ವಾಷಿಂಗ್ಟನ್(ಆ.23): ಪರಗ್ರಹ ಜೀವಿಗಳ ಅಸ್ತಿತ್ವದ ಕುರಿತು ಶತ ಶತಮಾನಗಳಿಂದ ಮಾನವ ಚರ್ಚೆ ನಡೆಸುತ್ತಲೇ ಬಂದಿದ್ದಾನೆ. ಆದರೆ ಪರಗ್ರಹ ಜೀವಿಗಳಿರಬಹುದಾದ ಯಾವುದೇ ಕುರುಹು ಕೂಡ ಇದುವರೆಗೂ ನಮಗೆ ದೊರೆತಿಲ್ಲ.

ವೈಜ್ಞಾನಿಕ ಅಭಿವೃದ್ಧಿಯಿಂದ ಬ್ರಹ್ಮಾಂಡವನ್ನು ಸೀಳುತ್ತಿರುವ ಆಧುನಿಕ ಮಾನವ, ಪರಗ್ರಹ ಜೀವಿಗಳ ಅಸ್ತಿತ್ವವನ್ನೂ ಕಂಡುಹಿಡಿಯುವಲ್ಲಿ ಯಶಸ್ವಿಯಾದರೆ ಆಶ್ವರ್ಯವಿಲ್ಲ.

ಅದರಂತೆ ವಿಶ್ವದ ನಿರ್ದಿಷ್ಟ ಪ್ರದೇಶವೊಂದರಿಂದ ಖಗೋಳ ವಿಜ್ಞಾನಿಗಳು ವಿಚಿತ್ರವಾದ ಶಬ್ದವೊಂದನ್ನು ಸ್ವೀಕರಿಸಿದ್ದು, ಇದುವರೆಗೂ ಒಟ್ಟು 8 ಬಾರಿ ಈ ಶಬ್ಧವನ್ನು ಟೆಲಿಸ್ಕೋಪ್’ಗಳು ಸೆರೆ ಹಿಡಿದಿವೆ.

ಈ ವಿಚಿತ್ರ ಶಬ್ಧ ಎಲ್ಲಿಂದ ಬರುತ್ತಿದೆ ಮತ್ತು ಈ ಶಬ್ಧ ಏಕೆ ಬರುತ್ತಿದೆ ಎಂಬುದರ ಕುರಿತು ವಿಜ್ಞಾನಿಗಳಲ್ಲಿ ಇದುವರೆಗೂ ಯಾವುದೇ ನಿಖರ ಮಾಹಿತಿ ಇಲ್ಲ.

ಅತೀ ವೇಗದ ರೇಡಿಯೋ ಬರ್ಸ್ಟ್ ಸಿಗ್ನಲ್’ಗಳು ಬರುತ್ತಿದ್ದು, ಈ ಸಿಗ್ನಲ್’ಗಳನ್ನು ಕೆನಡಿಯನ್ ಹೈಡ್ರೋಜನ್ ಇಂಟೆನ್ಸಿಟಿ ಮ್ಯಾಪಿಂಗ್ ಎಕ್ಸಪರೆಮೆಂಟ್ ಟೆಲಿಸ್ಕೋಪ್ ಸೆರೆಹಿಡಿದಿದೆ.

ಇದರ ವಿವರವನ್ನು ದಿ ಕಾರ್ನೆಲ್ ವಿವಿಯ ಜರ್ನಲ್’ನಲ್ಲಿ ಪ್ರಕಟಿಸಲಾಗಿದ್ದು, ಇದು ಕಪ್ಪುರಂಧ್ರದ ಶಬ್ಧವೋ ಅಥವಾ ಪರಗ್ರಹ ಜೀವಿಗಳು ಕಳುಹಿಸುತ್ತಿರುವ ಸಿಗ್ನಲ್ ಇರಬಹುದಾ ಎಂಬುದರ ಕುರಿತು ವಿಜ್ಞಾನಿಗಳಲ್ಲಿ ಚರ್ಚೆ ನಡೆಯುತ್ತಿದೆ.

ಕೇವಲ ಮಿಲಿ ಸೆಕೆಂಡ್ ಅವಧಿಯಷ್ಟು ಸೆರೆಯಾಗಿರುವ ಈ ಶಬ್ಧ ಭಾರೀ ಶಕ್ತಿಯನ್ನು ಹೊರ ಸೂಸುತ್ತಿದ್ದು, ಇಷ್ಟು ಪ್ರಮಾಣದ ಶಕ್ತಿಯನ್ನು ಕೇವಲ ಕಪ್ಪುರಂಧ್ರ ಮಾತ್ರ ಬಿಡುಗಡೆ ಮಾಡುತ್ತದೆ ಎಂಬುದು ಕೆಲವು ಸಂಶೋಧಕರ ವಾದವಾಗಿದೆ.