ಪ್ರೀಮಿಯಂ ಬ್ರ್ಯಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ನಡೆಸಲಾಗಿದ್ದು, ಈ ಕುರಿತು ಚರ್ಚೆ ನಡೆಸಿ ಶೀಘ್ರದಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಹೇಳಿದ್ದಾರೆ.
ಬೆಂಗಳೂರು (ಸೆ.03): ರಾಜ್ಯದಲ್ಲಿ ಅಬಕಾರಿ ಇಲಾಖೆ ಆದಾಯ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ಗಳಿಕೆಯಾಗಿದೆ. ಹೀಗಾಗಿ ಪ್ರೀಮಿಯಂ ಬ್ರ್ಯಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ನಡೆಸಲಾಗಿದ್ದು, ಈ ಕುರಿತು ಚರ್ಚೆ ನಡೆಸಿ ಶೀಘ್ರದಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಹೇಳಿದ್ದಾರೆ. ವಿಧಾನಸೌಧದಲ್ಲಿ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಸಕ್ತ ಆರ್ಥಿಕ ವರ್ಷದ ಮೊದಲೆರಡು ತ್ರೈಮಾಸಿಕದಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಆದಾಯ ಗಳಿಕೆಯಾಗಿದೆ. ಈ ಅವಧಿಯಲ್ಲಿ 16,290 ಕೋಟಿ ರು. ಆದಾಯದ ನಿರೀಕ್ಷೆಯಿತ್ತು. ಆದರೆ, 16,358 ಕೋಟಿ ರು. ಆದಾಯ ಬಂದಿದ್ದು, 68.78 ಕೋಟಿ ರು. ಹೆಚ್ಚಿನ ಆದಾಯ ಬಂದಿದೆ ಎಂದು ಹೇಳಿದರು. ಅಬಕಾರಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಇಲಾಖೆಯಲ್ಲಿ ಮೊದಲ ಬಾರಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ.
ಇಲಾಖೆಯಲ್ಲಿ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. 5 ವರ್ಷಕ್ಕೊಮ್ಮೆ ಆನ್‌ಲೈನ್ ಮೂಲಕ ಪರವಾನಗಿ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಿಎಲ್ 7 ಪರವಾನಗಿ ಹಂತಗಳನ್ನು ಕಡಿತಗೊಳಿಸಲಾಗಿದೆ. ಇದೀಗ ಪ್ರೀಮಿಯಂ ಬ್ರ್ಯಾಂಡ್‌ನ ಮದ್ಯಗಳ ಬೆಲೆ ಇಳಿಕೆಗೂ ಚಿಂತನೆ ನಡೆಸಲಾಗಿದೆ ಎಂದರು. ಅಬಕಾರಿ ಇಲಾಖೆಯಲ್ಲಿ ದಕ್ಷತೆಯಿಂದ ಕೆಲಸ ಮಾಡದ, ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಅದರಂತೆ ಎ ವೃಂದದ 31, ಬಿ ವೃಂದದ 20 ಹಾಗೂ 43 ಅಬಕಾರಿ ಸಬ್ ಇನ್ಸ್‌ಪೆಕ್ಟರ್‌ಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಉಳಿಕೆ ಪರವಾನಗಿ ಕುರಿತ ಪ್ರಶ್ನೆಗೆ ಉತ್ತರಿಸಿದ ಆರ್.ಬಿ. ತಿಮ್ಮಾಪೂರ್, ಕೆಲ ಉಳಿಕೆ ಪರವಾನಗಿಗಳಿವೆ. ಅವುಗಳನ್ನು ಹರಾಜು ಮಾಡುವ ಚಿಂತನೆ ಮಾಡಿದ್ದೇವೆ ಎಂದರು. ಅಬಕಾರಿ ಆಯುಕ್ತ ವೆಂಕಟೇಶ್, ಹೆಚ್ಚುವರಿ ಆಯುಕ್ತರಾದ ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.
