ಡಿಡಿಆರ್ ರಾಮ್ ಬೆಲೆ ಏರಿಕೆ ಮತ್ತು ಇಂಟೆಲ್ ಪ್ರೊಸೆಸರ್‌ಗಳ ಕೊರತೆಯಿಂದಾಗಿ ಕಂಪ್ಯೂಟರ್ ಹಾಗೂ ಲ್ಯಾಪ್ಟಾಪ್‌ಗಳ ಬೆಲೆ ಗಣನೀಯವಾಗಿ ಹೆಚ್ಚಾಗಲಿದೆ. ಈ ಬೆಲೆ ಏರಿಕೆಯು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಗ್ರಾಹಕರ ಮೇಲೆ ದೊಡ್ಡ ಹೊರೆ ಉಂಟುಮಾಡಲಿದ್ದು, ಭಾರತದಲ್ಲಿ ಪಿಸಿ ಮಾರಾಟ ಕುಸಿಯುವ ಸಾಧ್ಯತೆಯಿದೆ.

ನವದೆಹಲಿ (ಮಾ.11): ತಂತ್ರಜ್ಞಾನ ಪ್ರಿಯರಿಗೂ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಡಿಡಿಆರ್ ರಾಮ್‌ (DDR RAM) ಬೆಲೆ ಗಗನಕ್ಕೇರಿರುವುದು ಮತ್ತು ಇಂಟೆಲ್‌ನ ಎಂಟ್ರಿ ಲೆವೆಲ್ ಪ್ರೊಸೆಸರ್‌ಗಳ ಕೊರತೆಯಿಂದಾಗಿ ಕಂಪ್ಯೂಟರ್ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿವೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ. ಮಾರುಕಟ್ಟೆ ಟ್ರ್ಯಾಕರ್ಗಳಾದ IDC ಮತ್ತು ಕೌಂಟರ್‌ಪಾಯಿಂಟ್ ಪ್ರಕಾರ, 2025ರಲ್ಲಿ ಭಾರತದಲ್ಲಿ ಪಿಸಿ (PC) ಶಿಪ್‌ಮೆಂಟ್‌ಗಳು ಸಾರ್ವಕಾಲಿಕ ದಾಖಲೆ ಬರೆದಿದ್ದವು. ಮೊದಲ ಬಾರಿಗೆ ವಾರ್ಷಿಕ 1.5 ಕೋಟಿಗೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿದ್ದವು (15.9 ಮಿಲಿಯನ್). ಆದರೆ ಈ ವರ್ಷ ಬೆಲೆ ಏರಿಕೆಯ ಕಾರಣದಿಂದಾಗಿ ಮಾರಾಟ ಪ್ರಮಾಣವು ಶೇ. 8 ರಷ್ಟು ಕುಸಿಯುವ ಸಾಧ್ಯತೆಯಿದೆ.

Add Asianetnews Kannada as a Preferred SourcegooglePreferred

IDC ಇಂಡಿಯಾದ ಹಿರಿಯ ಮಾರುಕಟ್ಟೆ ವಿಶ್ಲೇಷಕ ಭರತ್ ಶೆಣೈ ಅವರ ಪ್ರಕಾರ RAM ಬೆಲೆ 2.5 ರಿಂದ 3 ಪಟ್ಟು ಹೆಚ್ಚಾಗಿದ್ದು, ಇದರಿಂದ ಲ್ಯಾಪ್ಟಾಪ್ ಬೆಲೆ ಶೇ. 10-12 ರಷ್ಟು ಏರಿಕೆಯಾಗಿದೆ. ಮಾರ್ಚ್ ತಿಂಗಳಲ್ಲಿ ಮತ್ತೊಂದು ಶೇ. 8-10 ರಷ್ಟು ಏರಿಕೆ ನಿರೀಕ್ಷಿತ ಎಂದು ಹೇಳಿದ್ದಾರೆ. ಅದರೊಂದಿಗೆ ಮುಂದಿನ ಕೆಲವು ತಿಂಗಳು ಇನ್ನೂ ಶೇ. 10 ರಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಈ ಹಿಂದೆ ₹30,000–₹35,000 ಕ್ಕೆ ಸಿಗುತ್ತಿದ್ದ ಲ್ಯಾಪ್‌ಟಾಪ್‌ಗಳು ಈಗ ₹45,000 ಗಡಿ ದಾಟಿವೆ. ಇದು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಗ್ರಾಹಕರಿಗೆ ದೊಡ್ಡ ಹೊಡೆತ ನೀಡಲಿದೆ.

