ಐಫೋನ್ ಮತ್ತು ಆ್ಯಪಲ್ ವಾಚ್‌ಗಳಲ್ಲಿ ಪೇಟೆಂಟ್ ನಿಯಮ ಉಲ್ಲಂಘಿಸಿ ತಂತ್ರಜ್ಞಾನ ಬಳಸಿದ ಆರೋಪದಡಿ ಆ್ಯಪಲ್ ಕಂಪನಿಗೆ ಅಮೆರಿಕದ ನ್ಯಾಯಾಲಯ 54,000 ಕೋಟಿ ರೂ. ದಂಡ ವಿಧಿಸಿದೆ. ಟ್ಯಾಕ್ಷನ್ ಟೆಕ್ನಾಲಜಿ ಕಂಪನಿಯು ಹೂಡಿದ್ದ ಈ ಮೊಕದ್ದಮೆಯಲ್ಲಿ ಜ್ಯೂರಿ ಒಮ್ಮತದ ತೀರ್ಪು ನೀಡಿದೆ. ಆದರೆ ಆ್ಯಪಲ್ ಈ ತೀರ್ಪನ್ನು ವಿರೋಧಿಸಿದ್ದು, ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದೆ.
ನವದೆಹಲಿ/ವಾಷಿಂಗ್ಟನ್: ಐಫೋನ್‌ಗಳು ಮತ್ತು ಆ್ಯಪಲ್ ವಾಚ್‌ಗಳಲ್ಲಿ (Apple Watches) ಬಳಸುವ ಟ್ಯಾಪಿಂಗ್ ಅಥವಾ ಸ್ಪರ್ಶ ಅನುಭವ ನೀಡುವ ತಂತ್ರಜ್ಞಾನವು ಪೇಟೆಂಟ್ (ಹಕ್ಕುಸ್ವಾಮ್ಯ) ನಿಯಮಗಳನ್ನು ಉಲ್ಲಂಘಿಸಿದೆ ಎಂದು ತೀರ್ಪು ನೀಡಿರುವ ಅಮೆರಿಕದ ಫೆಡರಲ್ ನ್ಯಾಯಾಲಯವು, ತಂತ್ರಜ್ಞಾನ ದಿಗ್ಗಜ ಆ್ಯಪಲ್ ಕಂಪನಿಗೆ ಬರೋಬ್ಬರಿ 54,000 ಕೋಟಿ ರೂ. ($5.7 ಬಿಲಿಯನ್) ದಂಡ ವಿಧಿಸಿದೆ. ಅಮೆರಿಕದ ಇತಿಹಾಸದಲ್ಲೇ ಇಂತಹ ಪ್ರಕರಣದಲ್ಲಿ ವಿಧಿಸಲಾದ ಅತಿ ದೊಡ್ಡ ಮೊತ್ತದ ದಂಡ ಇದಾಗಿದೆ.
ಸ್ಯಾನ್ ಡಿಯಾಗೋ ಮೂಲದ 'ಟ್ಯಾಕ್ಷನ್ ಟೆಕ್ನಾಲಜಿ' (Taction Technology) ಎನ್ನುವ ಕಂಪನಿಯು, ಐಫೋನ್ ಸಂಸ್ಥೆಯು ತಮ್ಮ ಕಂಪನಿಯ ಪೇಟೆಂಟ್ ವೈಬ್ರೇಶನ್ ತಂತ್ರಜ್ಞಾನವನ್ನು (Vibration Technology) ಅನುಮತಿಯಿಲ್ಲದೆ ಫೋನ್ ಮತ್ತು ವಾಚ್‌ಗಳ 'Taptic Engine' ನಲ್ಲಿ ಬಳಸಿಕೊಂಡಿದೆ ಎಂದು ಆರೋಪಿಸಿ 2021ರಲ್ಲಿ ಮೊಕದ್ದಮೆ ಹೂಡಿತ್ತು.
ಪ್ರಕರಣದ ಹಿನ್ನೆಲೆ:
2023ರಲ್ಲಿ ಕೆಳಹಂತದ ಫೆಡರಲ್ ನ್ಯಾಯಾಲಯವು ಆ್ಯಪಲ್ ಪರವಾಗಿ ತೀರ್ಪು ನೀಡಿ ದೂರು ವಜಾಗೊಳಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಟ್ಯಾಕ್ಷನ್ ಟೆಕ್ನಾಲಜಿ ಕಂಪನಿಯು ಮೇಲ್ಮನವಿ ಸಲ್ಲಿಸಿದ್ದು, ನಂತರ ಫೆಡರಲ್ ಸರ್ಕ್ಯೂಟ್ ಈ ಪ್ರಕರಣವನ್ನು ಮರುಪರಿಶೀಲನೆಗೆ ಒಳಪಡಿಸಿತ್ತು.
