top stories today: ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಆರೋಪಿ ದರ್ಶನ್‌ಗೆ ಜೈಲಿನಲ್ಲಿ ಮಂಚ ನಿರಾಕರಿಸಲಾಗಿದೆ. ಪ್ರವಾಹಪೀಡಿತ ರೈತರಿಗೆ ಸಿಎಂ ಸಿದ್ದರಾಮಯ್ಯ ಹೆಚ್ಚುವರಿ ಪರಿಹಾರ ಘೋಷಿಸಿದ್ದಾರೆ.

1.ದರ್ಶನ್‌ಗೆ ಜೈಲಲ್ಲಿ ಮಂಚ ಕೊಡಲಾಗದು ಎಂದ ಸರ್ಕಾರ: ನಟನ ಪರ ವಕೀಲರ ವಾದವೇನು? 

ಬೆಂಗಳೂರು (ಅ.01): ‘ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ಗೆ ನ್ಯಾಯಾಲಯದ ಆದೇಶ ಅನುಸಾರ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳಾದ ಚಾಪೆ, ದಿಂಬು, ಕಂಬಳಿ, ತಟ್ಟೆ, ಚೊಂಬು ನೀಡಲಾಗಿದೆ. ಒಂದು ಗಂಟೆ ವಾಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಪಲ್ಲಂಗ (ಮಂಚ/ಹಾಸಿಗೆ) ಕೇಳಿದರೆ, ಅದನ್ನು ನೀಡಲು ಜೈಲು ಕೈಪಿಡಿಯಲ್ಲಿ ಅವಕಾಶವಿಲ್ಲ...!’ ಕಾರಾಗೃಹದ ಕೈಪಿಡಿ ಅನುಸಾರ ತನಗೆ ಕನಿಷ್ಠ ಸೌಲಭ್ಯ ಕಲ್ಪಿಸಲು ನ್ಯಾಯಾಲಯ ಹೊರಡಿಸಿರುವ ಆದೇಶ ಪಾಲಿಸದ ಜೈಲಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಕ್ರಮ ಜರುಗಿಸಲು ಶಿಫಾರಸು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿರುವ ನಟ ದರ್ಶನ್‌ ಮನವಿಗೆ ಸರ್ಕಾರಿ ವಿಶೇಷ ಅಭಿಯೋಜಕರಾದ (ಎಸ್‌ಪಿಪಿ) ಪಿ.ಪ್ರಸನ್ನ ಕುಮಾರ್‌ ಮಂಡಿಸಿದ ವಾದವಿದು.

2.ಪ್ರವಾಹಪೀಡಿತ ರೈತರಿಗೆ 8500 ರು. ಹೆಚ್ಚುವರಿ ಬೆಳೆನಷ್ಟ ಪರಿಹಾರ: ಸಿಎಂ ಸಿದ್ದರಾಮಯ್ಯ

ಕಲಬುರಗಿ (ಅ.01): ರಾಜ್ಯದಲ್ಲಿ ಮಳೆ, ನೆರೆಯಿಂದಾಗಿ ಸಂಭವಿಸಿದ ಬೆಳೆಹಾನಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯ (ಎನ್‌ಡಿಆರ್‌ಎಫ್‌) ನಿಯಮದಂತೆ ಕೇಂದ್ರದಿಂದ ನೀಡಲಾಗುವ ಪರಿಹಾರದ ಜೊತೆಗೆ, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ 8,500 ರು.ಸೇರಿಸಿ ನೊಂದ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅಲ್ಲದೆ, ಕೇಂದ್ರದ ನೆರವಿಗೆ ಕಾಯದೇ ಸಮೀಕ್ಷೆ ಮುಗಿದ ನಂತರ ರಾಜ್ಯ ಪಾಲಿನ ಪರಿಹಾರ ನೀಡಲಾಗುವುದು ಎಂದಿದ್ದಾರೆ. ಅವರು ಪ್ರವಾಹ ಪೀಡಿತ ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ಬೀದರ್‌ ಜಿಲ್ಲೆಗಳ ವ್ಯಾಪ್ತಿಯಲ್ಲಿ 2 ಸುತ್ತು ವೈಮಾನಿಕ ಸಮೀಕ್ಷೆ ನಡೆಸಿದರು. ಈ ನಡುವೆ, ಅಧಿಕಾರಿಗಳ ಜತೆ ಸಭೆ ನಡೆಸಿ ಅವರು ಸುದ್ದಿಗಾರರಿಗೆ ನೆರೆ ಪರಿಹಾರದ ವಿವರ ನೀಡಿದರು. 