ಹಾರ್ಮುಜ್ ಜಲಸಂಧಿ ಸಂಘರ್ಷದ ಎಫೆಕ್ಟ್

ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ವ್ಯತ್ಯಯವು ಇಂಧನ ಮತ್ತು ಪೆಟ್ರೋಕೆಮಿಕಲ್ ಮಾರ್ಗಗಳ ಮೇಲೆ ಪ್ರಭಾವ ಬೀರಿದೆ. ಇದು ಪರೋಕ್ಷವಾಗಿ ಸೆಮಿಕಂಡಕ್ಟರ್ ತಯಾರಿಕಾ ವೆಚ್ಚವನ್ನು ಹೆಚ್ಚಿಸಲಿದ್ದು, ಬಿಡಿಭಾಗಗಳ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಬೆಲೆ ಏರಿಕೆಗೆ ಪ್ರಮುಖ ಕಾರಣವೇನು?

ಕೌಂಟರ್‌ಪಾಯಿಂಟ್ ರಿಸರ್ಚ್‌ನ ಹಿರಿಯ ವಿಶ್ಲೇಷಕಿ ಅಂಶಿಕಾ ಜೈನ್ ಅವರ ಪ್ರಕಾರ, ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ, ಮೆಮೊರಿ ಚಿಪ್‌ಗಳ ಪೂರೈಕೆಯು ಆ ಕಡೆಗೆ ತಿರುಗಿದೆ. ಇದರಿಂದ DRAM ಮತ್ತು NAND ಬೆಲೆಗಳು ಗಗನಕ್ಕೇರಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದ ವ್ಯತ್ಯಾಸ ಮತ್ತು ಹಣದುಬ್ಬರ ದರ ಏರಿಕೆಗೂ ಕಾರಣವಾಗಿದೆ. ಇನ್ನು ಮಧ್ಯಪ್ರಾಚ್ಯದ ಯುದ್ಧದ ವಾತಾವರಣವು ಪೂರೈಕೆ ಜಾಲವನ್ನು ಭಾರೀ ಪ್ರಮಾಣದಲ್ಲಿ ಹದಗೆಡಿಸಿದೆ.

ಗ್ರಾಹಕರ ಮತ್ತು ಕಂಪನಿಗಳ ನಡೆ

ಬೆಲೆ ಏರಿಕೆಯಿಂದ ತಪ್ಪಿಸಿಕೊಳ್ಳಲು ಅನೇಕ ಉದ್ಯಮಗಳು ಮತ್ತು ಸಣ್ಣ ಕಂಪನಿಗಳು ಈಗಲೇ ಮುಂಗಡವಾಗಿ ಖರೀದಿ ಮಾಡುತ್ತಿವೆ. ಬೆಲೆಗಳು 2027ರ ದ್ವಿತೀಯಾರ್ಧದವರೆಗೂ ಇಳಿಕೆಯಾಗುವ ಲಕ್ಷಣಗಳಿಲ್ಲ ಎನ್ನಲಾಗಿದ. ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಕೈಲಾಶ್ ಲಖಿಯಾನಿ ಪ್ರಕಾರ "ನವೆಂಬರ್‌ನಿಂದ ಪ್ರತಿ ತಿಂಗಳು ಬೆಲೆಗಳು ಹೆಚ್ಚಾಗುತ್ತಿವೆ. ಅಸೆಂಬಲ್ ಮಾಡಿದ ಕಂಪ್ಯೂಟರ್‌ಗಳ ಬೆಲೆ ಈಗ ಮುಗಿಲು ಮುಟ್ಟಿದೆ. ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಬಿಡಿಭಾಗಗಳನ್ನು ಹೆಚ್ಚಿನ ಬೆಲೆಗೆ ಮಾರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು" ಎಂದಿದ್ದಾರೆ.