ಉಡುಪಿ ಕಾಲೇಜು ವಿಡಿಯೋ ಕೇಸ್ ಎಸ್‌ಐಟಿಗೆ ಕೊಡೋಲ್ಲ; ಸಿಎಂ ಸಿದ್ದರಾಮಯ್ಯ
ಉಡುಪಿಯ ನೇತ್ರಜ್ಯೋತಿ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಮಾಡಿದ ಪ್ರಕರಣವನ್ನು ಎಸ್‌ಐಟಿಗೆ ವಹಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಆ.01): ರಾಜ್ಯದಲ್ಲಿ ಅತ್ಯಂತ ವಿವಾದಕ್ಕೀಡಾಗಿದ್ದ ಉಡುಪಿಯ ನೇತ್ರಜ್ಯೋತಿ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಮಾಡಿದ ಪ್ರಕರಣದ ಕುರಿತಂತೆ ಮೌನ ಮುರಿದು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಡುಪಿ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ರಾಷ್ಟ್ರೀಯ ಮಹಿಳಾ ಆಯೋಗವೇ ಕ್ಯಾಮರಾ ಇಟ್ಟಿರಲಿಲ್ಲ ಎಂದು ಹೇಳಿದ್ದಾರೆ. ಈ ಪ್ರಕತರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಡುಪಿ ಕಾಲೇಜು ವಿದ್ಯಾರ್ಥಿನಿಯರ ವೀಡಿಯೋ ಕೇಸ್ ನಲ್ಲಿ ಪೊಲೀಸರು ಸುಮೋಟೋ ಎಫ್ ಐಆರ್ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿದೆ. ಈಗ ಡಿವೈಎಸ್ಪಿ ನೇತೃತ್ವದ ತನಿಖೆ ನಡೆಯುತ್ತಿದ್ದು, ಅದು ಪೂರ್ಣಗೊಳ್ಳಲಿ. ನಂತರ, ತನಿಖಾ ವರದಿ ಬಂದ ನಂತರ ಸತ್ಯಾಸತ್ಯತೆ ಗೊತ್ತಾಗುತ್ತದೆ. ಈಗಾಗಲೇ, ರಾಷ್ಟ್ರೀಯ ಮಹಿಳಾ ಆಯೋಗವು ಬಂದು ಪರಿಶೀಲನೆ ಮಾಡಿದ್ದು, ಕಾಲೇಜಿನ ಶೌಚಗೃಹದಲ್ಲಿ ಕ್ಯಾಮರಾ ಇಟ್ಟಿರಲಿಲ್ಲ ಎಂದಿದ್ದಾರೆ. ತನಿಖಾ ವರದಿ ಬರಲಿ, ಆಮೇಲೆ ಈ ಬಗ್ಗೆ ಮಾತನಾಡುತ್ತೇನೆ ಎಂದರು.
ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಹುಡ್ಗೀರ ವಿಡಿಯೋ: 3 ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್
ಎಸ್‌ಐಟಿ ತನಿಖೆ ಅಗತ್ಯವಿಲ್ಲ:
ಇನ್ನು ಕಾಲೇಜ್‌ನಲ್ಲಿ ಇರೋ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು ಅಂತ ಗೃಹ ಸಚಿವ ಪರಮೇಶ್ವರ್ ಅವರು ಹೇಳಿರಬಹುದು. ಈ ಬಗ್ಗೆ ಗೊಂದಲ ಸೃಷ್ಟಿಸೋದು ಬೇಡ. ಈಗ ಪಗ್ರಕರಣಕ್ಕೆ ಸಂಬಂಧಿಸದಂತೆ ಎಫ್ಐಆರ್ ಆಗಿದ್ದು, ಡಿವೈಎಸ್ಪಿ ತನಿಖೆ ಮಾಡ್ತಾ ಇದಾರೆ. ಡಿವೈಎಸ್ಪಿ ಲೆವೆಲ್ ತನಿಖೆ ಆಗ್ತಿರೋವಾಗ ಎಸ್ ಐಟಿ ಪ್ರಶ್ನೆ ಉದ್ಭವಿಸಲ್ಲ ಎಂದು ಹೇಳಿದರು. ಈ ಮೂಲಕ ಉಡುಪಿ ಪ್ರಕರಣವನ್ನು ಮೇಲ್ಮಟ್ಟದ ತನಿಖೆಗೆ ವಹಿಸುವುದಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಕಾರ ಮಾಡಿದ್ದಾರೆ.
