ಪ್ರೀಮಿಯಂ ಮದ್ಯದ ಬೆಲೆ ಇಳಿಕೆ, ಕೆ.ಎನ್. ರಾಜಣ್ಣ ಬಿಜೆಪಿ ಸೇರ್ಪಡೆ, ಯಾದಗಿರಿಯಲ್ಲಿ ಚಿಕ್ಕಮ್ಮನ ಮೇಲೆ ಅತ್ಯಾ*ಚಾರ, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ, ಹಾಗೂ ಬೆಂಗಳೂರಿನಲ್ಲಿ 5 ಹೊಸ ಪಾಲಿಕೆಗಳ ರಚನೆ - ಇವು ಇಂದಿನ ಪ್ರಮುಖ ಸುದ್ದಿಗಳು.
1.ಪ್ರೀಮಿಯಂ ಮದ್ಯದ ಬೆಲೆ ಇಳಿಕೆ? ದರ ಕಡಿತಕ್ಕೆ ಸರ್ಕಾರ ಚಿಂತನೆ: ಸಚಿವ ತಿಮ್ಮಾಪುರ
ಬೆಂಗಳೂರು (ಸೆ.03): ರಾಜ್ಯದಲ್ಲಿ ಅಬಕಾರಿ ಇಲಾಖೆ ಆದಾಯ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ಗಳಿಕೆಯಾಗಿದೆ. ಹೀಗಾಗಿ ಪ್ರೀಮಿಯಂ ಬ್ರ್ಯಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ನಡೆಸಲಾಗಿದ್ದು, ಈ ಕುರಿತು ಚರ್ಚೆ ನಡೆಸಿ ಶೀಘ್ರದಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಹೇಳಿದ್ದಾರೆ. ವಿಧಾನಸೌಧದಲ್ಲಿ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
2.ಬಿಜೆಪಿ ಸೇರ್ಪಡೆಗೆ ಕೆ.ಎನ್.ರಾಜಣ್ಣ ಅರ್ಜಿ: ಶಾಸಕ ಬಾಲಕೃಷ್ಣ ‘ಬಾಂಬ್’
ಮಾಜಿ ಸಚಿವ ಕೆ.ಎನ್.ರಾಜಣ್ಣ ಈಗಾಗಲೇ ಬಿಜೆಪಿ ಸೇರ್ಪಡೆಗೆ ಅರ್ಜಿ ಹಾಕಿದ್ದಾರೆ. ಅವರು ಹೋಗುವ ಮುನ್ನ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಣ್ಣ ಅವರು ಬಿಜೆಪಿಗೆ ಹೋಗುತ್ತಿದ್ದಾರೋ ಇಲ್ಲವೋ ಅಂತ ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಗೊತ್ತಾಗುತ್ತದೆ. ರಾಜಣ್ಣ ಅವರನ್ನು ಬಿಜೆಪಿ ನಾಯಕರೇ ಸ್ವಾಗತಿಸುತ್ತಿದ್ದಾರೆ. ಈಗಾಗಲೇ ಒಂದು ಕಾಲು ಬಿಜೆಪಿಯಲ್ಲಿ ಇಟ್ಟಿರುವ ಅವರು, ನೂರಕ್ಕೆ ನೂರು ಬಿಜೆಪಿ ಸೇರ್ಪಡೆ ಆಗುತ್ತಾರೆ. ನಮ್ಮ ಸರ್ಕಾರ ಇಲ್ಲದೆ ಹೋಗಿದ್ದರೆ ಇಷ್ಟೊತ್ತಿಗಾಗಲೇ ಅವರು ಬಿಜೆಪಿ ಸೇರ್ಪಡೆ ಆಗಿರುತ್ತಿದ್ದರು ಎಂದು ವ್ಯಂಗ್ಯವಾಡಿದರು.
