ನಕ್ಷತ್ರ ತೇಗಿದ ಕಪ್ಪುರಂಧ್ರ: ನುಂಗುಬಾಕನಿಗೆ ಯಾವ ಲೆಕ್ಕ ಭೂಮಿ, ಚಂದ್ರ?
ಇಡೀ ನಕ್ಷತ್ರ ನುಂಗಿ ನೀರು ಕುಡಿದ ದುಷ್ಟ ಕಪ್ಪುರಂಧ್ರ| ವಿಶ್ವಕ್ಕೆ ವಿನಾಶದ ಸಂದೇಶ ಕಳುಹಿಸುವ ಕಪ್ಪುರಂಧ್ರಗಳು| ಭಯಾನಕ ದೃಶ್ಯ ಸರೆ ಹಿಡಿದ ನಾಸಾದ ಟ್ರಾನ್ಸಿಟ್ಟಿಂಗ್ ಎಕ್ಸೋಪ್ಲ್ಯಾನೆಟ್ ಸರ್ವೆ ಸ್ಯಾಟಲೈಟ್| ನಕ್ಷತ್ರ ನುಂಗುತ್ತಿರುವ ಕಪ್ಪುರಂಧ್ರದ ವಿಡಿಯೋ ಸೆರೆ ಹಿಡಿದ TESS| ಭೂಮಿಯಿಂದ 375 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿ ಘಟಿಸಿದ ಖಗೋಳ ವಿದ್ಯಮಾನ|
ವಾಷಿಂಗ್ಟನ್(ಸೆ.30): ವಿಶ್ವಕ್ಕೆ ವಿನಾಶದ ಸಂದೇಶ ಕಳುಹಿಸುವ ಕಪ್ಪುರಂಧ್ರಗಳ ಅಬ್ಬರ ಜೋರಾಗಿದೆ. ಇತ್ತೀಚಿಗಷ್ಟೇ ಕಪ್ಪುರಂಧ್ರಗಳ ಇರುವಿಕೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿದ್ದ ಖಗೋಳ ವಿಜ್ಞಾನಿಗಳು, ಇದೀಗ ನಕ್ಷತ್ರವೊಂದನ್ನು ಮುಲಾಜಿಲ್ಲದೇ ನುಂಗಿದ ಕಪ್ಪುರಂಧ್ರದ ವಿಡಿಯೋ ಸೆರೆ ಹಿಡಿದಿದ್ದಾರೆ.
ನಾಸಾದ ಟ್ರಾನ್ಸಿಟ್ಟಿಂಗ್ ಎಕ್ಸೋಪ್ಲ್ಯಾನೆಟ್ ಸರ್ವೆ ಸ್ಯಾಟಲೈಟ್(TESS) ಕಪ್ಪುರಂಧ್ರದ ರುದ್ರ ಭಯಂಕರ ವರ್ತನೆಯನ್ನು ಸೆರೆ ಹಿಡಿದಿದ್ದು, ನಮ್ಮ ಸೂರ್ಯನಷ್ಟು ಗಾತ್ರದ ನಕ್ಷತ್ರವೊಂದನ್ನು ಇಡೀಯಾಗಿ ನುಂಗುತ್ತಿರುವ ದೃಶ್ಯ ಸೆರೆ ಹಿಡಿಯಲಾಗಿದೆ.
ಭೂಮಿಯಿಂದ ಸುಮಾರು 375 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿ ಈ ಅಪರೂಪದ ಖಗೋಳ ವಿದ್ಯಮಾನ ಘಟಿಸಿದ್ದು, ಕಪ್ಪುರಂಧ್ರದ ಸುಳಿಗೆ ಸಿಕ್ಕ ನಕ್ಷತ್ರ ಸಂಪೂರ್ಣವಾಗಿ ಕರಗಿ ಅನಿಲ ರೂಪದಲ್ಲಿ ಅದೇ ಕಪ್ಪು ರಂಧ್ರವನ್ನು ಸುತ್ತುವರೆದಿದೆ.