ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಹಿರಿಯ ಇಂಜಿನಿಯರ್‌ಗಳು ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.

ಬೆಂಗಳೂರು (ಮಾ.05): ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ಮತ್ತೊಂದು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಗುರುವಾರ ಬೆಳಿಗ್ಗೆ 6 ಗಂಟೆಯಿಂದಲೇ ಬೆಂಗಳೂರು, ಮೈಸೂರು, ಹಾಸನ, ಮಂಡ್ಯ, ಗದಗ, ಯಾದಗಿರಿ, ಹುಬ್ಬಳ್ಳಿ, ವಿಜಯಪುರ ಮತ್ತು ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (DA Case) ಆರೋಪದ ಹಿನ್ನೆಲೆಯಲ್ಲಿ ಹಿರಿಯ ಇಂಜಿನಿಯರ್‌ಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳನ್ನು ಜಾಲಾಡಲಾಗುತ್ತಿದೆ.

Add Asianetnews Kannada as a Preferred SourcegooglePreferred

ಹಾಸನದಲ್ಲಿ ಜೀಪ್ ಏರಿ ಒಳಹೋದ ಅಧಿಕಾರಿಗಳು!

ಇಂದಿನ ದಾಳಿಯ ಅತ್ಯಂತ ರೋಚಕ ಘಟನೆ ನಡೆದದ್ದು ಹಾಸನದಲ್ಲಿ. ಹಾಸನ ಮಹಾನಗರ ಪಾಲಿಕೆಯ ಎಎಇ (AEE) ಸತ್ಯನಾರಾಯಣ ಅವರ ರವೀಂದ್ರ ನಗರದ ನಿವಾಸಕ್ಕೆ ಲೋಕಾಯುಕ್ತ ಡಿವೈಎಸ್‌ಪಿ ಸುರೇಶ್ ನೇತೃತ್ವದ ತಂಡ ದಾಳಿ ಮಾಡಿದಾಗ, ಅಧಿಕಾರಿ ಬಾಗಿಲು ತೆಗೆಯಲು ನಿರಾಕರಿಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಲೋಕಾಯುಕ್ತ ಅಧಿಕಾರಿಗಳು ಚಾಣಾಕ್ಷತನ ಮೆರೆದರು. ಠಾಣೆಯ ಜೀಪ್ ಅನ್ನು ಮನೆಯ ಗೋಡೆಗೆ ಅಂಟಿಸಿ ನಿಲ್ಲಿಸಿ, ಅದರ ಮೇಲೆ ಹತ್ತಿ ಮೊದಲ ಮಹಡಿಯ ಮೂಲಕ ಮನೆಯೊಳಗೆ ಪ್ರವೇಶಿಸಿ ಸತ್ಯನಾರಾಯಣ ಅವರಿಗೆ ಶಾಕ್ ನೀಡಿದ್ದಾರೆ.

ವಿಜಯಪುರದಲ್ಲಿ ಶಾಲೆಯ ಮೇಲೂ ದಾಳಿ!