ಸೆಪ್ಟೆಂಬರ್ 14ರಂದು ಆರಂಭವಾದ ವಿಚಾರಣೆಯಲ್ಲಿ, ಆ್ಯಪಲ್‌ನ 'Taptic Engine' (ಇದು ಐಫೋನ್ ಮತ್ತು ವಾಚ್‌ಗಳಲ್ಲಿ ಸ್ಪರ್ಶ ಅನುಭವ, ವೈಬ್ರೇಶನ್ ಹಾಗೂ ಹೃದಯದ ಬಡಿತದ ಸಿಮ್ಯುಲೇಶನ್ ನೀಡುತ್ತದೆ) ಟ್ಯಾಕ್ಷನ್ ಕಂಪನಿಯ ಎರಡು ಪೇಟೆಂಟ್‌ಗಳನ್ನು (Nos. 10,659,885 ಮತ್ತು 10,820,117) ಉಲ್ಲಂಘಿಸಿದೆ ಎಂದು 7 ಮಂದಿಯ ಜ್ಯೂರಿ ಒಮ್ಮತದ ತೀರ್ಪು ನೀಡಿದೆ. ಆದರೆ ಆ್ಯಪಲ್ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿಲ್ಲ ಎಂದೂ ನ್ಯಾಯಾಲಯ ತಿಳಿಸಿದೆ. ಇನ್ನು ಈಗಾಗಲೇ ಇರುವ ಐಫೋನ್ ಹಾಗೂ ವಾಚ್‌ನಲ್ಲಿನ ಸೌಲಭ್ಯ ಕಡಿತಗೊಳ್ಳುತ್ತದೆಯೇ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ.
ಆ್ಯಪಲ್ ಪ್ರತಿಕ್ರಿಯೆ ಏನು?
ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿರುವ ಆ್ಯಪಲ್ ಕಂಪನಿಯು, 'ಜ್ಯೂರಿಯ ಪರಿಗಣನೆಗೆ ಧನ್ಯವಾದಗಳು, ಆದರೆ ಇಂದಿನ ತೀರ್ಪು ಮತ್ತು ವಿಧಿಸಿರುವ ದಂಡದ ಮೊತ್ತವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಇದು ವಾಸ್ತವ ಸಂಗತಿಗಳಿಗೆ ವಿರುದ್ಧವಾಗಿದೆ. ನಮ್ಮ 'Taptic Engine' ತಂತ್ರಜ್ಞಾನವು ಟ್ಯಾಕ್ಷನ್ ತಂತ್ರಜ್ಞಾನಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ನಾವು ಇದರ ವಿರುದ್ಧ ಮೇಲ್ಮನವಿ (Appeal) ಸಲ್ಲಿಸುತ್ತೇವೆ' ಎಂದು ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ಟ್ಯಾಕ್ಷನ್ ಕಂಪನಿಯ ಪರ ವಕೀಲ ಲ್ಯಾನ್ಸ್ ಯಾಂಗ್ ಮಾತನಾಡಿ, 'ನಾವು ಈ ಪ್ರಕರಣದ ನ್ಯಾಯಕ್ಕಾಗಿ ಐದುವರೆ ವರ್ಷ ಕಾಯಬೇಕಾಯಿತು. ಜ್ಯೂರಿ ನಮ್ಮ ಪರವಾಗಿ ತೀರ್ಪು ನೀಡಿರುವುದು ಸಂತಸ ತಂದಿದೆ' ಎಂದಿದ್ದಾರೆ. ಸದ್ಯ ಈ ಪ್ರಕರಣವು ಮೇಲ್ಮನವಿ ಹಂತಕ್ಕೆ ತಲುಪಿದ್ದು, ಎಲ್ಲರ ಕಣ್ಣು ಆ್ಯಪಲ್‌ನ ಮುಂದಿನ ಕಾನೂನು ಹೋರಾಟದ ಮೇಲಿದೆ.


