ಇನ್‌ಸ್ಟಾಗ್ರಾಮ್ ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾದ ಆ್ಯಪ್ ಎಂದು ಎಲೋನ್ ಮಸ್ಕ್ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೂಡ ಇದೇ ರೀತಿಯ ಕಾಮೆಂಟ್ ಮಾಡಿದ್ದ ಮಸ್ಕ್ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಅ.2): ಸಾಮಾಜಿಕ ಜಾಲತಾಣಗಳ ದೈತ್ಯ 'ಎಕ್ಸ್' (ಟ್ವಿಟರ್) ಮಾಲೀಕ ಎಲೋನ್ ಮಸ್ಕ್, ಇನ್‌ಸ್ಟಾಗ್ರಾಮ್ (Instagram) ಆ್ಯಪ್ ಕುರಿತು ನೀಡಿರುವ ಹೇಳಿಕೆಯೊಂದು ಇದೀಗ ಇಂಟರ್ನೆಟ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಇನ್‌ಸ್ಟಾಗ್ರಾಮ್ ಎನ್ನುವುದು ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾದ ಪ್ಲಾಟ್‌ಫಾರ್ಮ್ ಎಂಬಂತೆ ಮಸ್ಕ್ ನೀಡಿರುವ ಹೇಳಿಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

'ಗೈಗರ್ ಕ್ಯಾಪಿಟಲ್' (Geiger Capital) ಎಂಬ ಎಕ್ಸ್ ಯೂಸರ್‌ವೊಬ್ಬರು ಇನ್‌ಸ್ಟಾಗ್ರಾಮ್ ಆ್ಯಪ್ ಡಿಲೀಟ್ ಮಾಡಿದ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. "ಅಧಿಕೃತವಾಗಿ ಇನ್‌ಸ್ಟಾಗ್ರಾಮ್ ಡಿಲೀಟ್ ಮಾಡಿದ್ದೇನೆ. ಅದೊಂದು ಮೂಲತಃ ಮಹಿಳೆಯರಿಗಾಗಿ ಇರುವ ಆ್ಯಪ್. ಅದರಿಂದ ಯಾವುದೇ ಪ್ರಯೋಜನವಿಲ್ಲ" ಎಂದು ಆ ಯೂಸರ್ ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ತಕ್ಷಣವೇ ಪ್ರತಿಕ್ರಿಯಿಸಿದ ಎಲೋನ್ ಮಸ್ಕ್, "ಇನ್‌ಸ್ಟಾಗ್ರಾಮ್ ಇರುವುದು ಹುಡುಗಿಯರಿಗೆ ಮಾತ್ರ" (Instagram is for girls) ಎಂದು ಕಾಮೆಂಟ್ ಮಾಡಿದ್ದಾರೆ.

ಮೇ ತಿಂಗಳಿನಲ್ಲೂ ಇದೇ ರೀತಿಯ ಹೇಳಿಕೆ ನೀಡಿದ್ದ ಮಸ್ಕ್!

ಎಲೋನ್ ಮಸ್ಕ್ ಈ ರೀತಿ ಇನ್‌ಸ್ಟಾಗ್ರಾಮ್ ಬಗ್ಗೆ ವ್ಯಂಗ್ಯವಾಡಿರುವುದು ಇದೇ ಮೊದಲೇನಲ್ಲ. ಮೇ ತಿಂಗಳಿನಲ್ಲೂ ಸೋಶಿಯಲ್ ಮೀಡಿಯಾ ಅಭ್ಯಾಸಗಳು ಹಾಗೂ ಆನ್‌ಲೈನ್ ಟ್ರೆಂಡ್‌ಗಳ ಕುರಿತ ವೈರಲ್ ಚರ್ಚೆಯೊಂದರಲ್ಲಿ ಮಸ್ಕ್ ಇದೇ ರೀತಿಯ ಹೇಳಿಕೆ ನೀಡಿದ್ದರು.

