ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ, ಸರ್ಕಾರಿ ಜಮೀನು ಹಸ್ತಾಂತರ ಪ್ರಕ್ರಿಯೆಯಲ್ಲಿದ್ದ ಮಹಿಳಾ ಗ್ರಾಮ ಆಡಳಿತಾಧಿಕಾರಿಗೆ 'ತಲೆ ತೆಗೆಯುವ' ಕೊಲೆ ಬೆದರಿಕೆ ಹಾಕಲಾಗಿದೆ. ಈ ದೌರ್ಜನ್ಯದ ಕುರಿತು ಎಫ್‌ಐಆರ್ ದಾಖಲಾಗಿದ್ದು, ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಮೈಸೂರು (ಜ.18): ಚಿಕ್ಕಬಳ್ಳಾಪುರದಲ್ಲಿ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಬೆನ್ನಲ್ಲಿಯೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂಬ ಆತಂಕ ಸೃಷ್ಟಿಸುವಂತೆ ಮತ್ತೊಂದು ಪ್ರಕರಣದಲ್ಲಿ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರವಾದ ವರುಣಾದಲ್ಲಿ ಮಹಿಳಾ ಅಧಿಕಾರಿಯೊಬ್ಬರ ಮೇಲೆ ದೌರ್ಜನ್ಯ ನಡೆದಿದೆ. ಸರ್ಕಾರಿ ಜಮೀನು ಹಸ್ತಾಂತರ ಪ್ರಕ್ರಿಯೆಯಲ್ಲಿದ್ದ ಗ್ರಾಮ ಆಡಳಿತಾಧಿಕಾರಿ (VA) ಅವರಿಗೆ 'ತಲೆ ತೆಗೆಯುವ' ಬೆದರಿಕೆ ಹಾಕಿರುವ ಘಟನೆ ಎಫ್‌ಐಆರ್ ಮೂಲಕ ಬಹಿರಂಗಗೊಂಡಿದೆ.
ಕಚೇರಿ ಆದೇಶ ಪಾಲನೆಗೆ ಅಡ್ಡಿ
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ 'ನಿಮ್ಹಾನ್ಸ್' ಮಾದರಿಯ ಸಂಸ್ಥೆ ಸ್ಥಾಪಿಸಲು ವರುಣಾ ಹೋಬಳಿಯ ಗುಡಮಾದನಹಳ್ಳಿ ಗ್ರಾಮದ ಸರ್ವೆ ನಂ. 8, 60 ಮತ್ತು 68 ರಲ್ಲಿ ಒಟ್ಟು 20 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಹಸ್ತಾಂತರಿಸಬೇಕಿತ್ತು. ಡಿಸೆಂಬರ್ 31, 2025 ರಂದು ಬೆಳಿಗ್ಗೆ 11:10ಕ್ಕೆ ಗ್ರಾಮ ಆಡಳಿತಾಧಿಕಾರಿ ಭವ್ಯ .ಜಿ ಮತ್ತು ಗ್ರಾಮ ಸಹಾಯಕ ನವೀನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾಗ ಈ ಅಹಿತಕರ ಘಟನೆ ಸಂಭವಿಸಿದೆ.
ಎಫ್‌ಐಆರ್‌ನಲ್ಲಿರುವ ಭೀಕರ ವಿವರಗಳು
ಜಮೀನು ಪರಿಶೀಲನೆ ವೇಳೆ ಸ್ಥಳಕ್ಕೆ ನುಗ್ಗಿದ ಗುಡಮಾದನಹಳ್ಳಿ ನಿವಾಸಿ ಜಿ.ಎಂ ಪುಟ್ಟಸ್ವಾಮಿ (ಬೆಣ್ಣೆ ಪುಟ್ಟಸ್ವಾಮಿ), ಭವ್ಯ ಅವರ ಮೇಲೆ ಎರಗಿ ವಾಗ್ವಾದ ನಡೆಸಿದ್ದಾರೆ. 'ಯಾರನ್ನು ಕೇಳಿ ಜಮೀನು ಮಂಜೂರು ಮಾಡಿದ್ದೀರಿ? ಮೊದಲು ನಿಮ್ಮ ತಹಶೀಲ್ದಾರ್ ತಲೆಯನ್ನು ತೆಗೆಯಬೇಕು ಹಾಗೂ ನಿನ್ನನ್ನೂ ಇಲ್ಲೇ ಕೊಂದು ಹಾಕುತ್ತೇನೆ' ಎಂದು ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಅಧಿಕಾರಿ ಭವ್ಯ ಅವರ ಮೇಲೆ ಹಲ್ಲೆ ಮಾಡಲು ಮುಂದಾದಾಗ, ಅದನ್ನು ತಡೆಯಲು ಬಂದ ಗ್ರಾಮ ಸಹಾಯಕ ನವೀನ್ ಕುಮಾರ್ ಅವರನ್ನು ಜೋರಾಗಿ ತಳ್ಳಲಾಗಿದೆ. ಜೊತೆಗೆ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ, ನವೀನ್ ಅವರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ವಿಡಿಯೋವನ್ನು ಬಲವಂತವಾಗಿ ಕಸಿದುಕೊಂಡು, ಅದನ್ನು ರಘು ಎಂಬುವವರ ಕೈಗೆ ನೀಡಿ ಡಿಲೀಟ್ ಮಾಡಿಸಿದ್ದಾರೆ.
ಬಿಜೆಪಿ ಆಕ್ರೋಶ - 'ಜಂಗಲ್ ರಾಜ್' ಟೀಕೆ
ಈ ಪ್ರಕರಣದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, 'ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ 'ಜಂಗಲ್ ರಾಜ್' ತಲೆ ಎದ್ದಿದೆ' ಎಂದು ಕಿಡಿಕಾರಿದ್ದಾರೆ. ಶಿಡ್ಲಘಟ್ಟದ ಘಟನೆಯ ಬೆನ್ನಲ್ಲೇ ಸಿಎಂ ಕ್ಷೇತ್ರದಲ್ಲೇ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿರುವುದು ಅಧಿಕಾರಿಗಳ ಮನೋಬಲ ಉಡುಗಿಸಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನ್ಯಾಯಕ್ಕಾಗಿ ಮಹಿಳಾ ಅಧಿಕಾರಿಯ ಮೊರೆ
ಸರ್ಕಾರಿ ಕೆಲಸವನ್ನು ನಿರ್ಭಯವಾಗಿ ನಿರ್ವಹಿಸಲು ಮಹಿಳಾ ಸಿಬ್ಬಂದಿಯಾದ ನನಗೆ ಭಯದ ವಾತಾವರಣ ಉಂಟಾಗಿದೆ ಎಂದು ಭವ್ಯ ಅವರು ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ. ಈ ದೂರಿನನ್ವಯ ವರುಣಾ ಪೊಲೀಸರು ಪುಟ್ಟಸ್ವಾಮಿ ವಿರುದ್ಧ ದೌರ್ಜನ್ಯ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದಾರೆ.


