ಲಕ್ಷ್ಯ ಸೆನ್ ಸಾಧನೆಗೆ ಅಭಿನಂದನೆಗಳ ಸುರಿಮಳೆ, ಪ್ರಧಾನಿ ಮೋದಿಯಿಂದ ಶ್ಲಾಘನೆ

* ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿ ರನ್ನರ್‌ ಅಪ್ ಸ್ಥಾನ ಪಡೆದಿದ್ದ ಲಕ್ಷ್ಯ ಸೆನ್

* ಅದ್ಭುತ ಪ್ರದರ್ಶನ ತೋರುತ್ತಿರುವ 20 ವರ್ಷದ ಯುವ ಶಟ್ಲರ್

* ಪ್ರಧಾನಿ ಮೋದಿ, ಸಚಿನ್ ತೆಂಡುಲ್ಕರ್ ಸೇರಿದಂತೆ ಗಣ್ಯರಿಂದ ಲಕ್ಷ್ಯ ಸೆನ್‌ಗೆ ಅಭಿನಂದನೆ

PM Narendra Modi hails Lakshya Sen's spirited fight after loss in All England Badminton Championships final kvn

ಬರ್ಮಿಂಗ್‌ಹ್ಯಾಮ್‌(ಮಾ.22): ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (All England Badminton Championships) ಅಭೂತಪೂರ್ವ ಪ್ರದರ್ಶನ ನೀಡಿ ರನ್ನರ್‌-ಅಪ್‌ ಪಟ್ಟ ಅಲಂಕರಿಸಿದ ಭಾರತದ ಯುವ ಶಟ್ಲರ್‌ ಲಕ್ಷ್ಯ ಸೆನ್‌ರನ್ನು (Lakshya Sen) ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಕೊಂಡಾಡಿದ್ದಾರೆ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರಿದ್ದ ಲಕ್ಷ್ಯ ಭಾನುವಾರ ಫೈನಲ್‌ನಲ್ಲಿ ವಿಶ್ವ ನಂ.1, ಡೆನ್ಮಾರ್ಕ್ನ ವಿಕ್ಟರ್‌ ಆಕ್ಸೆಲ್ಸೆನ್‌ ವಿರುದ್ಧ ಪರಾಭವಗೊಂಡರು. ಆದರೆ 21 ವರ್ಷಗಳ ಬಳಿಕ ಪ್ರತಿಷ್ಠಿತ ಟೂರ್ನಿಯ ಫೈನಲ್‌ಗೇರಿದ್ದ ಭಾರತದ ಪುರುಷ ಶಟ್ಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸೆನ್‌ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಗಣ್ಯರು, ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

4 ತಿಂಗಳಲ್ಲಿ 4 ಟೂರ್ನಿಗಳಲ್ಲಿ ಪದಕ !

ಕಳೆದ 4 ತಿಂಗಳಲ್ಲಿ 4 ಪ್ರತಿಷ್ಠಿತ ಟೂರ್ನಿಗಳಲ್ಲಿ ಪದಕ ಗೆದ್ದಿರುವ ಲಕ್ಷ್ಯ ಇತ್ತೀಚೆಗಷ್ಟೇ ವಿಶ್ವ ಶ್ರೇಯಾಂಕದಲ್ಲಿ ವೃತ್ತಿಬದುಕಿನ ಶ್ರೇಷ್ಠ 11ನೇ ಸ್ಥಾನಕ್ಕೇರಿದ್ದಾರೆ. ನೂತನವಾಗಿ ಪ್ರಕಟಗೊಳ್ಳಲಿರುವ ಪಟ್ಟಿಯಲ್ಲಿ ಅವರು ಅಗ್ರ 10ರೊಳಗೆ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕಳೆದ ಡಿಸೆಂಬರ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ಕಂಚು ಗೆದ್ದಿದ್ದ ಸೆನ್‌, ಜನವರಿಯಲ್ಲಿ ಇಂಡಿಯಾ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದರು. ಜರ್ಮನ್‌ ಓಪನ್‌ ಹಾಗೂ ಆಲ್‌ ಇಂಗ್ಲೆಂಡ್‌ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

‘ಪ್ರೀತಿಯ ಸೆನ್‌, ನಿಮ್ಮ ಬಗ್ಗೆ ಹೆಮ್ಮೆಯಿದೆ. ಟೂರ್ನಿಯಲ್ಲಿ ನೀವು ತೋರಿದ ದೃಢತೆ ಮತ್ತ ನಿಮ್ಮ ಹೋರಾಟದ ಪ್ರದರ್ಶನ ಶ್ಲಾಘನಾರ್ಹ. ನೀವು ಇನ್ನೂ ಎತ್ತರಕ್ಕೆ ಏರುತ್ತೀರಿ ಎಂಬ ಭರವಸೆ ಇದೆ. ನಿಮ್ಮ ಭವಿಷ್ಯ ಉಜ್ವಲವಾಗಿರಲಿ’ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಟ್ವೀಟ್‌ ಮಾಡಿದ್ದಾರೆ.

ಅಲ್ಲದೇ, ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮಹೀಂದ್ರಾ ಸಮೂಹದ ಮುಖ್ಯಸ್ಥ ಆನಂದ್‌ ಮಹೀಂದ್ರಾ, ಸಚಿನ್‌ ತೆಂಡುಲ್ಕರ್‌, ಅಭಿನವ್‌ ಬಿಂದ್ರಾ, ಸೇರಿ ನೂರಾರು ಮಂದಿ ಸೆನ್‌ ಸಾಧನೆಯನ್ನು ಹಾಡಿ ಹೊಗಳಿದ್ದಾರೆ.

