ತುಮಕೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಕೇವಲ ರಸ್ತೆ, ಚರಂಡಿ ನಿರ್ಮಾಣದಿಂದ ಬಡವರ ಉದ್ದಾರ ಸಾಧ್ಯವಿಲ್ಲ, ಸಾವಿರಾರು ವರ್ಷಗಳ ಶೋಷಣೆ ಕೊನೆಗಾಣಿಸಲು ಗ್ಯಾರಂಟಿಗಳು ಅವಶ್ಯಕ ಎಂದರು.

ತುಮಕೂರು(ಡಿ.14): ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿರುವ ವಿರೋಧ ಪಕ್ಷಗಳ ನಾಯಕರಿಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ತಿರುಗೇಟು ನೀಡಿದ್ದಾರೆ. ತುಮಕೂರಿನಲ್ಲಿ ನಿನ್ನೆ ನಡೆದ ಬಂಜಾರ ಸಮುದಾಯದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ವಿರೋಧ ಪಕ್ಷದ ನಾಯಕರ ಉದ್ದೇಶ ಮತ್ತು ದೃಷ್ಟಿಕೋನದ ಕುರಿತು ತೀಕ್ಷ್ಣವಾದ ಪ್ರಶ್ನೆಗಳನ್ನು ಎತ್ತಿದರು.

ರಸ್ತೆ-ಚರಂಡಿ ನಿರ್ಮಾಣ ಬಡವರನ್ನು ಉದ್ದಾರ ಮಾಡುತ್ತದೆಯೇ?

'ಯಾರು ಗ್ಯಾರಂಟಿ ಕಾರ್ಯಕ್ರಮವನ್ನು ಟೀಕೆ ಮಾಡುತ್ತಾರೋ, ಈ ಕಾರ್ಯಕ್ರಮ ಒಪ್ಪೋದಿಲ್ಲವೋ, ಅವರಿಗೆ ಒಂದು ಪ್ರಶ್ನೆ; ಈ ಜನ ಏನಾಗಬೇಕು? ಆಯ್ತಪ್ಪ ನಾವು ಗ್ಯಾರಂಟಿ ಕೊಡೋದಿಲ್ಲ, ನಾಳೆಯಿಂದ ನಿಲ್ಲಿಸಿ ಬಿಡೋಣ. ಈ 58 ಸಾವಿರ ಕೋಟಿ ರೂ. ಏನು ನಾವು ಕೊಡ್ತಾ ಇದ್ದೀವಿ ನಾಳೆ ನಿಲ್ಲಿಸ್ತಿವಿ. ಆದರೆ, ನೀವು ಕೇವಲ ರಸ್ತೆ ಮಾಡೋದ್ರಿಂದ, ಚರಂಡಿ ಮಾಡೋದ್ರಿಂದ ಅಥವಾ ಇನ್ನೆನೋ ಕಾರ್ಯಕ್ರಮ ಮಾಡೋದ್ರಿಂದ ಆ ಬಡವರ ಜೀವನ ಏನಾಗುತ್ತದೆ? ಉದ್ದಾರ ಆಗುತ್ತದಾ? ಎಂದು ಅವರು ವಿರೋಧ ಪಕ್ಷಗಳ ನಡೆಯನ್ನು ಪ್ರಶ್ನಿಸಿದರು.

ಶೋಷಣೆ ಮುಂದುವರಿಯಬಾರದು ಎಂಬುದು ನಮ್ಮ ಉದ್ದೇಶ

ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ರಾಜ್ಯದಲ್ಲಿ ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಬಡವರಿಗಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ, ಹಾಗಂತ ನಾವು ರಸ್ತೆ ಮಾಡೋದನ್ನು ನಿಲ್ಲಿಸ್ತಿವಾ? ಮನೆಗಳನ್ನು ಕಟ್ಟೋದನ್ನು ನಿಲ್ಲಿಸ್ತಿವಾ? ಯಾವ ಕಾರ್ಯಕ್ರಮವನ್ನೂ ನಿಲ್ಲಿಸಿಲ್ಲ. ಒಂದಿಷ್ಟು ನಿಧಾನ ಆಗಿರಬಹುದು, ಒಪ್ಪಿಕೊಳ್ಳುತ್ತೇನೆ. ಆದರೆ, ಬಹಳ ಮುಖ್ಯವಾಗಿ ಮನುಷ್ಯನ ಜೀವನದಲ್ಲಿರುವ ಸಾವಿರಾರು ವರ್ಷದ ಶೋಷಣೆ ಮುಂದುವರಿಯಬಾರದು ಎಂಬುದೇ ನಮ್ಮೆಲ್ಲರ ಉದ್ದೇಶ. ಅದಕ್ಕಾಗಿಯೇ ನಾವು ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಸಚಿವರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.