ ವಿದ್ಯಮಾನವು ಜಾಗತಿಕ ಹವಾಮಾನವನ್ನು ಏರುಪೇರು ಮಾಡಲಿದ್ದು, ಭಾರತದ ಮಾನ್ಸೂನ್ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ.

ಭೂಮಿಯು ಶೀಘ್ರದಲ್ಲೇ ಅತೀ ಭೀಕರವಾದ 'ಎಲ್ ನಿನೋ' (El Nino) ಹಂತಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ವಿಜ್ಞಾನಿಗಳು ಬೆಚ್ಚಿಬೀಳಿಸುವ ಎಚ್ಚರಿಕೆ ನೀಡಿದ್ದಾರೆ. ಇದು ಕಳೆದ ದಶಕಗಳಲ್ಲೇ ಅತ್ಯಂತ ಶಕ್ತಿಶಾಲಿ ಮತ್ತು ವಿನಾಶಕಾರಿಯಾಗುವ ಸಾಧ್ಯತೆ ಇದೆ. ಈ ವಿದ್ಯಮಾನವು ಅತಿಯಾದ ತೀವ್ರತೆ ಪಡೆದುಕೊಂಡಾಗ ವಿಜ್ಞಾನಿಗಳು ಇದನ್ನು 'ಗಾಡ್ಜಿಲ್ಲಾ ಎಲ್ ನಿನೋ' ಎಂದು ಕರೆಯುತ್ತಾರೆ, ಇದು ಈಗ ಜಗತ್ತಿನ ನಿದ್ದೆಗೆಡಿಸಿದೆ.

Add Asianetnews Kannada as a Preferred SourcegooglePreferred

ಪೆಸಿಫಿಕ್ ಸಾಗರದಲ್ಲಿ ಕುದಿಯುತ್ತಿದೆ ನೀರು!

ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್ಕಾಸ್ಟ್ಸ್ (ECMWF) ವರದಿಯ ಪ್ರಕಾರ, ಉಷ್ಣವಲಯದ ಪೆಸಿಫಿಕ್ ಮಹಾಸಾಗರದ ತಾಪಮಾನವು ಊಹೆಗೂ ಮೀರಿ ಏರಿಕೆಯಾಗುತ್ತಿದೆ. ಆತಂಕದ ವಿಷಯವೆಂದರೆ, ಆಗಸ್ಟ್ 2026ರ ವೇಳೆಗೆ ಈ ವಿದ್ಯಮಾನವು 'ಸೂಪರ್ ಎಲ್ ನಿನೋ' ಆಗಿ ಬದಲಾಗುವ ಸಾಧ್ಯತೆ ಶೇ. 22ರಷ್ಟಿದೆ. ಇನ್ನು ಇದು ಬಲಿಷ್ಠವಾಗಿ ಪ್ರಭಾವ ಬೀರುವ ಸಂಭವನೀಯತೆ ಶೇ. 80ರಷ್ಟಿದ್ದು, ಹವಾಮಾನ ವ್ಯವಸ್ಥೆಯನ್ನೇ ಏರುಪೇರು ಮಾಡಲಿದೆ.

ಏನಿದು ENSO? ವಿಶ್ವದ ಹವಾಮಾನವನ್ನೇ ಬದಲಿಸೋ ಶಕ್ತಿ ಇದಕ್ಕಿದೆಯೇ?

ಇದು ಕೇವಲ ಸಮುದ್ರದ ತಾಪಮಾನ ಏರಿಕೆಯಲ್ಲ, ಬದಲಾಗಿ 'ಎಲ್ ನಿನೋ-ಸದರ್ನ್ ಆಸಿಲೇಷನ್' (ENSO) ಎಂಬ ಜಾಗತಿಕ ಹವಾಮಾನ ಚಕ್ರದ ಭಾಗವಾಗಿದೆ. ಇದು ಸಮುದ್ರದ ಮೇಲ್ಮೈ ತಾಪಮಾನ ಮತ್ತು ವಾತಾವರಣದ ಒತ್ತಡವನ್ನು ಸಂಪೂರ್ಣವಾಗಿ ಬದಲಿಸುತ್ತದೆ. ಪೆಸಿಫಿಕ್‌ನಲ್ಲಿ ಹುಟ್ಟುವ ಈ ಬದಲಾವಣೆಯು ಇಡೀ ವಿಶ್ವದ ಹವಾಮಾನದ ಮೇಲೆ ಪ್ರಭಾವ ಬೀರಲಿದೆ. ಒಂದು ಕಡೆ ಅತಿವೃಷ್ಟಿ ತಂದರೆ, ಮತ್ತೊಂದು ಕಡೆ ಭೀಕರ ಬರಗಾಲಕ್ಕೆ ಕಾರಣವಾಗಲಿದೆ.

ಜಾಗತಿಕ ತಾಪಮಾನದಲ್ಲಿ ದಿಗಿಲು ಹುಟ್ಟಿಸೋ ಏರಿಕೆ

ಎಲ್ ನಿನೋ ಪ್ರಭಾವ ಹೆಚ್ಚಾದಂತೆ ಜಗತ್ತಿನ ಸರಾಸರಿ ಉಷ್ಣಾಂಶವು ಹೆಚ್ಚಲಿದೆ. ಇದರ ಪರಿಣಾಮವಾಗಿ ದಕ್ಷಿಣ ಯುರೋಪ್ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಅಕಾಲಿಕ ಮಳೆ ಮತ್ತು ಚಂಡಮಾರುತಗಳು ಸೃಷ್ಟಿಯಾಗಲಿವೆ. ಆದರೆ, ಉತ್ತರ ಅಮೆರಿಕದ ಭಾಗಗಳು ಒಣ ಹವೆಯಿಂದ ತತ್ತರಿಸಲಿವೆ. ಅಟ್ಲಾಂಟಿಕ್‌ನಲ್ಲಿ ಚಂಡಮಾರುತದ ಚಟುವಟಿಕೆ ಕುಗ್ಗಿದರೂ, ಪೆಸಿಫಿಕ್ ಸಾಗರದಲ್ಲಿ ಮಾತ್ರ ಇದು ವಿನಾಶಕಾರಿ ಸ್ವರೂಪ ಪಡೆಯಲಿದೆ.

ಭಾರತದ ಮೇಲೆ ಹೇಗೆ ಪರಿಣಾಮ ಬೀರಬಹುದು?

ಈ 'ಗಾಡ್ಜಿಲ್ಲಾ' ಎಲ್ ನಿನೋದಿಂದಾಗಿ ಭಾರತವು ಅತಿಹೆಚ್ಚು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಈ ವಿದ್ಯಮಾನವು ಭಾರತದ ಜೀವನಾಡಿ ಮಾನ್ಸೂನ್ ಮಾರುತಗಳನ್ನು ದುರ್ಬಲಗೊಳಿಸಲಿದೆ. ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯಿಂದ ತೇವಾಂಶ ಹೊತ್ತು ತರುವ ಮಾರುತಗಳು ಶಕ್ತಿ ಕಳೆದುಕೊಳ್ಳುವುದರಿಂದ, ಮಳೆ ಕೊರತೆಯಾಗಲಿದೆ. ಉತ್ತರ ಮತ್ತು ಮಧ್ಯ ಭಾರತದಲ್ಲಿ ಹಿಂದೆಂದೂ ಕಾಣದ ಭೀಕರ ಶಾಖದ ಅಲೆಗಳು (Heat waves) ಜನಸಾಮಾನ್ಯರನ್ನು ಹೈರಾಣಾಗಿಸಲಿವೆ.