Poland robot wild boars: ಮನುಷ್ಯರಂತೆ ನಡೆಯುವ ರೋಬೋಟ್ ಕಂಡು ಹಂದಿಗಳ ಹಿಂಡು ದಿಕ್ಕಾಪಾಲಾಗಿ ಓಡುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ವನ್ಯಪ್ರಾಣಿಗಳನ್ನು ಓಡಿಸಲು ಬಂದಿರುವ ಈ ಹೊಸ 'ಹೈಟೆಕ್' ರಕ್ಷಕನ ಕಥೆ ಇಲ್ಲಿದೆ.

ತ್ತೀಚಿನ ದಿನಗಳಲ್ಲಿ ಅರಣ್ಯಗಳಲ್ಲಿ ಆಹಾರ ಮತ್ತು ನೀರಿನ ಕೊರತೆಯಿಂದಾಗಿ ವನ್ಯಪ್ರಾಣಿಗಳು ನಾಡಿಗೆ ನುಗ್ಗುವುದು ಸಾಮಾನ್ಯವಾಗಿದೆ. ಇದು ಕೇವಲ ಗ್ರಾಮೀಣ ಭಾಗಕ್ಕೆ ಸೀಮಿತವಾಗದೆ, ನಗರ ಪ್ರದೇಶಗಳಿಗೂ ವಿಸ್ತರಿಸುತ್ತಿದ್ದು, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದೆ. ಇಂತಹ ವನ್ಯಪ್ರಾಣಿಗಳನ್ನು ಮಾನವ ಸಂಘರ್ಷವಿಲ್ಲದೆ ಓಡಿಸಲು ಪೋಲೆಂಡ್ ದೇಶವು ಅತ್ಯಂತ ಆಧುನಿಕ ಹಾಗೂ ವಿಶಿಷ್ಟವಾದ 'ಹೈಟೆಕ್' ಪ್ಲಾನ್ ಒಂದನ್ನು ರೂಪಿಸಿ ಯಶಸ್ವಿಯಾಗಿದೆ.

ಏನಿದು ಹೈಟೆಕ್ ಪ್ಲಾನ್?

ಪೋಲೆಂಡ್‌ನ ಗಡಿನಿಯಾದಂತಹ ಕರಾವಳಿ ನಗರಗಳಲ್ಲಿ ಇತ್ತೀಚೆಗೆ ಕಾಡು ಹಂದಿಗಳ ಉಪಟಳ ಮಿತಿಮೀರಿತ್ತು. ಆಹಾರದ ಹುಡುಕಾಟದಲ್ಲಿ ಈ ಹಂದಿಗಳು ಜನನಿಬಿಡ ಪ್ರದೇಶಗಳು, ಪಾರ್ಕ್‌ಗಳು ಮತ್ತು ರಸ್ತೆಗಳಿಗೆ ಲಗ್ಗೆ ಇಡುತ್ತಿದ್ದವು. ಇದರಿಂದ ಜನರು ಮನೆಯಿಂದ ಹೊರಬರಲು ಹೆದರುವಂತಾಗಿತ್ತು. ಈ ಸಮಸ್ಯೆಯನ್ನು ಹೋಗಲಾಡಿಸಲು ಅಲ್ಲಿನ ಅಧಿಕಾರಿಗಳು 'ಎಡ್ವರ್ಡ್' ಎಂಬ ಹೆಸರಿನ ಹ್ಯೂಮನಾಯ್ಡ್ (ಮಾನವ ರೂಪದ) ರೋಬೋಟ್ ಅನ್ನು ರಂಗಕ್ಕಿಳಿಸಿದ್ದಾರೆ.

