ಶಾಲೆಯಲ್ಲಿ ಫೇಲ್ ಆದ 12 ವರ್ಷದ ಬಾಲಕಿಯೊಬ್ಬಳು ಸ್ಟ್ರಿಕ್ಟ್ ಅಪ್ಪ-ಅಮ್ಮನಿಗೆ ಭಯಪಟ್ಟು ಮನೆಬಿಟ್ಟು ಹೋಗಿ ಕಾಮುಕರ ಬಲೆಯಲ್ಲಿ ಸಿಲುಕಿದ್ದಾಳೆ. ಈಕೆಯ ದಾರುಣ ಸ್ಟೋರಿ ಕೇಳಿ...
ಶಾಲಾ-ಕಾಲೇಜುಗಳಲ್ಲಿ ಪಡೆಯುವ ಅಂಕವೇ ಸರ್ವಸ್ವ, ಹೆಚ್ಚು ಮಾರ್ಕ್ಸ್ ಪಡೆಯದಿದ್ದರೆ ಜೀವನವೇ ಇಲ್ಲ. ಅಕ್ಕ-ಪಕ್ಕದವರು ಏನಂತಾರೆ? ನಮ್ಮ ಸ್ಟೇಟಸ್ ಗತಿಯೇನು? ಹೆಚ್ಚಿನ ಮಾರ್ಕ್ಸ್ ತರದಿದ್ರೆ ನಮಗೆ ಮುಖ ತೋರಿಸಬೇಡ... ಎನ್ನುವ ಅಪ್ಪ-ಅಮ್ಮ ಅದೆಷ್ಟೋ ಮಂದಿ ಇದ್ದಾರೆ. ತಮ್ಮ ಸ್ಟೇಟಸ್ ಕಾಪಾಡಿಕೊಳ್ಳಲು ಇವರಿಗೆ ಇರುವ ಮಾರ್ಗ ಮಕ್ಕಳ ಅಂಕ. ಶಾಲೆಯ ಪ್ರತಿಷ್ಠೆಗೂ ಮಕ್ಕಳ ಅಂಕವೇ ಬೇಕು, ಅಪ್ಪ-ಅಮ್ಮನ ಪ್ರತಿಷ್ಠೆಗೂ ಮಾರ್ಕ್ಸ್ ಬೇಕು. ಅದು ಹೇಗಾದ್ರೂ ಮಾಡಿಯಾದರೂ ಸರಿ. ಓದಿ ಓದಿ ಬಾಯಿಪಾಠ ಮಾಡಿಯಾದರೂ ಅಂಕ ಬೇಕು, ಬೇರೆ ವಿಷಯಗಳ ತಿಳಿವಳಿಕೆ, ಸಾಮಾನ್ಯ ಜ್ಞಾನ ಏನಿಲ್ಲದಿದ್ದರೂ ಪರವಾಗಿಲ್ಲ, ಶಾಲೆಯಲ್ಲಿ ಅಂಕ ಬೇಕು ಎಂದು ಹಗಲು-ರಾತ್ರಿ ಮಕ್ಕಳ ತಲೆಯಲ್ಲಿ ತುಂಬುವುದೇ ನಮ್ಮ ಶಿಕ್ಷಣ ವ್ಯವಸ್ಥೆ ಆಗಿಹೋಗಿದೆ. ಇಂಥ ಮನಸ್ಥಿತಿ ಇರುವ ಅಪ್ಪ-ಅಮ್ಮನಿಂದಲೇ 12 ವರ್ಷದ ಬಾಲೆ ರೆಡ್ಲೈಟ್ ಏರಿಯಾದ ಸುಳಿಯಲ್ಲಿ ಸಿಲುಕಿರುವ ಕರುಳು ಹಿಂಡುವ ಕಥೆ ಇದು.
ಈ ಬಾಲೆ ಬಾಂಗ್ಲಾದೇಶದವಳು. ಶಾಲೆಯಲ್ಲಿ ಫೇಲ್ ಆಗಿದ್ದಳು. ಅಪ್ಪ-ಅಮ್ಮನಿಗೆ ಅಂಕವೇ ಮುಖ್ಯವಾಗಿದ್ದ ಕಾರಣ, ಮನೆಗೆ ಹೋದರೆ ಅವರಿಂದ ಇನ್ನಿಲ್ಲದ ಹಿಂಸೆ ಅನುಭವಿಸಬೇಕಾಗುತ್ತದೆ ಎಂದು ಹೆದರಿ ಮನೆಬಿಟ್ಟು ಹೋಗಿದ್ದಾಳೆ. ಆದರೆ ಕ್ರೂರ ವಿಧಿ ಆಕೆಯನ್ನು ಬಿಡಲಿಲ್ಲ. ಹೆಂಗಸೊಬ್ಬಳ ಕೈಸೇರಿದ್ದಾಳೆ ಈ ಬಾಲಕಿ. ತಾನು ರಕ್ಷಣೆ ಕೊಡುವುದಾಗಿ ಹೇಳಿದ ಆ ಮಹಿಳೆ ಬಾಲಕಿಯನ್ನು ನೇರವಾಗಿ ಮುಂಬೈಗೆ ಕರೆದುಕೊಂಡು ಬಂದು ರೆಡ್ಲೈಟ್ ಏರಿಯಾದಲ್ಲಿ ಮಾರಿದ್ದಾಳೆ! ಎಕ್ಸೋಡಸ್ ರೋಡ್ ಇಂಡಿಯಾ ಫೌಂಡೇಶನ್ ಮತ್ತು ಹಾರ್ಮನಿ ಫೌಂಡೇಶನ್ ಪೊಲೀಸರ ಸಹಾಯದಿಂದ ಈ ಏರಿಯಾದ ಮೇಲೆ ದಾಳಿ ಮಾಡಿದಾಗ ಬಾಲಕಿ ಸಿಕ್ಕಿದ್ದಾಳೆ.
