ದ್ವೇಷ ಭಾಷಣದ ವಿರುದ್ದ ಕಾನೂನು ತಂದಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ನಾವು ಇದನ್ನು ಖಂಡಿಸುತ್ತೇವೆ, ಅಲ್ಲದೆ ಇದರ ವಿರುದ್ದ ಬಿಜೆಪಿ ಕಾನೂನಾತ್ಮಕ ಹೋರಾಟ ಮಾಡಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು (ಡಿ.12): ಕರ್ನಾಟಕ ರಾಜ್ಯ ಸರ್ಕಾರ ಇಂದು ದ್ವೇಷ ಭಾಷಣದ ವಿರುದ್ದ ಕಾನೂನು ತಂದಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ನಾವು ಇದನ್ನು ಖಂಡಿಸುತ್ತೇವೆ, ಅಲ್ಲದೆ ಇದರ ವಿರುದ್ದ ಬಿಜೆಪಿ ಕಾನೂನಾತ್ಮಕ ಹೋರಾಟ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ವಾಕ್ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯಮೊಟಕುಗೊಳಿಸುವ ಕಾನೂನು. ಈಗಾಗಲೇ ದ್ವೇಷದ ಭಾಷಣ ತಡೆಯಲು ಸಾಕಷ್ಟು ಕಾನೂನುಗಳಿವೆ.
ಆ ಕಾನೂನು ಬಳಸಬಹುದು. ಆದರೆ, ಹತ್ತು ವರ್ಷದ ಶಿಕ್ಷೆ ಕಾನೂನು ತಂದು ಸರ್ಕಾರದ ವಿರುದ್ದ, ಅವರ ಪಕ್ಷದ ವಿರುದ್ದ ಮಾತನಾಡುವವರಿಗೆ ಜಾಮೀನುರಹಿತ ವಾರಂಟ್ ತಂದು ಜೈಲಿಗೆ ಕಳುಹಿಸುವ ಹುನ್ನಾರ ಇದರಲ್ಲಿ ಇದೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧ ಎಂದು ಆರೋಪಿಸಿದ್ದಾರೆ. ಒಂದು ರೀತಿಯಲ್ಲಿ ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಆಗಿದೆ ಎಂಬ ಭಾವನೆ ಬರುತ್ತಿದೆ. ಸರ್ಕಾರ ಯಾವುದೇ ಅಭಿವೃದ್ದಿ ಕೆಲಸ ಮಾಡದೆ, ಎಲ್ಲ ರಂಗದಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿದೆ.
ದೀನ ದಲಿತರ ಹಣವನ್ನು ಲಪಟಾಯಿಸಿರುವ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಅದರ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ, ಅವರ ಧ್ವನಿ ಧಮನಿಸುವ ಧಮನಕಾರಿ ಕಾನೂನು ತಂದಿದ್ದಾರೆ. ಇದು ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರ ರಾಜಕಾರಣಕ್ಕೆ ಇದು ಕಪ್ಪು ಚುಕ್ಕೆ. ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನದ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಅದರ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ. ಅಲ್ಲದೆ ಇದರ ವಿರುದ್ಧ ಬಿಜೆಪಿ ಕಾನೂನಾತ್ಮಕ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ಪರಿಸರಕ್ಕೆ ಹಾನಿಯಾಗದಂತೆ ತಿರುವು ಆಗಲಿ
ಉತ್ತರ ಕನ್ನಡ ಜಿಲ್ಲೆಯ ಪರಿಸರಕ್ಕೆ ಹಾನಿಯಾಗದಂತೆ ಬೇಡ್ತಿ–ವರದಾ ನದಿ ತಿರುವು ಆಗಬೇಕು. ಹೀಗಾಗಿಯೇ ಈ ಹಿಂದಿನ ಯೋಜನೆಯ ಸಮಗ್ರ ವರದಿ ಬದಲಿಸಿ ಹೊಸದಾಗಿ ಸಿದ್ಧಪಡಿಸಲಾಗಿದೆ. ಆದರೂ ಜನರಲ್ಲಿ ಆತಂಕವಿರುವ ಕಾರಣ ರಾಜ್ಯ ಸರ್ಕಾರದಲ್ಲಿ ಆ ಬಗ್ಗೆ ಚರ್ಚಿಸಿ ಯಾರಿಗೂ ತೊಂದರೆಯಾಗದ ರೀತಿ ನೀರು ಕೊಂಡೊಯ್ಯಲು ಸಿದ್ಧತೆ ಮಾಡಲಾಗುವುದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಮಾಧ್ಯಮದವರ ಜತೆ ಮಾತನಾಡಿದ ಅವರು, ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರತಿ ತಾಲೂಕಿನಲ್ಲಿ ಆರಂಭಿಸಬೇಕು. ಜತೆಗೆ, ಹೆಚ್ಚುವರಿ ಬೆಂಬಲ ಬೆಲೆ ನೀಡಿ ಸರಕನ್ನು ರೈತರಿಂದ ಖರೀದಿಸಬೇಕು.
ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡಬಾರದು. ಈಗಾಗಲೇ ಮೆಕ್ಕೆಜೋಳ ಬೆಂಬಲಬೆಲೆ ಯೋಜನೆಯಡಿ ಸರ್ಕಾರ ಖರೀದಿಸುವುದಾಗಿ ಘೋಷಿಸಿದೆ. ಆದರೂ ಬೆಂಬಲ ಬೆಲೆ ಮೊತ್ತ ಕಡಿಮೆಯೆಂದು, ಹೆಚ್ಚುವರಿ ದರ ಕೊಡಬೇಕು ಎಂದು ರೈತರ ಹೋರಾಟ ಜಾರಿಯಲ್ಲಿದೆ. ಆದರೆ, ರಾಜ್ಯ ಸರ್ಕಾರ ರೈತರ ಜತೆ ಚೆಲ್ಲಾಟ ಆಡುತ್ತಿದೆ ಎಂದರು. ಕಳೆದ ವರ್ಷ ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಟನ್ ಮೆಕ್ಕೆಜೋಳ ಬೆಳೆದಿತ್ತು. ಈ ವರ್ಷ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದರೂ 54 ಲಕ್ಷ ಮೆಟ್ರಿಕ್ ಟನ್ ಬೆಳೆಯಲಾಗಿದ್ದು, 2 ಲಕ್ಷ ಮೆಟ್ರಿಕ್ ಟನ್ ನಷ್ಟ ಆಗಿದೆ. ಇಂತಹ ಸಂದರ್ಭದಲ್ಲಿ ರೈತರನ್ನು ಉಳಿಸಲು ಏನು ಮಾಡಬೇಕು ಎಂಬುದನ್ನು ಸರ್ಕಾರ ಯೋಚಿಸಬೇಕು. ಆದರೆ, ರಾಜ್ಯ ಸರ್ಕಾರಕ್ಕೆ ರೈತಪರ ಚಿಂತನೆಯಿಲ್ಲ ಎಂದು ಟೀಕಿಸಿದರು.