ನೈತಿಕ ಪೊಲಿಸ್‌ಗಿರಿ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಮಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ನೈತಿಕ ಪೊಲೀಸ್‌ಗಿರಿ ನಡೆಯುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರು, ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕಾನೂನು ಕೈಗೆತ್ತಿಕೊಳ್ಳಲು ಇಲ್ಲಿ ಯಾರಿಗೂ ಅವಕಾಶ ಇಲ್ಲ. ಪೊಲೀಸರಿಗೆ ಇದಕ್ಕೆ ಅವಕಾಶ ಕೊಡಬೇಡಿ ಅಂದಿದ್ದೇನೆ. ಮುಂದುವರೆದು ಸರ್ಕಾರದಿಂದ ಕರಾವಳಿಗೆ ಆಗಲೇ ಏನೇನು ಕೊಡಬಹುದು ಅಂತ ಹೇಳಿದ್ದೇವೆ. ಜುಲೈ ತಿಂಗಳ ಮಳೆ ಹಾನಿ ಬಗ್ಗೆ ಪರಿಶೀಲನೆಗೆ ಬಂದಿದ್ದೇನೆ ಎಂದು ತಿಳಿಸಿದರು.
ಉಡುಪಿ ವಿಡಿಯೋ ಪ್ರಕರಣ: ತನಿಖೆ ವೇಳೆ ಕಾಂಗ್ರೆಸ್ ನಾಯಕಿದೇನು ಕೆಲಸ? ಬಿಜೆಪಿ ಕಿಡಿ
ಉಡುಪಿ ವಿಡಿಯೋ ಕೇಸ್ ತನಿಖೆ ವೇಳೆ ಕಾಂಗ್ರೆಸ್ ನಾಯಕಿದೇನು ಕೆಲಸ? ಉಡುಪಿ (ಜು.31): ನಗರದ ನೇತ್ರಾವತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದ ವಿಡಿಯೋ ಪ್ರಕರಣ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಹಲವರ ವಿಚಾರಣೆ ನಡೆಸಲಿದ್ದಾರೆ. ಆದರೆ, ಪ್ರಕರಣದ ತನಿಖೆಗೆ ಬಂದಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಅವರ ಜೊತೆ ತನಿಖೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಮೇರಿ ಶ್ರೇಷ್ಠ ಮತ್ತು ಬಿಜೆಪಿ ಶಾಸಕಿ ಭಾಗಿರಥಿ ಮುರುಳ್ಯ ಉಪಸ್ಥಿತರಿದ್ದುದು ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾದ-ಪ್ರತಿವಾದಕ್ಕೆ ಕಾರಣವಾಗಿದೆ. ಖುಷ್ಬು ಅವರ ಜೊತೆ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಅವರ ಸಂಬಂಧಿ, ವಕೀಲೆ ಮೇರಿ ಶ್ರೇಷ್ಠ ತನಿಖೆಗೆ ಸಹಕರಿಸಿದ್ದರು. ಇದಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮೇರಿ ಶ್ರೇಷ್ಠ ಅವರು ತನಿಖೆ ಸಂದರ್ಭದಲ್ಲಿ ಯಾಕೆ ಉಪಸ್ಥಿತರಿದ್ದರು? ತನಿಖೆ ದಿಕ್ಕು ತಪ್ಪಿಸಿ, ಪ್ರಕರಣ ಮುಚ್ಚಿ ಹಾಕಿ, ಆರೋಪಿಗಳನ್ನು ರಕ್ಷಿಸಲು ಹೋಗಿದ್ದರೇ ಎಂದು ಪ್ರಶ್ನಿಸಿದ್ದು, ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.