ಕೆಎಎಸ್ ಪರೀಕ್ಷಾ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ, ಕೆಪಿಎಸ್‌ಸಿ ಸರ್ಕಾರಕ್ಕೆ ಸ್ಪಷ್ಟನಾ ವರದಿ ಸಲ್ಲಿಸಿದೆ. ಒಂದೇ ಕೊಠಡಿಯಲ್ಲಿ 11 ಅಭ್ಯರ್ಥಿಗಳು ಪಾಸಾಗಿದ್ದು ಕಾಕತಾಳೀಯ ಎಂದಿರುವ ಆಯೋಗ, ಸಿಸಿಟಿವಿ ಪರಿಶೀಲನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿ ತನಗೆ ತಾನೇ ಕ್ಲೀನ್ ಚಿಟ್ ನೀಡಿಕೊಂಡಿದೆ.
ಬೆಂಗಳೂರು (ಮಾ.05): ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರವು ತುರ್ತು ವರದಿ ಕೇಳಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ನೀಡಿದ್ದ 24 ಗಂಟೆಗಳ ಗಡುವಿನೊಳಗೆ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಅವರು ವಿವರವಾದ ಸ್ಪಷ್ಟನಾ ವರದಿಯನ್ನು ಸಲ್ಲಿಸಿದ್ದಾರೆ. ಆದರೆ, ಈ ವರದಿಯಲ್ಲಿ ಕೆಪಿಎಸ್‌ಸಿ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸುವ ಮೂಲಕ 'ಕ್ಲೀನ್ ಚಿಟ್' ನೀಡಿಕೊಂಡಿದೆ.
ವರದಿಯಲ್ಲಿ ಕೆಪಿಎಸ್‌ಸಿ ನೀಡಿದ ಸ್ಪಷ್ಟನೆಗಳೇನು?
ಕೆಪಿಎಸ್‌ಸಿ ಕಾರ್ಯದರ್ಶಿ ಸಲ್ಲಿಸಿರುವ ವರದಿಯಲ್ಲಿ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಸಮರ್ಥನೆ ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದ 'ಒಂದೇ ಕೊಠಡಿಯಲ್ಲಿ 15 ಅಭ್ಯರ್ಥಿಗಳು ಪಾಸಾಗಿದ್ದಾರೆ' ಎಂಬ ಆರೋಪಕ್ಕೆ ವರದಿಯಲ್ಲಿ ಅಂಕಿಅಂಶಗಳ ಸಮೇತ ಉತ್ತರ ನೀಡಲಾಗಿದೆ. 'ಒಂದೇ ಕೊಠಡಿಯಲ್ಲಿ 15 ಅಭ್ಯರ್ಥಿಗಳು ಉತ್ತೀರ್ಣರಾಗಿಲ್ಲ, ಬದಲಿಗೆ ಗರಿಷ್ಠ 11 ಅಭ್ಯರ್ಥಿಗಳು ಮಾತ್ರ ಪಾಸಾಗಿದ್ದಾರೆ. ಇದು ಕಾಕತಾಳೀಯವೇ ಹೊರತು ಅಕ್ರಮವಲ್ಲ' ಎಂದು ವಾದಿಸಲಾಗಿದೆ.
ಸಿಸಿಟಿವಿ (CCTV) ಪರಿಶೀಲನೆಯಲ್ಲಿ ಅಕ್ರಮ ಪತ್ತೆಯಾಗಿಲ್ಲ!
ಅನುಮಾನಾಸ್ಪದವಾಗಿ ಕಂಡುಬಂದ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಆಯೋಗವು ಈಗಾಗಲೇ ಆಂತರಿಕವಾಗಿ ಪರಿಶೀಲನೆ ನಡೆಸಿದೆ ಎನ್ನಲಾಗಿದೆ. 'ಸಿಸಿಟಿವಿ ದೃಶ್ಯಗಳ ಮರುಪರಿಶೀಲನೆಯಲ್ಲಿ ಯಾವುದೇ ರೀತಿಯ ನಕಲು ಅಥವಾ ಅಕ್ರಮ ಚಟುವಟಿಕೆಗಳು ನಡೆದಿಲ್ಲ ಎಂಬುದು ಖಚಿತವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಇತ್ತು' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದೂರುದಾರರೇ ಇಲ್ಲ ಎನ್ನುತ್ತಿದೆ ಆಯೋಗ:
ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಕೆಎಎಸ್ ಪರೀಕ್ಷಾ ಅಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದ್ದರೂ, ಈವರೆಗೆ ಯಾವುದೇ ಅಭ್ಯರ್ಥಿಯಾಗಲಿ ಅಥವಾ ವ್ಯಕ್ತಿಯಾಗಲಿ ಅಧಿಕೃತವಾಗಿ ಕೆಪಿಎಸ್‌ಸಿಗೆ ದೂರು ನೀಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ, ಕೇವಲ ವದಂತಿಗಳ ಆಧಾರದ ಮೇಲೆ ತನಿಖಾ ಸಮಿತಿ ರಚಿಸುವ ಅಗತ್ಯವಿಲ್ಲ ಎಂದು ಕಾರ್ಯದರ್ಶಿ ಜ್ಯೋತಿ ಅವರು ಸರ್ಕಾರಕ್ಕೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.
ಸರ್ಕಾರದ ಮುಂದಿನ ನಡೆ ಏನು?
ಕೆಪಿಎಸ್‌ಸಿ ಸಲ್ಲಿಸಿರುವ ಈ ವರದಿಯನ್ನು ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪರಿಶೀಲಿಸುತ್ತಿದ್ದಾರೆ. ಆಯೋಗವು "ಅಕ್ರಮ ನಡೆದಿಲ್ಲ" ಎಂದು ಹೇಳಿದ್ದರೂ, ಅಭ್ಯರ್ಥಿಗಳ ಆತಂಕ ಮತ್ತು ಸಾರ್ವಜನಿಕ ಒತ್ತಡಕ್ಕೆ ಮಣಿದು ಸರ್ಕಾರವು ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸುವ ಸಾಧ್ಯತೆ ದಟ್ಟವಾಗಿದೆ. ವರದಿಯಲ್ಲಿನ ತಾಂತ್ರಿಕ ಅಂಶಗಳನ್ನು ಆಧರಿಸಿ ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಸರ್ಕಾರ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಸಾವಿರಾರು ಅಭ್ಯರ್ಥಿಗಳ ಭವಿಷ್ಯದ ಜೊತೆ ಬೆಸೆದುಕೊಂಡಿರುವ ಈ ವಿಚಾರದಲ್ಲಿ ಸರ್ಕಾರವು ಕೇವಲ ಕೆಪಿಎಸ್‌ಸಿ ವರದಿಯನ್ನು ನಂಬುತ್ತದೆಯೇ ಅಥವಾ ಉನ್ನತ ಮಟ್ಟದ ತನಿಖೆಗೆ ಆದೇಶಿಸುತ್ತದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.