ಈ ವರ್ಷ ಘಟಾನುಘಟಿಗಳ ವಿರುದ್ಧ ಜಯಿಸಿರುವ ಲಕ್ಷ್ಯ!

ಕಳೆದ ಕೆಲ ತಿಂಗಳುಗಳಲ್ಲಿ ಲಕ್ಷ್ಯ ವಿಶ್ವದ ಘಟಾನುಘಟಿ ಆಟಗಾರರಿಗೆ ಆಘಾತ ನೀಡಿ ಗಮನ ಸೆಳೆದಿದ್ದಾರೆ. 2021ರ ಒಲಿಂಪಿಕ್ಸ್‌ ಕಂಚು ವಿಜೇತ ಆ್ಯಂಥೋನಿ ಜಿಂಟಿಂಗ್‌ಗೆ ಜರ್ಮನ್‌ ಓಪನ್‌ ಪ್ರಿ ಕ್ವಾರ್ಟರ್‌ನಲ್ಲಿ ಸೋಲುಣಿಸಿದ್ದ ಸೆನ್‌, ಸೆಮಿಫೈನಲ್‌ನಲ್ಲಿ 2021ರ ಒಲಿಂಪಿಕ್ಸ್‌ ಚಾಂಪಿಯನ್‌ ವಿಕ್ಟರ್‌ ಆಕ್ಸೆಲ್ಸೆನ್‌ಗೆ ಆಘಾತ ನೀಡಿದ್ದರು. ಬಳಿಕ 2021ರ ವಿಶ್ವ ಚಾಂಪಿಯನ್‌ ಲೊ ಕೀನ್‌ ಯೆವ್‌ ವಿರುದ್ಧ ಇಂಡಿಯಾ ಓಪನ್‌ ಫೈನಲ್‌ನಲ್ಲಿ ಗೆದ್ದು ಚಾಂಪಿಯನ್‌ ಆಗಿದ್ದರು. ಆಲ್‌ ಇಂಗ್ಲೆಂಡ್‌ ಟೂರ್ನಿಯಲ್ಲಿ ಸೆನ್‌, ಪ್ರಿ ಕ್ವಾರ್ಟರ್‌ನಲ್ಲಿ 2021ರ ವಿಶ್ವ ಕಂಚು ವಿಜೇತ ಆ್ಯಂಡೆ​ರ್ಸ್‌ ಆ್ಯಂಟೋನ್ಸೆನ್‌ ಹಾಗೂ ಸೆಮಿಫೈನಲ್‌ನಲ್ಲಿ 2021ರ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌, ಮಲೇಷ್ಯಾದ ಝಿ ಜಿಯಾಗೆ ಸೋಲುಣಿಸಿದ್ದರು. ಅವರು ಈ ವರ್ಷ ಆಡಿರುವ 13 ಪಂದ್ಯಗಳಲ್ಲಿ 11ರಲ್ಲಿ ಜಯ ಸಾಧಿಸಿದ್ದಾರೆ.

ಸ್ವಿಸ್‌ ಓಪನ್‌ ಆಡದಿರಲು ನಿರ್ಧಾರ

ಈ ವರ್ಷ ಸತತ ಟೂರ್ನಿಗಳನ್ನು ಆಡಿ ದಣಿದಿರುವ 20 ವರ್ಷದ ಲಕ್ಷ್ಯ, ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ‘ಕಳೆದೆರಡು ವಾರಗಳಲ್ಲಿ ಜರ್ಮನ್‌ ಓಪನ್‌ ಹಾಗೂ ಆಲ್‌ ಇಂಗ್ಲೆಂಡ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಸೆನ್‌ ಸ್ವಿಸ್‌ ಓಪನ್‌ನಲ್ಲಿ ಆಡಲ್ಲ. ಬೆಂಗಳೂರಿನಲ್ಲಿ 7-10 ದಿನಗಳ ಕಾಲ ವಿಶ್ರಾಂತಿ ಪಡೆದು ಬಳಿಕ ಕೊರಿಯನ್‌ ಓಪನ್‌ನಲ್ಲಿ ಸ್ಪರ್ಧಿಸಲಿದ್ದಾರೆ’ ಎಂದು ಸೆನ್‌ ಅವರ ಮಾರ್ಗದರ್ಶಕ ವಿಮಲ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಪ್ರೀತಿ, ಬೆಂಬಲಕ್ಕೆ ಧನ್ಯವಾದ

ಅಲ್ಮೋರಾದಿಂದ ಆಲ್‌ ಇಂಗ್ಲೆಂಡ್‌ ವರೆಗಿನ ಸುದೀರ್ಘ ಪಯಣ ರೋಚಕ ಅನುಭವ ನೀಡಿದೆ. ನನಗೆ ಅಭಿಮಾನಿಗಳಿಂದ ಸಿಗುತ್ತಿರುವ ಪ್ರೀತಿ, ಬೆಂಬಲ ಬಹಳ ಖುಷಿ ನೀಡುತ್ತಿದ್ದು ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಭಾರತವನ್ನು ಪ್ರತಿನಿಧಿಸುವುದು ನನ್ನ ಕನಸು. ಕನಸು ಈಡೇರಿದೆ. ಪ್ರತಿ ಬಾರಿಯೂ ಅಂಕಣದಲ್ಲಿ ಶೇ.100ರಷ್ಟುಪರಿಶ್ರಮದಿಂದ ಆಡುತ್ತೇನೆ. - ಲಕ್ಷ್ಯ ಸೆನ್‌
 

Latest Videos
Follow Us:
Download App:
  • android
  • ios