ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ, ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ದಾವಣಗೆರೆಗೆ ತರಲಾಗುತ್ತಿದೆ. ಸಾರ್ವಜನಿಕರ ಅಂತಿಮ ದರ್ಶನಕ್ಕೆ ಹೈಸ್ಕೂಲ್ ಮೈದಾನದಲ್ಲಿ ವ್ಯವಸ್ಥೆ. ಕಲ್ಲೇಶ್ವರ ಮಿಲ್ ಆವರಣದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ.
ದಾವಣಗೆರೆ(ಡಿ.14): ರಾಜ್ಯ ರಾಜಕಾರಣದ ಹಿರಿಯ ಧುರೀಣ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ, ದಾವಣಗೆರೆಯಲ್ಲಿ ಅವರ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಗೆ ಪೊಲೀಸ್ ಇಲಾಖೆ ಭಾರಿ ಸಿದ್ಧತೆಗಳನ್ನು ಕೈಗೊಂಡಿದೆ. ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಅವರು ಇಂದು ರಾತ್ರಿ ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸಿದರು.
ತಡರಾತ್ರಿ ದಾವಣಗೆರೆ ತಲುಪಲಿರುವ ಪಾರ್ಥಿವ ಶರೀರ
ಶ್ಯಾಮನೂರು ಶಿವಶಂಕರಪ್ಪ ನಿವಾಸಕ್ಕೆ ಆಗಮಿಸಿದ ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಶ್ಯಾಮನೂರು ಶಿವಶಂಕರಪ್ಪನವರ ನಿಧನ ಹಿನ್ನೆಲೆ ಅಂತಿಮ ದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಂದು ತಡರಾತ್ರಿ 12 ಗಂಟೆಗೆ ಬೆಂಗಳೂರಿನಿಂದ ದಾವಣಗೆರೆಗೆ ಪಾರ್ಥಿವ ಶರೀರವನ್ನು ತರಲಾಗುತ್ತದೆ." ರಸ್ತೆ ಮೂಲಕ (ತುಮಕೂರು, ಚಿತ್ರದುರ್ಗ ಮಾರ್ಗವಾಗಿ) ತರಲಾಗುತ್ತಿದ್ದು, ಸೋಮವಾರ ಬೆಳಿಗ್ಗೆ ಸುಮಾರು 4 ಗಂಟೆಗೆ ದಾವಣಗೆರೆಗೆ ಪಾರ್ಥಿವ ಶರೀರ ತಲುಪುವ ನಿರೀಕ್ಷೆಯಿದೆ ಎಂದರು.
ಸ್ವಗೃಹದಿಂದ ಹೈಸ್ಕೂಲ್ ಮೈದಾನಕ್ಕೆ ಮೆರವಣಿಗೆ
ಸ್ವಗೃಹದಲ್ಲಿ ದರ್ಶನ: ಬೆಳಿಗ್ಗೆ 11 ಗಂಟೆಯವರೆಗೆ ಸ್ವಗೃಹದಲ್ಲಿ ಪೂಜೆ ಮತ್ತು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ವಗೃಹದಲ್ಲಿ ಪೂಜೆ ವಿಧಿವಿಧಾನಗಳು ಮುಗಿದ ನಂತರ, ಪಾರ್ಥಿವ ಶರೀರವನ್ನು ಹೈಸ್ಕೂಲ್ ಮೈದಾನದವರೆಗೆ ಮೆರವಣಿಗೆ ಮೂಲಕ ತರಲಾಗುವುದು. ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ.
ಅಭಿಮಾನಿಗಳು ಎಷ್ಟೇ ಜನ ಬಂದರೂ ಅದಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಅಭಿಮಾನಿಗಳು ಶಾಂತರೀತಿಯಲ್ಲಿ ಎಲ್ಲರೂ ಹೈಸ್ಕೂಲ್ ಮೈದಾನಕ್ಕೆ ಬಂದು ಅಂತಿಮ ದರ್ಶನ ಪಡೆಯಬಹುದು ಎಂದು ಎಸ್‌ಪಿ ಮನವಿ ಮಾಡಿದ್ದಾರೆ.
ಅಂತ್ಯಕ್ರಿಯೆ ಮತ್ತು ವಿವಿಐಪಿಗಳ ಆಗಮನಕ್ಕೆ ವ್ಯವಸ್ಥೆ
ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಯು ವೀರಶೈವ ಲಿಂಗಾಯತ ಸಂಪ್ರದಾಯದ ವಿಧಿ ವಿಧಾನಗಳಂತೆ ನಡೆಯಲಿದ್ದು, ಕಲ್ಲೇಶ್ವರ ಮಿಲ್ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು. ವಿಐಪಿಗಳ ಆಗಮನದ ಹಿನ್ನೆಲೆಯಲ್ಲಿ ಒಟ್ಟು 5 ಹೆಲಿಪ್ಯಾಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರು ನಾಳೆ (ಸೋಮವಾರ) ದಾವಣಗೆರೆಗೆ ಆಗಮಿಸಲಿದ್ದಾರೆ ಎಂದು ಎಸ್‌ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.


