*ನಿಗದಿತ ವೇಳಾಪಟ್ಟಿಗಿಂತ 9 ದಿನ ಮುನ್ನ ರಫ್ತು ಗುರಿ ತಲುಪಿದ ಭಾರತ*ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ*ರೈತರು, ನೇಕಾರರು, ಉತ್ಪಾದಕರು ಹಾಗೂ ರಫ್ತುದಾರರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ
ನವದೆಹಲಿ (ಮಾ.23): ಭಾರತ (India) ಇದೇ ಮೊದಲ ಬಾರಿಗೆ 400 ಬಿಲಿಯನ್ ಡಾಲರ್ (Dollar) ಸರಕು ರಫ್ತಿನ ( goods exports) ಗುರಿಯನ್ನು ಮಾ.23ರಂದು ನಿಗದಿತ ವೇಳಾಪಟ್ಟಿಗಿಂತ 9 ದಿನ ಮುಂಚಿತವಾಗಿ ತಲುಪಿದ ಸಾಧನೆ ಮಾಡಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಟ್ವೀಟ್ (Tweet) ಮಾಡೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಯಶಸ್ಸಿಗೆ ನೆರವಾದ ರೈತರು, ನೇಕಾರರು, ಎಂಎಸ್ಎಂಇಎಸ್, ಉತ್ಪಾದಕರು, ರಫ್ತುದಾರರನ್ನು ಅಭಿನಂದಿಸಿದ್ದಾರೆ.
'ಭಾರತವು ಸರಕು ರಫ್ತಿಗೆ ಮಹತ್ವಾಕಾಂಕ್ಷೆಯ ಗುರಿ ನಿಗದಿಪಡಿಸಿಕೊಂಡಿತ್ತು ಹಾಗೂ ಇದೇ ಮೊದಲ ಬಾರಿಗೆ ಈ ಗುರಿ ತಲುಪಿದೆ. ಈ ಯಶಸ್ಸಿಗೆ ಕಾರಣೀಕರ್ತರಾದ ರೈತರು, ನೇಕಾರರು, ಎಂಎಸ್ಎಂಇಎಸ್, ಉತ್ಪಾದಕರು, ರಫ್ತುದಾರರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಆತ್ಮನಿರ್ಭರ ಭಾರತ ಪ್ರಯಾಣದಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ (ಮಾ.23) ಟ್ವೀಟ್ ಮಾಡಿದ್ದಾರೆ.
ಮಹಿಳೆಯರಿಗೆ ಗುಡ್‌ನ್ಯೂಸ್: ನಯಾಪೈಸೆ ಖರ್ಚು ಮಾಡ್ದೇ ಪಡೆಯಿರಿ ಹೊಲಿಗೆ ಮೆಷಿನ್
ಏಷ್ಯಾದ (Asia) ಮೂರನೇ ಅತೀದೊಡ್ಡ ಆರ್ಥಿಕತೆಯಾದ ಭಾರತ 2022ನೇ ಹಣಕಾಸು ಸಾಲಿಗೆ ಈ ಮಹತ್ವಾಕಾಂಕ್ಷೆಯ ರಫ್ತಿನ ಗುರಿಯನ್ನು ನಿಗದಿಪಡಿಸಿತ್ತು. ಏಪ್ರಿಲ್- ಡಿಸೆಂಬರ್ ಅವಧಿಯಲ್ಲಿ 300 ಬಿಲಿಯನ್ ಡಾಲರ್ ರಫ್ತು ವಹಿವಾಟು ನಡೆದಿತ್ತು. 2020-21ನೇ ಹಣಕಾಸು ಸಾಲಿನಲ್ಲಿ ಭಾರತ 292 ಬಿಲಿಯನ್ ಡಾಲರ್ ರಫ್ತು ವಹಿವಾಟು ನಡೆಸಿತ್ತು. 