Menstrual Leave: ಕಾಲೇಜು ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ ನೀಡುವ ವಿಚಾರವು ಮುಖ್ಯಮಂತ್ರಿಗಳ ಅಂತಿಮ ತೀರ್ಮಾನಕ್ಕೆ ಬಾಕಿಯಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಹಾಜರಾತಿ ನಿಯಮಗಳ ಪರಿಶೀಲನೆ ಬಳಿಕವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಅವರ ತೀರ್ಮಾನ ಅಂತಿಮ. ಈ ಬಗ್ಗೆ ಸದ್ಯದವರೆಗೆ ನಮ್ಮ ಇಲಾಖೆಗಳಿಗೆ ಯಾವುದೇ ಸೂಚನೆ ಬಂದಿಲ್ಲ. ಬಂದರೆ ಜಾರಿಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‌ ಪ್ರಕಾಶ್‌ ಪಾಟೀಲ್‌ ಇದೇ ವೇಳೆ ಹೇಳಿದರು.

ಶೇ.75 ಹಾಜರಾತಿ ಕಡ್ಡಾಯ ನಿಯಮ

ಋತುಚಕ್ರ ರಜೆ ನೀಡುವ ಬಗ್ಗೆ ಸೂಚನೆ ಬಂದರೆ ಬೋರ್ಡ್ ಪರೀಕ್ಷೆ ಬರೆಯಲು ಶೇ.75 ಹಾಜರಾತಿ ಕಡ್ಡಾಯ ನಿಯಮದ ಒಳಗೆ ಈ ರಜೆಯನ್ನು ತರಬೇಕೇ, ಬೇಡವೇ ಎಂಬ ಬಗ್ಗೆ ಚರ್ಚಿಸಬೇಕಾಗುತ್ತದೆ. ಹಾಗೆಯೇ ಸೆಮಿಸ್ಟರ್ ಒಂದಕ್ಕೆ 90 ದಿನಗಳ ತರಗತಿ ನಡೆಯುವುದು ಕಡ್ಡಾಯ ಎಂಬ ನಿಯಮವಿದೆ. ಇದೆಲ್ಲವನ್ನು ಪರಿಶೀಲಿಸಿ ನಿರ್ಧರಿಸಬೇಕಾಗುತ್ತದೆ. ಸದ್ಯದ ವರೆಗೆ ಸರ್ಕಾರದಿಂದ ಇಲಾಖೆಗಳಿಗೆ ಯಾವುದೇ ಮಾಹಿತಿ ಬಂದಿಲ್ಲ. ಬಂದ ಬಳಿಕ ಎಲ್ಲವನ್ನೂ ಪರಿಶಿಲಿಸಲಾಗುವುದು ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿ ಸಂಘಗಳ ಚುನಾವಣೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಮತ್ತೆ ಆರಂಭಿಸಲು ನಮ್ಮ ಪಕ್ಷ ಆಸಕ್ತಿ ವಹಿಸಿದೆ. ಇದಕ್ಕಾಗಿ ವಸ್ತುಸ್ಥಿತಿ ಅಧ್ಯಯನ ನಡೆಸಿ ಶಿಫಾರಸುಗಳೊಂದಿಗೆ ಸಮಗ್ರ ವರದಿ ನೀಡಲು 9 ಮಂದಿ ಸದಸ್ಯರ ಸಮಿತಿ ರಚಿಸಲಾಗಿದೆ. ನಾನು ಇದರ ಸಂಚಾಲಕನಾಗಿದ್ದೇನೆ. ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿ ಮಟ್ಟದಲ್ಲೇ ನಾಯಕತ್ವದ ಗುಣ ಬೆಳೆಸುವುದು ಮುಖ್ಯ ಎಂದರು.

ಕೆಪಿಸಿಸಿ ಅಧ್ಯಕ್ಷರು, ನಾನು ಸೇರಿ ಈಗಿರುವ ಪಕ್ಷದ ಅನೇಕ ನಾಯಕರು ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದವನು. ನಾವು ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಯಬೇಕು ಎಂದು ಬಯಸುತ್ತೇವೆ. ಆದಷ್ಟು ಶೀಘ್ರ ಸಮಗ್ರ ಪರಿಶೀಲನೆ ನಡೆಸಿ, ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಸಂಬಂಧಿಸಿದ ಎಲ್ಲರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: Ballari: ನನ್ನಿಂದ ಜನರಿಗೆ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ: ಶಾಸಕ ನಾರಾ ಭರತ್ ರೆಡ್ಡಿ

ಇದನ್ನೂ ಓದಿ: ಇಸಿಜಿ ಮಾಡಿಸಿದ ಮೂರೇ ದಿನಕ್ಕೆ ಡಾಕ್ಟರ್ ಗೆ ಹಾರ್ಟ್‌ ಅಟ್ಯಾಕ್‌, ದಿಢೀರ್ ಸಾವಿಗೆ ಕಾರಣ ಏನು? ಯಾವ ಪರೀಕ್ಷೆ ಮಾಡಿಸ್ಬೇಕು?