*ಸಣ್ಣ ವ್ಯಾಪಾರಿಗಳಿಂದ ಸರ್ಕಾರಿ ಇಲಾಖೆಗಳಿಗೆ ಸರಕು ಖರೀದಿ*ಒಂದೇ ವರ್ಷ ಲಕ್ಷ ಕೋಟಿ ರು. ದಾಖಲೆ: ಮೋದಿ ಶ್ಲಾಘನೆ
ನವದೆಹಲಿ (ಮಾ. 25): ಕೇಂದ್ರ ಸರ್ಕಾರದ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಬೇಕಾದ ವಸ್ತುಗಳನ್ನು ದೇಶದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಗಾತ್ರದ ಉದ್ದಿಮೆಗಳಿಂದ ಖರೀದಿಸುವುದಕ್ಕೆಂದು ಸ್ಥಾಪಿಸಲಾದ ಗವರ್ನ್‌ಮೆಂಟ್ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ-ಜೆಮ್) ವೆಬ್‌ಸೈಟ್ ಒಂದು ವರ್ಷದಲ್ಲಿ ಲಕ್ಷ ಕೋಟಿ ರು. ವಹಿವಾಟು ನಡೆಸಿ ದಾಖಲೆ ಬರೆದಿದೆ. 2016ರಲ್ಲಿ ಜಿಇಎಂ ಸ್ಥಾಪನೆಯಾದ ನಂತರ ಒಂದು ವರ್ಷದಲ್ಲಿ ನಡೆಸಿದ ಅತಿಹೆಚ್ಚು ವಹಿವಾಟು ಇದಾಗಿದೆ. ಜೆಮ್‌ನ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಒಂದೇ ವರ್ಷದಲ್ಲಿ ಜೆಮ್ 1 ಲಕ್ಷ ಕೋಟಿ ರು. ಮೊತ್ತದ ಆರ್ಡರ್ ಪಡೆದಿದೆ ಎಂಬುದನ್ನು ಕೇಳಿ ಖುಷಿಯಾಯಿತು! ಕಳೆದ ವರ್ಷಗಳಿಗಿಂತ ಇದು ಗಣನೀಯ ಪ್ರಮಾಣದ ಏರಿಕೆ. ವಿಶೇಷವಾಗಿ ದೇಶದ ಎಂಎಸ್‌ಎಂಇ ಕ್ಷೇತ್ರವನ್ನು ಸಬಲೀಕರಣಗೊಳಿಸಲು ಸ್ಥಾಪಿಸಿದ ವೇದಿಕೆ ಜೆಮ್ ಆಗಿದೆ. ಇಲ್ಲಿಗೆ ಶೇ.57% ಸರಕುಗಳು ಎಂಎಸ್‌ಎಂಇಯಿಂದ ಬಂದಿವೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಸಚಿವಾಲಯಗಳು, ಕೇಂದ್ರ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳು ಪ್ರತಿ ವರ್ಷ ತಮಗೆ ಬೇಕಾದ ಲಕ್ಷಾಂತರ ಕೋಟಿ ರು. ಮೊತ್ತದ ವಸ್ತುಗಳನ್ನು ಎಲ್ಲೆಲ್ಲಿಂದಲೋ ಖರೀದಿಸುವ ಬದಲು ನಮ್ಮ ದೇಶದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿಂದಲೇ ಖರೀದಿಸಬೇಕು ಎಂದು 2016ರಲ್ಲಿ ಕೇಂದ್ರ ಸರ್ಕಾರ ನಿಯಮ ಜಾರಿಗೊಳಿಸಿತ್ತು.
ಇದನ್ನೂ ಓದಿ:Goods Export Target: ಭಾರತದ ಹೊಸ ಮೈಲಿಗಲ್ಲು; ನಿಗದಿತ ಅವಧಿಗೂ ಮುನ್ನ 400 ಬಿಲಿಯನ್ ಡಾಲರ್ ಗುರಿ ಸಾಧನೆ
ಅದರಂತೆ ಎಂಎಸ್‌ಎಂಇಗಳು ತಮ್ಮ ಉತ್ಪನ್ನಗಳನ್ನು ಸರ್ಕಾರಕ್ಕೆ ಮಾರಲೆಂದೇ ಜಿಇಎಂ ಎಂಬ ವೆಬ್‌ಸೈಟನ್ನು ಕೂಡ ಆರಂಭಿಸಿತ್ತು. ಅದರಲ್ಲಿ 2021-22ನೇ ಸಾಲಿನಲ್ಲಿ ದಾಖಲೆಯ 1 ಲಕ್ಷ ಕೋಟಿ ರು. ವ್ಯವಹಾರ ನಡೆದಿದೆ. ಈ ವೆಬ್‌ಸೈಟಿನಲ್ಲಿ ಸರ್ಕಾರಿ ಸಂಸ್ಥೆಗಳು ಆನ್‌ಲೈನ್ ಮೂಲಕ ಕರೆಯುವ ಟೆಂಡರ್‌ಗೆ ದೇಸಿ ಉತ್ಪಾದಕರು ಬಿಡ್ ಸಲ್ಲಿಕೆ ಮಾಡದಿದ್ದರೆ ಮಾತ್ರ ಇದರ ಹೊರಗೆ ವಸ್ತುಗಳನ್ನು ಖರೀದಿಸಬಹುದಾಗಿದೆ.