ಇಲ್ಲಿ ಬಂದು ಮೂರು ತಿಂಗಳಾಗಿದ್ದು, ಇದಾಗಲೇ ಇನ್ನೂರಕ್ಕೂ ಹೆಚ್ಚಿನ ಕಾಮುಕರು ತನ್ನನ್ನು ರೇ*ಪ್ ಮಾಡಿರುವುದಾಗಿ ಬಾಲಕಿ ಹೇಳಿದ್ದಾಳೆ. ಈ ಪ್ರಕರಣದಲ್ಲಿ ಇದುವರೆಗೆ ಹತ್ತು ಜನರನ್ನು ಬಂಧಿಸಲಾಗಿದೆ. ಸದ್ಯ ಬಾಲಕಿಯನ್ನು ರಿಮಾಂಡ್ ಹೋಮ್ನಲ್ಲಿ ಇರಿಸಲಾಗಿದೆ. ನಾನು ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದರಿಂದ ಮನೆಗೆ ಹೋಗಲು ಹೆದರಿದೆ. ನನ್ನ ಅಪ್ಪ-ಅಮ್ಮ ತುಂಬಾ ಸ್ಟ್ರಿಕ್ಟ್. ಫೇಲ್ ಆಗಿದ್ದು, ಅವರಿಗೆ ತಿಳಿದರೆ ಚೆನ್ನಾಗಿ ಹೊಡೆಯುತ್ತಿದ್ದರು. ಅದಕ್ಕೆ ಹೆದರಿ ಮನೆ ಬಿಟ್ಟು ಬಂದೆ. ಆಮೇಲೆ ಏನಾಯಿತು ಎಂದು ನನಗೆ ಗೊತ್ತಿಲ್ಲ. ಆ ಮಹಿಳೆ ಸಿಕ್ಕು ನನ್ನನ್ನು ಎಲ್ಲಿಗೋ ಕರೆದುಕೊಂಡು ಹೋದಳು. ಬಳಿಕ ನನ್ನ ಮೇಲೆ ಹೀಗೆಲ್ಲಾ ನಡೆಯಿತು ಎಂದು ಆಕೆ ಹೇಳಿದ್ದಾಳೆ.
ಉದ್ಯೋಗದ ಆಸೆಗಾಗಿಯೋ ಅಥವಾ ಇನ್ನಾವುದೋ ಆಮಿಷ ಒಡ್ಡಿ ಇಂಥ ಕೃತ್ಯ ಮಾಡುವ ದೊಡ್ಡ ಜಾಲವೇ ಇರುವ ಕಾರಣ, ಕೊನೆಯ ಪಕ್ಷ ಅಪ್ಪ-ಅಮ್ಮ ತಮ್ಮ ಮಕ್ಕಳ ಮೇಲೆ ನಿಗಾ ಇಡುವುದು ತುಂಬಾ ಅವಶ್ಯಕವಾಗಿದೆ. ಕಾರಣ ಚಿಕ್ಕದ್ದೇ ಇರಲಿ, ದೊಡ್ಡದ್ದೇ ಇರಲಿ...ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಲಕರು ನಡೆದುಕೊಳ್ಳಬೇಕು. ಅದರಲ್ಲಿಯೂ ಇಂದಿನ ಹೆಚ್ಚಿನ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುವುದರಿಂದ ಜೀವ ತೆಗೆದುಕೊಳ್ಳಲೂ ಹಿಂಜರಿಯುವುದಿಲ್ಲ, ಈ ರೀತಿ ಮನೆ ಬಿಟ್ಟು ಹೋಗಲೂ ಹಿಂದೆಮುಂದೆ ನೋಡುವುದಿಲ್ಲ. ಆದ್ದರಿಂದ ಪಾಲಕರು ತಮ್ಮ ಜವಾಬ್ದಾರಿ ಅರಿಯಬೇಕಾಗಿದೆ ಎನ್ನುತ್ತಾರೆ ಎಕ್ಸೋಡಸ್ ರೋಡ್ ಇಂಡಿಯಾ ಫೌಂಡೇಶನ್ ಸದಸ್ಯರು.