2021-22ನೇ ಹಣಕಾಸು ಸಾಲಿನಲ್ಲಿ ರಫ್ತು ವಹಿವಾಟಿನಲ್ಲಿ ಶೇ.37ರಷ್ಟು ಹೆಚ್ಚಳ ಕಂಡುಬಂದಿದ್ದು, 400 ಬಿಲಿಯನ್ ಡಾಲರ್ ರಫ್ತು ನಡೆಸಿದೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿದೆ. ಅಲ್ಲದೆ, ಈ ರಫ್ತು ವಹಿವಾಟು ಭಾರತದ ಪಾಲಿಗೆ ಹೊಸ ಮೈಲಿಗಲ್ಲಾಗಿದ್ದು, ಬೆಳವಣಿಗೆ ಹೊಂದುತ್ತಿರೋ ಆರ್ಥಿಕತೆಗೆ ಕನ್ನಡಿ ಹಿಡಿದಿದೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಜೊತೆಗೆ ಕೆಲವು ಗ್ರಾಫಿಕ್ಸ್ ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿನ ಒಂದು ಗ್ರಾಫಿಕ್ಸ್ ಪ್ರಕಾರ ಭಾರತ ಇದೇ ಮೊದಲ ಬಾರಿಗೆ 400 ಬಿಲಿಯನ್ ಡಾಲರ್ ರಫ್ತಿನ ಗುರಿಯನ್ನು ತಲುಪಿದೆ ಎಂಬ ಮಾಹಿತಿಯಿದೆ. ಇದರ ಜೊತೆಗೆ ಭಾರತ ತಲುಪಿರೋ ಹಾದಿಯನ್ನು ಅವಲೋಕಿಸಿದರೆ, ಪ್ರತಿ ತಿಂಗಳು ಸರಾಸರಿ 33 ಬಿಲಿಯನ್ ಡಾಲರ್, ಪ್ರತಿದಿನ 1ಬಿಲಿಯನ್ ಡಾಲರ್ ಹಾಗೂ ಪ್ರತಿ ಗಂಟೆಗೆ 46 ಮಿಲಿಯನ್ ಡಾಲರ್ ರಫ್ತು ವಹಿವಾಟು ನಡೆದಿದೆ ಎಂಬ ಮಾಹಿತಿಯಿದೆ. ಹಾಗೆಯೇ ಇನ್ನೊಂದು ಗ್ರಾಫಿಕ್ಸ್ ನಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಉದ್ಯಮಿಗಳೊಂದಿಗೆ ಆತ್ಮೀಯ ಸಮಾಲೋಚನೆ ನಡೆಸೋ ಸರ್ಕಾರದ ಕ್ರಮ, ರಫ್ತುದಾರರೊಂದಿಗೆ ಸರ್ಕಾರ ಉತ್ತಮ ಸಂಪರ್ಕವಿಟ್ಟುಕೊಳ್ಳುವ ಮೂಲಕ ಸಮಸ್ಯೆಗಳ ಶೀಘ್ರ ಇತ್ಯರ್ಥ ಹಾಗೂ ರಫ್ತು ಉತ್ತೇಜನ ಮಂಡಳಿ, ಕೈಗಾರಿಕಾ ಸಮಿತಿಗಳು ಹಾಗೂ ಇತರ ಪಾಲುದಾರರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂಬ ಮಾಹಿತಿಯಿದೆ.
ದೇಶದ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಲಿಕ್ವಿಡಿಟಿ; ಹಣಕಾಸು ನೀತಿ ಬಿಗಿಗೊಳಿಸೋ ಯೋಚನೆಯಿಲ್ಲ: RBI Governor
2021-22ನೇ ಹಣಕಾಸು ಸಾಲಿನಲ್ಲಿ ಭಾರತ ಸರಕು ರಫ್ತಿನ ಗುರಿ ತಲುಪಲಿದೆ ಎಂಬ ಬಗ್ಗೆ ಈ ಹಿಂದೆಯೇ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ (Union Commerce and Industry Minister) ಪಿಯೂಷ್ ಗೋಯಲ್ (Piyush Goyal) ಸುಳಿವು ನೀಡಿದ್ದರು. ಮಾ.14ರ ತನಕ ಭಾರತದ ಸರಕು ರಫ್ತು 390 ಬಿಲಿಯನ್ ಡಾಲರ್ ತಲುಪಿದೆ. ಪ್ರಸಕ್ತ ಹಣಕಾಸು ಸಾಲಿನ ಕೊನೆಯ ದಿನವಾದ ಮಾ.31ರೊಳಗೆ ಭಾರತ ಖಂಡಿತವಾಗಿಯೂ 400 ಬಿಲಿಯನ್ ಡಾಲರ್ ಗುರಿಯನ್ನು ಮೀರಲಿದೆ ಎಂದು ಎಸಿಎಂಎ (ACMA) ಕೆಲವು ದಿನಗಳ ಹಿಂದೆ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವಾಗ ಗೋಯಲ್ ತಿಳಿಸಿದ್ದರು.