508% ಬೆಳವಣಿಗೆ: ಸುದ್ದಿಗಾರರೊಂದಿಗೆ ಮಾತನಾಡಿದ ಜಿಇಎಂ ಸಿಇಒ ಪ್ರಶಾಂತ್ ಕುಮಾರ್ ಸಿಂಗ್, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿಪಿಎಸ್‌ಇ) ಜಿಇಎಂನಲ್ಲಿ ಸುಮಾರು ₹ 43,000 ಕೋಟಿ ಮೌಲ್ಯದ ಸರಕು ಮತ್ತು ಸೇವೆಗಳನ್ನು ಸಂಗ್ರಹಿಸಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಅಂದಾಜು 508% ಬೆಳವಣಿಗೆಯನ್ನು ತೋರಿಸಿದೆ. ಒಟ್ಟು ಜಿಎಂವಿಗೆ ಸುಮಾರು 30% ಕೊಡುಗೆಯೊಂದಿಗೆ ರಾಜ್ಯಗಳು ಪ್ರಮುಖ ಪಾಲುದಾರರಾಗಿ ಮುಂದುವರೆದಿದೆ ಎಂದು ಹೇಳಿದರು.
ರಕ್ಷಣಾ ಸಚಿವಾಲಯವು ಜಿಇಎಂನಲ್ಲಿ ಅತ್ಯಧಿಕ ಸಂಪಾದನೆದಾರರಾಗಿದ್ದರೆ, ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು) ವೇದಿಕೆಯಲ್ಲಿ ಒಟ್ಟು ಸಂಗ್ರಹಣೆಯಲ್ಲಿ ಸುಮಾರು 25% ರಷ್ಟಿದೆ ಎಂದು ಅವರು ತಿಳಿಸಿದರು. ಅಲ್ಲದೇ ಮಾರ್ಕೆಟ್‌ಪ್ಲೇಸ್ ಮತ್ತು ಇಂಡಿಯಾ ಪೋಸ್ಟ್‌ನ ಏಕೀಕರಣವು ಮುಂದುವರಿದ ಹಂತದಲ್ಲಿದೆ ಮತ್ತು ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಿಂಗ್ ತಿಳಿಸಿದರು.
ಇದನ್ನೂ ಓದಿ:ಲಕ್ಷ್ಯ ಸೆನ್ ಸಾಧನೆಗೆ ಅಭಿನಂದನೆಗಳ ಸುರಿಮಳೆ, ಪ್ರಧಾನಿ ಮೋದಿಯಿಂದ ಶ್ಲಾಘನೆ
“ಜಿಇಎಂ ಮೂಲಕ ಕಾಮಗಾರಿಗಳ ಖರೀದಿಯನ್ನು ಕಡ್ಡಾಯಗೊಳಿಸುವುದು ಚರ್ಚೆಯಲ್ಲಿದೆ ಮತ್ತು ಸರ್ಕಾರವು ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ನಾವು ಅದನ್ನು ಕೆಲಸಗಳಿಗೆ ಮತ್ತು ಎಲ್ಲಾ ವಲಯಗಳು ಮತ್ತು ಸಚಿವಾಲಯಗಳಿಗೆ ತೆರೆಯಲು ಸಿದ್ಧರಾಗಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕ ಸಂಗ್ರಹಣೆ ಪ್ರಕ್ರಿಯೆಯಲ್ಲಿ ಹೆಚ್ಚು ಪಾರದರ್ಶಕತೆಯನ್ನು ತರಲು ಜಿಇಎಂ ಮಹತ್ವದ ಬಗ್ಗೆ ತಿಳಿಸಿದ ಸಿಂಗ್, ಈ ಹಿಂದೆ ಪ್ರತಿಯೊಂದು ಇಲಾಖೆಯು ವಿಭಿನ್ನ ಸಂಗ್ರಹಣೆ ನಿಯಮಗಳನ್ನು ಹೊಂದಿತ್ತು ಮತ್ತು ವಿವಿಧ ಇಲಾಖೆಗಳಿಂದ ವ್ಯಾಖ್ಯಾನವೂ ವಿಭಿನ್ನವಾಗಿತ್ತು ಇದು ಭ್ರಷ್ಟಾಚಾರಕ್ಕೆ ಕಾರಣವಾಗಿತ್ತು. ಆದರೆ ಪಾರದರ್ಶಕತೆ, ಭ್ರಷ್ಟಾಚಾರದ ವ್ಯಾಪ್ತಿಯನ್ನು ಕಡಿಮೆ ಮಾಡುವುದರ ಮೂಲಕ ಜಿಇಎಂ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ ಎಂದು ಹೇಳಿದ್ದಾರೆ
