ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ 5 ನಗರಪಾಲಿಕೆ ರಚಿಸಿ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿದ್ದು, ಈ ಮೂಲಕ ರಾಜಧಾನಿ ಬೆಂಗಳೂರಿನ ಆಡಳಿತದ ಹೊಸ ಅಧ್ಯಾಯ ಮಂಗಳವಾರದಿಂದ ಆರಂಭಗೊಂಡಿದೆ.
ಬೆಂಗಳೂರು (ಸೆ.03): ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ 5 ನಗರಪಾಲಿಕೆ ರಚಿಸಿ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿದ್ದು, ಈ ಮೂಲಕ ರಾಜಧಾನಿ ಬೆಂಗಳೂರಿನ ಆಡಳಿತದ ಹೊಸ ಅಧ್ಯಾಯ ಮಂಗಳವಾರದಿಂದ ಆರಂಭಗೊಂಡಿದೆ. ಬೆಂಗಳೂರು ಆಡಳಿತ ಸುಧಾರಣೆ ದೃಷ್ಟಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ್ ನೇತೃತ್ವದ ಸಮಿತಿಯ ಶಿಫಾರಸಿನಂತೆ ರಚಿಸಲಾಗಿರುವ ಜಿಬಿಎ ಅಡಿಯಲ್ಲಿ ಕಾರ್ಯ ನಿರ್ವಹಣೆಗೆ 5 ಪಾಲಿಕೆಗಳನ್ನು ರಚಿಸಿ ಸರ್ಕಾರವು ಜು.19 ರಂದು ಕರಡು ಅಧಿಸೂಚನೆ ಹೊರಡಿಸಿತ್ತು.
ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು 30 ದಿನ ಕಾಲಾವಕಾಶ ನೀಡಲಾಗಿತ್ತು. ಸಾರ್ವಜನಿಕರಿಂದ ಬಂದ 55 ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ ಮಂಗಳವಾರ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಮತ್ತು ಬೆಂಗಳೂರು ಕೇಂದ್ರ ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಮಂಗಳವಾರದಿಂದಲೇ ಐದು ಪಾಲಿಕೆ ಅಸ್ತಿತ್ವಕ್ಕೆ ಬಂದಿದ್ದು, ಪ್ರತಿ ಪಾಲಿಕೆಗೆ ಆಯುಕ್ತರು, ಹೆಚ್ಚುವರಿ ಆಯುಕ್ತರು, ತಲಾ ಇಬ್ಬರು ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ ಸೇರಿದಂತೆ ವಿವಿಧ ಅಧಿಕಾರಿಗಳನ್ನು ನಿಯೋಜನೆ ಮಾಡುವ ಕಾರ್ಯವನ್ನೂ ಸರ್ಕಾರ ಮಾಡಿದೆ.
ಅದೇ ರೀತಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು, ಬಿಎಂಟಿಎಫ್‌ಗೆ ಅಧಿಕಾರಿಗಳನ್ನು ನಿಯೋಜನೆ ಮಾಡಿ ಆದೇಶಿಸಲಾಗಿದೆ. ಮುಖ್ಯ ಆಯುಕ್ತರಾಗಿ ಎಂ.ಮಹೇಶ್ವರ್ ರಾವ್, ವಿಶೇಷ ಆಯುಕ್ತರಾಗಿ ಮುನೀಶ್ ಮೌದ್ಗಿಲ್ (ಆಡಳಿತ, ಕಂದಾಯ, ಐಟಿ), ಸುರಳ್ಕರ್ ವಿಕಾಸ್ ಕಿಶೋರ್( ಶಿಕ್ಷಣ, ಆರೋಗ್ಯ), ಡಾ. ಹರೀಶ್ ಕುಮಾರ್(ಹಣಕಾಸು), ಪ್ರೀತಿ ಗೆಹ್ಲೋಟ್ (ಚುನಾವಣೆ, ಸಾರ್ವಜನಿಕ ಸಂಪರ್ಕ, ವಿಪತ್ತು ನಿರ್ವಹಣೆ, ಎಫ್‌ಇಸಿಸಿ) ಅವರನ್ನು ನಿಯೋಜಿಸಲಾಗಿದೆ.
ಜಿಬಿಎ ಕೇಂದ್ರ ಕಚೇರಿಯ ತಾಂತ್ರಿಕ ವಿಜಿಲೆನ್ಸ್ ಕೋಶದ ಮುಖ್ಯ ಎಂಜಿನಿಯರ್ ಹುದ್ದೆಗೆ ಜಿ.ವಿಶ್ವನಾಥ್, ಯೋಜನಾ ಅನುಷ್ಠಾನ ಘಟಕದ ಮುಖ್ಯ ಎಂಜಿನಿಯರ್ ಹುದ್ದೆಗೆ ಎಸ್.ವಿ.ರಾಜೇಶ್ (ಪ್ರಭಾರ), ಯೋಜನೆ ಮತ್ತು ಸಮನ್ವಯ ಮುಖ್ಯ ಎಂಜಿನಿಯರ್ ಹುದ್ದೆಗೆ ಡಾ.ಬಿ.ಜಿ.ರಾಘವೇಂದ್ರ ಪ್ರಸಾದ್ (ಅಧಿಕ ಪ್ರಭಾರ), ಓಎಫ್‌ಸಿ ಮುಖ್ಯ ಎಂಜಿನಿಯರ್ ಹುದ್ದೆಗೆ ಎಸ್.ಪಿ.ರಂಗನಾಥ್( ಅಧಿಕ ಪ್ರಭಾರ), ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಹುದ್ದೆಗೆ ಆನಂದ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಇದರೊಂದಿಗೆ ನಗರ ಪಾಲಿಕೆಯ ಪ್ರತಿ ವಲಯಕ್ಕೆ ಅಧೀಕ್ಷಕ ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ. ಐದು ಪಾಲಿಕೆಗೆ 50 ಕಾರ್ಯಪಾಲಕ ಎಂಜಿನಿಯರಿಂಗ್ ವಿಭಾಗಕ್ಕೆ ಹಾಗೂ 150 ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಭಾಗಕ್ಕೆ ಅಧಿಕಾರಿಗಳನ್ನು ನಿಯೋಜನೆ ಮಾಡುವುದಕ್ಕೆ ಮುಖ್ಯ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತರು ಹಂತ ಹಂತವಾಗಿ ನೇಮಕ ಮಾಡಿಕೊಳ್ಳಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