ಕೆಲಸ ಮಾಡಿದ್ದು ಹೇಗೆ?
ಎಡ್ವರ್ಡ್ ರೋಬೋಟ್ ಮನುಷ್ಯನಂತೆ ಎರಡು ಕಾಲುಗಳ ಮೇಲೆ ನಡೆಯುವ ವಿನ್ಯಾಸವನ್ನು ಹೊಂದಿದೆ. ರಸ್ತೆ ಬದಿಯಲ್ಲಿ ಹಂದಿಗಳ ಹಿಂಡು ಕಾಣಿಸಿಕೊಂಡಾಗ, ಅಧಿಕಾರಿಗಳು ಈ ರೋಬೋಟ್ ಅನ್ನು ಅವುಗಳತ್ತ ಕಳುಹಿಸಿದರು. ಮನುಷ್ಯನಂತೆಯೇ ಕಾಣುವ ಆದರೆ ವಿಚಿತ್ರವಾಗಿ ಚಲಿಸುವ ಈ ಯಂತ್ರವನ್ನು ಕಂಡ ಕಾಡು ಹಂದಿಗಳು ದಿಕ್ಕಾಪಾಲಾಗಿ ಓಡಿವೆ. ರೋಬೋಟ್ ಬೆನ್ನಟ್ಟಿದ ಕೂಡಲೇ ಹಂದಿಗಳು ಎಲ್ಲಿಯೂ ನಿಲ್ಲದೆ ಕಾಡಿನತ್ತ ಮುಖ ಮಾಡಿವೆ.

ವೈರಲ್ ಆಗಿರುವ ವಿಡಿಯೋ

ರೋಬೋಟ್ ಹಂದಿಗಳನ್ನು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. "ತಂತ್ರಜ್ಞಾನ ಎಂದರೆ ಹೀಗಿರಬೇಕು" ಎಂದು ನೆಟ್ಟಿಗರು ಪೋಲೆಂಡ್ ಅಧಿಕಾರಿಗಳನ್ನು ಶ್ಲಾಘಿಸುತ್ತಿದ್ದಾರೆ. ಪ್ರಾಣಿಗಳಿಗೆ ಯಾವುದೇ ರೀತಿಯ ದೈಹಿಕ ಹಾನಿ ಮಾಡದೆ ಮತ್ತು ಮನುಷ್ಯರು ಅಪಾಯಕ್ಕೆ ಸಿಲುಕದೆ ಅವುಗಳನ್ನು ಓಡಿಸಲು ಇದು ಅತ್ಯುತ್ತಮ ಮಾರ್ಗ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರಯೋಗವು ಅತ್ಯಂತ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವನ್ಯಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಪೋಲೆಂಡ್ ಸರ್ಕಾರವು ಇನ್ನೂ ಹೆಚ್ಚಿನ 'ಎಡ್ವರ್ಡ್' ಮಾದರಿಯ ರೋಬೋಟ್‌ಗಳನ್ನು ಬಳಸಲು ನಿರ್ಧರಿಸಿದೆ. ಭಾರತದಂತಹ ದೇಶಗಳಲ್ಲೂ ಆನೆ ಅಥವಾ ಚಿರತೆಗಳು ಜನವಸತಿ ಪ್ರದೇಶಕ್ಕೆ ಬಂದಾಗ ಇಂತಹ ತಂತ್ರಜ್ಞಾನ ಬಳಕೆಯಾದರೆ ಸಾವು-ನೋವುಗಳನ್ನು ತಪ್ಪಿಸಬಹುದು ಎಂಬುದು ಅನೇಕರ ಆಶಯವಾಗಿದೆ.

ಪೋಲೆಂಡ್ ಈಗ ಕೇವಲ ಹಂದಿಗಳಿಗೆ ಮಾತ್ರವಲ್ಲದೆ, ನಗರಕ್ಕೆ ನುಗ್ಗುವ ಇತರ ಕಾಡು ಪ್ರಾಣಿಗಳಿಗೂ (ಜಿಂಕೆ, ನರಿ ಇತ್ಯಾದಿ) ಇದೇ ಮಾದರಿಯ ರೋಬೋಟ್‌ಗಳನ್ನು ಬಳಸಲು ಪ್ಲಾನ್ ಮಾಡುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅಳವಡಿಸಿದರೆ, ಈ ರೋಬೋಟ್‌ಗಳು ತಾವಾಗಿಯೇ ಪ್ರಾಣಿಗಳನ್ನು ಪತ್ತೆ ಹಚ್ಚಿ ಮರಳಿ ಕಾಡಿಗೆ ಓಡಿಸಬಲ್ಲವು.