ಜನರ ಆನ್‌ಲೈನ್ ನಡವಳಿಕೆಗಳು ಅವರ ಜೀವನದ ವಿವಿಧ ಹಂತಗಳನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂಬ ಚರ್ಚೆಯ ಆ ಪೋಸ್ಟ್‌ನಲ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ದಿನವಿಡೀ 'ಸ್ಟೋರಿ'ಗಳನ್ನು ಹಾಕುವುದು, ಸ್ವತಃ ತಯಾರಿಸಿದ ಅಡುಗೆಯ ಫೋಟೋಗಳನ್ನು ಹಂಚಿಕೊಳ್ಳುವುದು ಹಾಗೂ ಆಕರ್ಷಕ ಫೋಟೋಗಳನ್ನು (Thirst Traps) ಪೋಸ್ಟ್ ಮಾಡುವ ಪ್ರವೃತ್ತಿಗಳನ್ನು ಉಲ್ಲೇಖಿಸಲಾಗಿತ್ತು. ಆ ವೇಳೆ ಪ್ರತಿಕ್ರಿಯಿಸಿದ್ದ ಮಸ್ಕ್, "ಇನ್‌ಸ್ಟಾಗ್ರಾಮ್ ಎನ್ನುವುದು ಹುಡುಗಿಯರಿಗಾಗಿ ಮಾತ್ರ" ಎಂದು ಬರೆದಿದ್ದರಲ್ಲದೆ, ತಮಗೆ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಶೇರ್ ಮಾಡುವ ಪ್ರಬುದ್ಧ ಪುರುಷರನ್ನು ನೋಡಿ, "ಇವರು ಲಿಂಗ ಪರಿವರ್ತನೆ (Transitioning) ಮಾಡಿಕೊಳ್ಳುತ್ತಿದ್ದಾರೋ ಅಥವಾ ಇನ್ನೇನೋ ಗೊತ್ತಿಲ್ಲ" ಎಂದು ಗೇಲಿ ಮಾಡಿದ್ದರು. ಮಸ್ಕ್ ಅವರ ಈ ಕಾಮೆಂಟ್ ಆ ಸಮಯದಲ್ಲಿ ತೀವ್ರ ವಿವಾದಕ್ಕೀಡಾಗಿತ್ತು ಹಾಗೂ ಲಿಂಗ ತಾರತಮ್ಯದಿಂದ (Sexist) ಕೂಡಿದೆ ಎಂದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ತೀವ್ರ ಪ್ರತಿಕ್ರಿಯೆ

ಮಸ್ಕ್ ಅವರ ಈ ಇತ್ತೀಚಿನ ಕಾಮೆಂಟ್ ಮತ್ತೆ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮಸ್ಕ್ ಅವರ ಹೇಳಿಕೆಯನ್ನು ಪ್ರಶ್ನಿಸಿರುವ ಯೂಸರ್‌ವೊಬ್ಬರು, "ಹಾಗಾದರೆ ನಿಮ್ಮ 'ಎಕ್ಸ್' ಪ್ಲಾಟ್‌ಫಾರ್ಮ್ ಯಾರಿಗೆ ಸೀಮಿತ?" ಎಂದು ನೇರವಾಗಿ ಕೇಳಿದ್ದಾರೆ. ಮತ್ತೊಬ್ಬ ಯೂಸರ್‌ "ಎಕ್ಸ್ ಆ್ಯಪ್ ಯಾರಿಗೆ ಸೇರಿದ್ದು?" ಎಂದು ಚಾಟಿ ಬೀಸಿದ್ದಾರೆ. ಇನ್ನು ಕೆಲವರು ಮಸ್ಕ್ ಅಭಿಪ್ರಾಯವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, "ನಾನು ಇದನ್ನು ಒಪ್ಪುವುದಿಲ್ಲ. ಇನ್‌ಸ್ಟಾಗ್ರಾಮ್ ಎನ್ನುವುದು ಎಲ್ಲಾ ಲಿಂಗದವರಿಗೂ ಮುಕ್ತವಾಗಿರುವ ಒಂದು ಉತ್ತಮ ವೇದಿಕೆ" ಎಂದು ಬರೆದುಕೊಂಡಿದ್ದರೆ, ಇನ್ನೊಬ್ಬರು "ಇನ್‌ಸ್ಟಾಗ್ರಾಮ್ ಪ್ರತಿಯೊಬ್ಬರಿಗೂ ಸೇರಿದ ಆ್ಯಪ್" ಎಂದು ತಿರುಗೇಟು ನೀಡಿದ್ದಾರೆ.