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೆ.ಬಿ.ಜೆ.ಎನ್.ಎಲ್ ಜೂನಿಯರ್ ಇಂಜಿನಿಯರ್ ಪ್ರಕಾಶ್ ಪಿ.ಜಿ (ಗೊಡಬಂಡಿ) ಅವರ ಮೇಲೆ ನಡೆದ ದಾಳಿ ಕೂಡ ಗಮನಾರ್ಹವಾಗಿದೆ. ಪ್ರಕಾಶ್ ಅವರ ಇಂಡಿ ಕಚೇರಿ, ನಿವಾಸದ ಜೊತೆಗೆ ಬೆಂಗಳೂರಿನ ಮಹದೇವಪುರದಲ್ಲಿರುವ ಮನೆ ಹಾಗೂ ಬೀದರ್‌ನ ಹುಮನಾಬಾದ್‌ನಲ್ಲಿರುವ ಮನೆಯ ಮೇಲೆಯೂ ದಾಳಿ ನಡೆದಿದೆ. ವಿಶೇಷವೆಂದರೆ, ಇವರ ಪತ್ನಿಯ ಹೆಸರಿನಲ್ಲಿರುವ ಶಾಲೆಯ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬಾಗಲಕೋಟೆ ಮತ್ತು ಹುಬ್ಬಳ್ಳಿಯಲ್ಲಿ ಚೀಫ್ ಇಂಜಿನಿಯರ್ ಬೆವರಿಳಿಸಿದ ಲೋಕಾ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (KRDCL) ಚೀಫ್ ಇಂಜಿನಿಯರ್ ವಸಂತ ವಾಲಪ್ಪ ನಾಯಕ್ ಅವರ ಮೇಲೆ ಬೆಂಗಳೂರು, ಹುಬ್ಬಳ್ಳಿ ಮತ್ತು ಬಾಗಲಕೋಟೆಯಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಇವರ ಸಹೋದರ ಭೀಮಸಿಂಗ್ ನಾಯಕ್ ಬಾಗಲಕೋಟೆಯಲ್ಲಿ ಎಎಸ್‌ಐ (ASI) ಆಗಿ ಕೆಲಸ ಮಾಡುತ್ತಿದ್ದು, ಅವರ ಮನೆಯ ಮೇಲೆಯೂ ದಾಳಿ ಮಾಡಲಾಗಿದೆ. ಹುಬ್ಬಳ್ಳಿಯ ಅಕ್ಷಯ ಕಾಲೋನಿಯಲ್ಲಿರುವ ವಸಂತ ನಾಯಕ್ ಅವರ ಮನೆಯಲ್ಲಿ ಬೆಲೆಬಾಳುವ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜ್ಯದ ವಿವಿಧೆಡೆ ದಾಳಿಗೆ ಒಳಗಾದ ಅಧಿಕಾರಿಗಳ ಪಟ್ಟಿ:

ಯಾದಗಿರಿ: ವೀರೇಶ್ ಹಿರೇಮಠ (ಜೆಸ್ಕಾಂ ಉಪ ವಿದ್ಯುತ್ ಪರಿವೀಕ್ಷಕ) - ಯಾದಗಿರಿ ಮತ್ತು ಬೆಂಗಳೂರಿನ ಮನೆಗಳ ಮೇಲೆ ದಾಳಿ.

ಮಂಡ್ಯ: ಎಸ್. ಸತೀಶ್ (ಎಎಇ, ಪಿಡಬ್ಲ್ಯೂಡಿ) - ಬಂದಿಗೌಡ ಬಡಾವಣೆಯ ಮನೆ ಸೇರಿದಂತೆ 4 ಕಡೆ ದಾಳಿ.

ಗದಗ: ಎಂ.ಕೆ. ಸುರಕೋಡ್ (ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ) - ಗದಗ ನಗರದ ವಿಶ್ವೇಶ್ವರ ಬಡಾವಣೆ ಸೇರಿ 6 ಕಡೆ ರೇಡ್.

ಮೈಸೂರು: ಆಸಿಫ್ ಇಕ್ಬಾಲ್ ಹುಸೇನ್ (ಎಎಇ, ನಗರ ನೀರು ಸರಬರಾಜು ಮಂಡಳಿ) - ಶಿವಾಜಿ ರಸ್ತೆ ನಿವಾಸ ಮತ್ತು ಸರಸ್ವತಿಪುರಂ ಕಚೇರಿ ಮೇಲೆ ದಾಳಿ.

ಬೆಂಗಳೂರು: ಆರ್. ಶಶಿಧರ್ (ಸಿಇಒ, ರೈತ ಸೇವಾ ಸಹಕಾರ ಸಂಘ, ಯಲಹಂಕ) ಮತ್ತು ಹೆಚ್.ಸಿ. ಇಂದ್ರೇಶ್ (ಸಹಾಯಕ ಪ್ರಾಧ್ಯಾಪಕ, ಪಶುವೈದ್ಯಕೀಯ ಕಾಲೇಜು, ಹೆಬ್ಬಾಳ).