ಇಲ್ಲಿದೆ ನೋಡಿ ವಿಡಿಯೋ

Scroll to load tweet…

ಜಪಾನ್‌ನಲ್ಲಿದೆ ರಾಕ್ಷಸ ತೋಳ
ಜಪಾನ್ ದೇಶವು ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲು ಕಂಡುಕೊಂಡಿರುವ ಉಪಾಯ ಪೋಲೆಂಡ್‌ಗಿಂತಲೂ ಒಂದು ಹೆಜ್ಜೆ ಮುಂದೆ ಇದೆ ಎಂದು ಹೇಳಬಹುದು. ಅಲ್ಲಿನ ರೈತರು ಮತ್ತು ಅಧಿಕಾರಿಗಳು "ಮಾನ್‌ಸ್ಟರ್ ವುಲ್ಫ್" (Monster Wolf) ಎಂಬ ವಿಚಿತ್ರ ಮತ್ತು ಭಯಾನಕ ರೋಬೋಟ್ ಅನ್ನು ಬಳಸುತ್ತಿದ್ದಾರೆ. ಇದು ನಿಜವಾದ ತೋಳದ ಗಾತ್ರದಲ್ಲೇ ಇರುತ್ತದೆ. ಇದಕ್ಕೆ ದಟ್ಟವಾದ ಕೃತಕ ತುಪ್ಪಳ (Fur), ದೊಡ್ಡ ಹಲ್ಲುಗಳು ಮತ್ತು ಕೆಂಪಾಗಿ ಹೊಳೆಯುವ LED ಕಣ್ಣುಗಳನ್ನು ಅಳವಡಿಸಲಾಗಿದೆ. ಇದು ನೋಡಲು ಸಾಧಾರಣ ರೋಬೋಟ್‌ನಂತೆ ಕಾಣದೆ, ಒಂದು ರಾಕ್ಷಸ ತೋಳದಂತೆ ಕಾಣುತ್ತದೆ.

ಈ ರೋಬೋಟ್‌ನಲ್ಲಿ ಸೆನ್ಸಾರ್‌ಗಳಿದ್ದು, ಪ್ರಾಣಿಗಳು ಹತ್ತಿರ ಬರುತ್ತಿದ್ದಂತೆ ಅವುಗಳನ್ನು ಪತ್ತೆ ಮಾಡುತ್ತದೆ. ಪ್ರಾಣಿಗಳು ಹತ್ತಿರ ಬಂದ ಕೂಡಲೇ ಇದು ತೋಳದಂತೆ ಊಳಿಡುತ್ತದೆ (Howling), ಮನುಷ್ಯರಂತೆ ಕಿರುಚುತ್ತದೆ ಅಥವಾ ಗುಂಡು ಹಾರಿಸಿದಂತಹ ಸುಮಾರು 60 ಕ್ಕೂ ಹೆಚ್ಚು ಬಗೆಯ ವಿಭಿನ್ನ ಶಬ್ದಗಳನ್ನು ಹೊರಹಾಕುತ್ತದೆ.

ಇದರ ತಲೆ ಆಕಡೆ ಈಕಡೆ ತಿರುಗುತ್ತದೆ ಮತ್ತು ಕಣ್ಣುಗಳು ಕೆಂಪಾಗಿ ಮಿಂಚುತ್ತವೆ. ಕತ್ತಲೆಯಲ್ಲಿ ಇದನ್ನು ನೋಡಿದ ಯಾವುದೇ ಪ್ರಾಣಿ ಭಯಬಿದ್ದು ಓಡಿಹೋಗುತ್ತದೆ.