3.ಸೋದರನೊಂದಿಗೆ ಸೇರಿ ಚಿಕ್ಕಮ್ಮನನ್ನ ಅತ್ಯಾ*ರಗೈದ ಯಾದಗಿರಿಯ ಪೊಲೀಸ್
ಸಮಾಜವೇ ತಲೆ ತಗ್ಗಿಸುವಂತಹ ಘಟನೆಯೊಂದು ಯಾದಗಿರಿ (Yadagiri) ಜಿಲ್ಲೆಯಲ್ಲಿ ನಡೆದಿದೆ. ಸೋದರನೊಂದಿಗೆ ಸೇರಿಕೊಂಡು ನಿರಂತರವಾಗಿ ಅತ್ಯಾ*ಚಾರ ಎಸೆಗಲಾಗಿದೆ ಎಂದು ಸಂತ್ರಸ್ತ ಮಹಿಳೆ ಯಾದಗಿರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ (Police Station) ದೂರು ದಾಖಲಿಸಿದ್ದಾರೆ. ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಚಪೇಟ್ಲಾ ಗ್ರಾಮದ ನಿವಾಸಿಯಾಗಿರುವ ಸಂತ್ರಸ್ತೆ ಗಿರಿಜಾ (ಹೆಸರು ಬದಲಾಯಿಸಲಾಗಿದೆ), ಕಳೆದ ಏಳು ವರ್ಷದಿಂದ ತಮ್ಮ ಮೇಲೆ ಲೈಂ*ಗಿಕ ದೌರ್ಜನ್ಯ ನಡೆದಿದೆ ಎಂದು ಇಬ್ಬರು ಸೋದರರ ಮೇಲೆ ಗಂಭೀರ ಆರೋಪವನ್ನು (Allegation) ಮಾಡಿದ್ದಾರೆ. ಇಬ್ಬರು ಆರೋಪಿಗಳಿಗೆ ಮಹಿಳೆ ಸಂಬಂಧದಲ್ಲಿ ಚಿಕ್ಕಮ್ಮ (Aunty) ಆಗಬೇಕು ಎಂಬ ಮಾಹಿತಿ ಲಭ್ಯವಾಗಿದೆ.
4.ಬಾನು ಮುಷ್ತಾಕ್ ಕನ್ನಡ ಬರಹಗಾರ್ತಿ, ಕುಂಕುಮ ಒತ್ತಾಯ ತರವಲ್ಲ: ಸಿದ್ದರಾಮಯ್ಯ
ದಸರಾ ಹಬ್ಬವನ್ನು ನಾಡಹಬ್ಬವಾಗಿ ಆಚರಿಸುತ್ತೇವೆ. ಬೇರೆ ಧರ್ಮದವರನ್ನು ಉದ್ಘಾಟಕರನ್ನಾಗಿ ಆಹ್ವಾನಿಸಿದರೆ ಅವರಿಗೆ ಕುಂಕುಮ ಹಚ್ಚಿಕೊಂಡು ಬನ್ನಿ, ನೀವು ಹಿಂದೂಗಳಾಗಿ ಎನ್ನುವುದು ತರವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಾನು ಮುಷ್ತಾಕ್ ಅವರು ಕುಂಕುಮ ಹಚ್ಚಿಕೊಂಡು ದಸರಾ ಉದ್ಘಾಟಸಲಿ ಎಂದು ಬಿಜೆಪಿಯವರು ಒತ್ತಾಯಿಸಿದ್ದಾರೆ. ಆದರೆ, ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಓರ್ವ ಮುಸ್ಲಿಂ ಮಹಿಳೆ. ಅವರು ಕುಂಕುಮ ಹಚ್ಚಿಕೊಳ್ಳುವುದು ಅವರ ಧರ್ಮದಲ್ಲಿಲ್ಲ. ಮುಸ್ಲಿಂ ಗುರುಗಳು, ‘ನಾನು ಮುಷ್ತಾಕ್ ಅವರ ವಿರುದ್ಧ ಫತ್ವಾ ಹೊರಡಿಸಿಲ್ಲ’ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.
5.ಬೆಂಗಳೂರಲ್ಲಿ ಪಂಚ ಪಾಲಿಕೆಗಳ ಆಡಳಿತ: ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ರಚನೆ
ಬೆಂಗಳೂರು (ಸೆ.03): ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ 5 ನಗರಪಾಲಿಕೆ ರಚಿಸಿ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿದ್ದು, ಈ ಮೂಲಕ ರಾಜಧಾನಿ ಬೆಂಗಳೂರಿನ ಆಡಳಿತದ ಹೊಸ ಅಧ್ಯಾಯ ಮಂಗಳವಾರದಿಂದ ಆರಂಭಗೊಂಡಿದೆ. ಬೆಂಗಳೂರು ಆಡಳಿತ ಸುಧಾರಣೆ ದೃಷ್ಟಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ್ ನೇತೃತ್ವದ ಸಮಿತಿಯ ಶಿಫಾರಸಿನಂತೆ ರಚಿಸಲಾಗಿರುವ ಜಿಬಿಎ ಅಡಿಯಲ್ಲಿ ಕಾರ್ಯ ನಿರ್ವಹಣೆಗೆ 5 ಪಾಲಿಕೆಗಳನ್ನು ರಚಿಸಿ ಸರ್ಕಾರವು ಜು.19 ರಂದು ಕರಡು ಅಧಿಸೂಚನೆ ಹೊರಡಿಸಿತ್ತು.
