ನಗರದ ನೇತ್ರಾವತಿ ಪ್ಯಾರಾಮೆಡಿಕಲ್‌ ಕಾಲೇಜಿನ ಶೌಚಾಲಯದ ವಿಡಿಯೋ ಪ್ರಕರಣ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಇಂದು ಕೂಡ ಹಲವರ ವಿಚಾರಣೆ ನಡೆಸಲಿದ್ದಾರೆ.

ಉಡುಪಿ (ಜು.31): ನಗರದ ನೇತ್ರಾವತಿ ಪ್ಯಾರಾಮೆಡಿಕಲ್‌ ಕಾಲೇಜಿನ ಶೌಚಾಲಯದ ವಿಡಿಯೋ ಪ್ರಕರಣ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಇಂದು ಕೂಡ ಹಲವರ ವಿಚಾರಣೆ ನಡೆಸಲಿದ್ದಾರೆ.

ನಿನ್ನೆ ಕಾಲೇಜು ಆಡಳಿತ ಮಂಡಳಿ ವಿಚಾರಣೆ ನಡೆಸಿದ್ದ ಪೊಲೀಸರು. ಇಂದು ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಿಚಾರಣೆ ಸಾಧ್ಯತೆ. ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಿ, ಘಟನೆ ನಡೆದ ದಿನ ಹಾಗೂ ಕಳೆದ ಒಂದು ವರ್ಷದಿಂದ ಕಾಲೇಜಿನಲ್ಲಿ ನಡೆಯುತ್ತಿರುವ ಘಟನಾವಳಿಗಳ ಮಾಹಿತಿ ಪಡೆಯಲಿರುವ ತನಿಖಾಧಿಕಾರಿ ಬೆಳ್ಳಿಯಪ್ಪ. 

ಸಿಸಿಟಿವಿ ಕೂಡ ಪರಿಶೀಲನೆ ನಡೆಸಿದ್ದು, ಘಟನಾ ಸಮಯ ಕಾಲೇಜಿನಲ್ಲಿ ಯಾರ್ಯಾರಿದ್ದರು ಎಂಬ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ಮತ್ತೆ ಭುಗಿಲೆದ್ದ ಉಡುಪಿ ಕಾಲೇಜಿನ ವೀಡಿಯೋ ವಿವಾದ

ಕಾಂಗ್ರೆಸ್‌, ಬಿಜೆಪಿ ವಾಕ್ಸಮರ

ಪ್ರಕರಣದ ತನಿಖೆಗೆ ಬಂದಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಅವರ ಜೊತೆ ತನಿಖೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕಿ ಮೇರಿ ಶ್ರೇಷ್ಠ ಮತ್ತು ಬಿಜೆಪಿ ಶಾಸಕಿ ಭಾಗಿರಥಿ ಮುರುಳ್ಯ ಉಪಸ್ಥಿತರಿದ್ದುದು ಈಗ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾದ-ಪ್ರತಿವಾದಕ್ಕೆ ಕಾರಣವಾಗಿದೆ.

ಖುಷ್ಬು ಅವರ ಜೊತೆ ಹಿರಿಯ ಕಾಂಗ್ರೆಸ್‌ ಮುಖಂಡರಾಗಿದ್ದ ಆಸ್ಕರ್‌ ಫೆರ್ನಾಂಡಿಸ್‌ ಅವರ ಸಂಬಂಧಿ, ವಕೀಲೆ ಮೇರಿ ಶ್ರೇಷ್ಠ ತನಿಖೆಗೆ ಸಹಕರಿಸಿದ್ದರು. ಇದಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಮೇರಿ ಶ್ರೇಷ್ಠ ಅವರು ತನಿಖೆ ಸಂದರ್ಭದಲ್ಲಿ ಯಾಕೆ ಉಪಸ್ಥಿತರಿದ್ದರು? ತನಿಖೆ ದಿಕ್ಕು ತಪ್ಪಿಸಿ, ಪ್ರಕರಣ ಮುಚ್ಚಿ ಹಾಕಿ, ಆರೋಪಿಗಳನ್ನು ರಕ್ಷಿಸಲು ಹೋಗಿದ್ದರೇ ಎಂದು ಪ್ರಶ್ನಿಸಿದ್ದು, ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಹುಡ್ಗೀರ ಚಿತ್ರೀಕರಣ: ಮುಸ್ಲಿಂ ಯುವತಿಯರ ಕೃತ್ಯ ಒಪ್ಪಿಕೊಂಡ ಕಾಲೇಜು

ಇದಕ್ಕೆ ಮಹಿಳಾ ಕಾಂಗ್ರೆಸ್‌ ಪ್ರತ್ಯುತ್ತರ ನೀಡಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಆಹ್ವಾನದ ಮೇರೆಗೆ ಮೇರಿ ಶ್ರೇಷ್ಠ ಅವರು ತನಿಖೆಯಲ್ಲಿ ಪಾಲ್ಗೊಂಡಿದ್ದರು ಎಂದು ಕಾಂಗ್ರೆಸ್‌ ನಾಯಕಿ ಡಾ.ಸುನಿತಾ ಶೆಟ್ಟಿಹೇಳಿದ್ದಾರೆ.

ಮೇರಿ ಶ್ರೇಷ್ಠ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ, ಅವರು ಪಕ್ಷಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ತನಿಖೆ ಸಂದರ್ಭದಲ್ಲಿ ಹಾಜರಿರುವಂತೆ ನೋಟಿಸ್‌ ಬಂದ ಹಿನ್ನೆಲೆಯಲ್ಲಿ ಹೋಗಿದ್ದಾರೆ. ಆದರೆ ಖುಷ್ಬು ಜೊತೆ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಯಾಕೆ ಬಂದಿದ್ದರು? ತನಿಖೆ ಸಂದರ್ಭದಲ್ಲಿ ಯಾಕೆ ಅಲ್ಲಿದ್ದರು ಎಂದವರು ಮರುಪ್ರಶ್ನಿಸಿದ್ದಾರೆ.

ಖುಷ್ಬು ಅವರು ತನಿಖೆಯಲ್ಲಿ ವಿಡಿಯೋ ಬಗ್ಗೆ ಯಾವುದೇೕ ಸಾಕ್ಷ್ಯ ಸಿಕ್ಕಿಲ್ಲ ಎಂದು ಹೇಳಿರುವುದು ಬಿಜೆಪಿ ನಾಯಕರಿಗೆ ಚಿಂತೆಯಾಗಿದೆ, ಅದಕ್ಕೆ ಅವರು ಈಗ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಡಾ.ಸುನಿತಾ ಹೇಳಿದ್ದಾರೆ.