ವಿಶ್ವದ ವಿವಿಧ ದೇಶಗಳು ಹೊಸ ತಲೆಮಾರಿನ ಶಸ್ತ್ರಾಸ್ತ್ರಗಳ ಬಳಕೆಗೆ ಮುಂದಾಗುತ್ತಿರುವ ಹೊತ್ತಿನಲ್ಲೇ ಕರ್ನಾಟಕದ ಬೆಳಗಾವಿ ಮೂಲದ ಕಾರ್ಬೈನ್ಸ್‌ ಸಿಸ್ಟಮ್ಸ್‌ ಎಂಬ ಸಂಸ್ಥೆ ಹಾಲಿವುಡ್‌ನ ‘ಸ್ಟಾರ್‌ವಾರ್‌’ ರೀತಿಯ ಲೇಸರ್ ಶಸ್ತ್ರಾಸ್ತ್ರವೊಂದನ್ನು ಅಭಿವೃದ್ಧಿಪಡಿಸಿ, ಯಶಸ್ವಿಯಾಗಿ ಪರೀಕ್ಷಿಸಿದೆ.

ನವದೆಹಲಿ: ವಿಶ್ವದ ವಿವಿಧ ದೇಶಗಳು ಹೊಸ ತಲೆಮಾರಿನ ಶಸ್ತ್ರಾಸ್ತ್ರಗಳ ಬಳಕೆಗೆ ಮುಂದಾಗುತ್ತಿರುವ ಹೊತ್ತಿನಲ್ಲೇ ಕರ್ನಾಟಕದ ಬೆಳಗಾವಿ ಮೂಲದ ಕಾರ್ಬೈನ್ಸ್‌ ಸಿಸ್ಟಮ್ಸ್‌ ಎಂಬ ಸಂಸ್ಥೆ ಹಾಲಿವುಡ್‌ನ ‘ಸ್ಟಾರ್‌ವಾರ್‌’ ರೀತಿಯ ಲೇಸರ್ ಶಸ್ತ್ರಾಸ್ತ್ರವೊಂದನ್ನು ಅಭಿವೃದ್ಧಿಪಡಿಸಿ, ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಮೂಲಕ ಇಂಥ ಶಸ್ತ್ರಾಸ್ತ್ರ ತಯಾರಿಸಿದ ದೇಶದ ಮೊದಲ ಖಾಸಗಿ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಗಿದೆ.

ಬೆಳಗಾವಿಯ ಕಾರ್ಬೈನ್ ಸಿಸ್ಟಮ್ಸ್‌ ಎಂಬ ಬಾಹ್ಯಾಕಾಶ ಮತ್ತು ರಕ್ಷಣಾ ಸ್ಟಾರ್ಟಪ್‌, ಲೇಸರ್‌ ಮೂಲಕವೇ ಗುರಿಯನ್ನು ನಾಶಪಡಿಸಲು ಶಕ್ತವಾಗಿರುವ ಹೈಪರ್ ಆಂಪ್ಲಿಫಿಕೇಶನ್ ರೇಡಿಯಂಟ್ ಅರೇ (ಹರಾ ಎಂಕೆ-1) ಎಂಬ ಶಸ್ತ್ರಾಸ್ತ್ರವನ್ನು ಯಶಸ್ವಿಯಾಗಿ ಒಳಾಂಗಣದಲ್ಲಿ ಪರೀಕ್ಷಿಸಿದೆ. ಕಾರ್ಬೈನ್ ಸಿಸ್ಟಮ್ಸ್‌ ಕಂಪನಿಯನ್ನು ಬೆಳಗಾವಿಯವರಾದ ಗಿರೀಶ್‌ ಜೋಶಿ ಮತ್ತು ಕೇದಾರ್‌ ಜೋಶಿ ಸಹೋದರರು 2023ರಲ್ಲಿ ಸ್ಥಾಪಿಸಿದ್ದರು.

ಏನಿದು ಹರಾ ಎಂಕೆ-1?:

ಟೇಬಲ್‌ ಒಂದರ ಮೇಲಿಡಬಹುದಾದ ಈ ಉಪಕರಣವನ್ನು 10 ಕಿಲೋವ್ಯಾಟ್‌ ಸಾಮರ್ಥ್ಯದ ಲೇಸರ್‌ ಲೈಟ್‌ ಹೊರಹೊಮ್ಮುವಂತೆ ಸಿದ್ಧಪಡಿಸಲಾಗಿದೆ. ಸಣ್ಣಸಣ್ಣ ಲೇಸರ್‌ ಕಿರಣಗಳನ್ನು ಕೂಡಿಸಿ ಸೃಷ್ಟಿಯಾಗುವ ಪ್ರಬಲ ಬೀಮ್‌, ಉಷ್ಣವನ್ನು ಸೃಷ್ಟಿಸುವ ಮೂಲಕ ಯಾವುದೇ ಗುಂಡುಗಳ ಬಳಕೆಯಿಲ್ಲದೆ ತನ್ನ ಗುರಿ ನಾಶಪಡಿಸುತ್ತದೆ. ಈ ತಂತ್ರಜ್ಞಾನವನ್ನು ಬಳಸಿ 1-2 ಕಿ.ಮೀ. ದೂರದಲ್ಲಿರುವ ಡ್ರೋನ್‌, ಕ್ಷಿಪಣಿಗಳನ್ನೂ ಧ್ವಂಸ ಮಾಡಬಹುದು.

ಸರ್ಕಾರದ ನೆರವೇ ಇಲ್ಲದೆ ಕಾರ್ಬೈನ್ ನಿರ್ಮಿಸಿದೆ

ಸಾಮಾನ್ಯವಾಗಿ ಇಂತಹ ಆಧುನಿಕ ಯಂತ್ರೋಪಕರಣಗಳನ್ನು ದೊಡ್ಡ ಕಂಪನಿಗಳು ಅಥವಾ ಡಿಆರ್‌ಡಿಒ ನಿರ್ಮಿಸುತ್ತದೆ. ಆದರೆ ಲೇಸರ್‌ನಂತಹ ಅತ್ಯಾಧುನಿಕ ಅಸ್ತ್ರವನ್ನು ಸರ್ಕಾರದ ನೆರವೇ ಇಲ್ಲದೆ ಕಾರ್ಬೈನ್ ನಿರ್ಮಿಸಿದೆ. ಮೇಕ್‌ ಇನ್‌ ಇಂಡಿಯಾಗೆ ಇನ್ನಷ್ಟು ಬಲ ತುಂಬುವ ಈ ಶಸ್ತ್ರಾಸ್ತ್ರಕ್ಕೆ ಹರಾ ಎಂಬ ಶಿವನ ಹೆಸರನ್ನು ಇಡಲಾಗಿದ್ದು, ‘ವಿನಾಶಕಾರಿ’ ಎಂಬರ್ಥವನ್ನು ನೀಡುತ್ತದೆ.