3.ಎಸಿ ರೂಂ ಬಿಟ್ಟು ಸಂತ್ರಸ್ತರ ನೆರವಿಗೆ ಧಾವಿಸಿ: ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ನವದೆಹಲಿ (ಅ.01): ಬೆಂಗಳೂರಿನಲ್ಲಿ ಎಸಿ ರೂಂಗಳಲ್ಲಿ ಕೂತು ಕಾಲಹರಣ ಮಾಡುವುದಲ್ಲ, ಸೋಮಾರಿತನ ಬಿಟ್ಟು ಮೊದಲು ನೆರೆ ಸಂತ್ರಸ್ತರ ನೆರವಿಗೆ ಬನ್ನಿ. ತಕ್ಷಣವೇ ಕಲ್ಯಾಣ ಕರ್ನಾಟಕ್ಕೆ ನೆರೆ ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯಲ್ಲಿ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಲ್ಯಾಣ ಕರ್ನಾಟಕದಲ್ಲಿ ನೆರೆ ಸಂಕಷ್ಟದಲ್ಲಿ ಜನರಿದ್ದರೆ ರಾಜ್ಯದಲ್ಲಿರುವ ಸರಕಾರ ʼಕುಂಭಕರ್ಣ ನಿದ್ರೆʼಯಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡರು.

4.ಕಾಂತಾರ ಚಾಪ್ಟರ್ 1 ಟಿಕೆಟ್‌ ₹1200ವರೆಗೂ ಬಿಕರಿ: 30 ದೇಶಗಳ 7000 ಸ್ಕೀನ್‌ಗಳಲ್ಲಿ ನಾಳೆ ತೆರೆಗೆ

ಬೆಂಗಳೂರು (ಅ.01): ರಿಷಬ್‌ ಶೆಟ್ಟಿ ನಟನೆ- ನಿರ್ದೇಶನದ, ಹೊಂಬಾಳೆ ಫಿಲಂಸ್‌ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ ‘ಕಾಂತಾರ ಚಾಪ್ಟರ್‌ 1’ ಗುರುವಾರ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಎಲ್ಲೆಡೆ ಹವಾ ಜೋರಾಗಿದೆ. ಬೆಂಗಳೂರಿನಲ್ಲಿ ಮೊದಲ ದಿನದ ಟಿಕೆಟ್‌ 1200 ರು.ವರೆಗೂ ಬಿಕರಿಯಾಗಿದೆ. ಇಷ್ಟು ದುಬಾರಿ ಮೊತ್ತ ನಿಗದಿ ಮಾಡಿರುವ ಶೋಗಳ ಎಲ್ಲ ಟಿಕೆಟ್‌ಗಳು ಸೋಲ್ಡೌಟ್‌ ಆಗಿವೆ! ದೇಶಾದ್ಯಂತ 6500ರಿಂದ 7000 ಪರದೆಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದ್ದು, ಕನ್ನಡದ ಯಾವೊಂದು ಚಿತ್ರ ಕೂಡ ಮೊದಲ ದಿನ ಇಷ್ಟೊಂದು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿರಲಿಲ್ಲ ಎಂಬುದು ಗಮನಾರ್ಹ.

5.ಹಿಂದುಗಳು ಆತ್ಮರಕ್ಷಣೆಗೆ ಶಸ್ತ್ರ ಇಟ್ಟುಕೊಳ್ಳಿ: ಸಂಸದ ನಾರಾಯಣಸಾ ಭಾಂಡಗೆ ವಿವಾದ ಹೇಳಿದ್ದೇನು?

ಬಾಗಲಕೋಟೆ (ಅ.01): ‘ಹಿಂದುಗಳು ತಮ್ಮ ಆತ್ಮರಕ್ಷಣೆಗಾಗಿ ಶಸ್ತ್ರ, ಆಯುಧ ಇಟ್ಟುಕೊಳ್ಳಿ. ತಮ್ಮ ರಕ್ಷಣೆಗಾಗಿ ಆಯುಧ ಇಟ್ಟುಕೊಳ್ಳಬೇಕು. ಎಲ್ಲ ಕಡೆ ಪೊಲೀಸರು ಬರೋದಕ್ಕೆ ಆಗೋದಿಲ್ಲ. ಎಲ್ಲ ಕಡೆ ಪೊಲೀಸರು ಇರಲಿಕ್ಕೆ ಸಾಧ್ಯವಿಲ್ಲ. ಹೀಗಾಗಿ ಆಯುಧ ಮನೆಯಲ್ಲಿದ್ದರೆ ಅನ್ಯಾಯದ ವಿರುದ್ಧ ಎತ್ತಲಿಕ್ಕೆ ಬರುತ್ತದೆ ಅಲ್ಲವೆ?’ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.