ವರುಣ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ದಾವೋಸ್ ಸಭೆಗೆ ಸಿಎಂ ಗೈರಾಗಿದ್ದನ್ನು ಪ್ರಶ್ನಿಸಿರುವ ಅವರು, ಅಬಕಾರಿ ಇಲಾಖೆಯ ಲಂಚಾವತಾರ ಪ್ರಕರಣದಲ್ಲಿ ಸಚಿವರ ರಾಜೀನಾಮೆಗೆ ಆಗ್ರಹಿಸಿದರು..

ಮೈಸೂರು(ಜ.18):ವರುಣ ಕ್ಷೇತ್ರದಲ್ಲಿ ಸರ್ವೇ ನಡೆಸಲು ಹೋದ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿರುವ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮಹಿಳಾ ಅಧಿಕಾರಿ ಅಂತಾನೂ ನೋಡದೆ ನಿಂದಿಸಿರುವುದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ವರುಣಾದಲ್ಲಿ ಇಂತಹ ಘಟನೆಗಳೇನು ಹೊಸದಲ್ಲ, ಈ ಹಿಂದೆಯೂ ಇಂತಹ ಪುಂಡಾಟಿಕೆಗಳು ನಡೆದಿವೆ ಎಂದು ಕಿಡಿಕಾರಿದ್ದಾರೆ.

ಪೊಲೀಸರ ಮೇಲೆ ಕೈ ಮಾಡುವುದು ಕಾಂಗ್ರೆಸ್ ಚಾಳಿ

ಸಿದ್ದರಾಮಯ್ಯ ಅವರ ಹಿಂದಿನ ವರ್ತನೆಗಳನ್ನು ನೆನಪಿಸಿದ ವಿಜಯೇಂದ್ರ, ಸ್ವತಃ ಮುಖ್ಯಮಂತ್ರಿಗಳೇ ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಯ ಕಪಾಳಕ್ಕೆ ಹೊಡೆಯಲು ಹೋಗಿದ್ದರು. ಶಿಡ್ಲಘಟ್ಟದಲ್ಲೂ ಅಧಿಕಾರಿಗಳಿಗೆ ನಿಂದಿಸಲಾಗಿತ್ತು. ಇದೆಲ್ಲವೂ ಕಾಂಗ್ರೆಸ್ ಪುಂಡರ ವರ್ತನೆಯ ಪ್ರತಿಬಿಂಬ ಎಂದು ಟೀಕಿಸಿದರು. ಅಧಿಕಾರಿಗಳ ಮೇಲೆ ದರ್ಪ ತೋರುವ ಮೂಲಕ ಸರ್ಕಾರ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು. ಇದೇ ವೇಳೆ ಮನರೇಗಾ ಹೆಸರು ಬದಲಾವಣೆ ವಿಚಾರದ ಚರ್ಚೆ ವಿಚಾರಕ್ಕೆ 'ಚರ್ಚಿಸುವುದೇನಿದೆ ಬದನೆಕಾಯಿ' ಎಂದು ಗರಂ ಆದರು.

ದಾವೋಸ್ ಸಭೆಗೆ ಗೈರು: ರಾಜ್ಯದ ಹಿತಾಸಕ್ತಿ ಬಲಿ?

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಬಂಡವಾಳ ಶಾಹಿಗಳ ಸಭೆಗೆ ಸಿಎಂ ಮತ್ತು ಡಿಸಿಎಂ ಗೈರಾಗಿರುವುದನ್ನು ವಿಜಯೇಂದ್ರ ಪ್ರಶ್ನಿಸಿದ್ದಾರೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ರಾಜ್ಯಕ್ಕೆ ಬಂಡವಾಳ ತರಲು ದಾವೋಸ್‌ಗೆ ಹೋಗಿದ್ದಾರೆ. ಆದರೆ ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಹಿತಾಸಕ್ತಿ ಮರೆತು ಇಲ್ಲಿ ಕುಳಿತಿದ್ದಾರೆ. ಇದು ಕೇವಲ ರಾಜಕೀಯ ಚದುರಂಗದಾಟಕ್ಕಾಗಿ ಅವರು ಮಾಡುತ್ತಿರುವ ತಂತ್ರ ಎಂದು ಅವರು ಕಿಡಿಕಾರಿದ್ದಾರೆ.

ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹ

ಅಬಕಾರಿ ಇಲಾಖೆಯ ಲಂಚಾವತಾರ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಅಬಕಾರಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ನೇರವಾಗಿ ಸಚಿವರ ಹೆಸರು ಕೇಳಿಬಂದಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಅವರು ತಕ್ಷಣವೇ ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು. ಭ್ರಷ್ಟಾಚಾರದ ಬಗ್ಗೆ ಜನರು 'ಛೀ ತೂ' ಎಂದು ಉಗಿಯುವ ಮುನ್ನ ಸರ್ಕಾರ ಬುದ್ಧಿ ಕಲಿಯಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.