ರಿಷಬ್ ಶೆಟ್ಟಿ ನಟನೆ- ನಿರ್ದೇಶನದ, ಹೊಂಬಾಳೆ ಫಿಲಂಸ್ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ ‘ಕಾಂತಾರ ಚಾಪ್ಟರ್ 1’ ಗುರುವಾರ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಎಲ್ಲೆಡೆ ಹವಾ ಜೋರಾಗಿದೆ.
ಬೆಂಗಳೂರು (ಅ.01): ರಿಷಬ್ ಶೆಟ್ಟಿ ನಟನೆ- ನಿರ್ದೇಶನದ, ಹೊಂಬಾಳೆ ಫಿಲಂಸ್ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ ‘ಕಾಂತಾರ ಚಾಪ್ಟರ್ 1’ ಗುರುವಾರ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಎಲ್ಲೆಡೆ ಹವಾ ಜೋರಾಗಿದೆ. ಬೆಂಗಳೂರಿನಲ್ಲಿ ಮೊದಲ ದಿನದ ಟಿಕೆಟ್ 1200 ರು.ವರೆಗೂ ಬಿಕರಿಯಾಗಿದೆ. ಇಷ್ಟು ದುಬಾರಿ ಮೊತ್ತ ನಿಗದಿ ಮಾಡಿರುವ ಶೋಗಳ ಎಲ್ಲ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ! ದೇಶಾದ್ಯಂತ 6500ರಿಂದ 7000 ಪರದೆಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದ್ದು, ಕನ್ನಡದ ಯಾವೊಂದು ಚಿತ್ರ ಕೂಡ ಮೊದಲ ದಿನ ಇಷ್ಟೊಂದು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿರಲಿಲ್ಲ ಎಂಬುದು ಗಮನಾರ್ಹ.
7ಕ್ಕೂ ಅಧಿಕ ಭಾಷೆಗಳಲ್ಲಿರುವ ಈ ಸಿನಿಮಾ 30 ದೇಶಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ. ಇದು ಕೂಡ ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲೇ ಮೊದಲು. 34 ನಿಮಿಷದಲ್ಲೇ 10 ಸಾವಿರ ಟಿಕೆಟ್‌ಗಳು ಬುಕ್ ಆಗಿವೆ. ಇಷ್ಟೊಂದು ವೇಗದಲ್ಲಿ ಟಿಕೆಟ್ ಖರೀದಿಸಲ್ಪಟ್ಟ ಮೊದಲ ಕನ್ನಡ ಸಿನಿಮಾ ಎಂಬ ಹಿರಿಮೆಗೂ ಕಾಂತಾರ ಭಾಜನವಾಗಿದೆ. ಅಲ್ಲದೆ, ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್‌ನಿಂದಲೇ 3 ಕೋಟಿ ರು.ಗಳನ್ನು ಚಿತ್ರ ಗಳಿಸಿದ್ದು, ಈ ಸಾಧನೆ ಮಾಡಿದ ಮೊದಲ ಕನ್ನಡ ಸಿನಿಮಾ ಎನಿಸಿಕೊಂಡಿದೆ. ದೇಶಾದ್ಯಂತ ಟಿಕೆಟ್‌ಗಳ ಅಡ್ವಾನ್ಸ್ ಬುಕಿಂಗ್‌ನಿಂದಲೇ 11 ಕೋಟಿ ರು. ಗಳಿಕೆಯಾಗಿದೆ ಎನ್ನಲಾಗಿದೆ. ರಾಜ್ಯದ ಹಲವೆಡೆ ಬೆಳಗ್ಗೆ 6.30ರಿಂದಲೇ ಪ್ರದರ್ಶನ ನಿಗದಿಯಾಗಿದ್ದು, ಮೊದಲ ದಿನವೇ 2000ಕ್ಕೂ ಅಧಿಕ ಶೋಗಳು ನಡೆಯಲಿವೆ.
ಪಿವಿಆರ್ ಐನಾಕ್ಸ್‌ಗಳಲ್ಲಿ ಮೊದಲ 4 ದಿನಗಳಿಗೆ ದೇಶಾದ್ಯಂತ ಒಟ್ಟು 3 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಬುಕಿಂಗ್ ಆಗಿವೆ ಎನ್ನಲಾಗಿದೆ. ಆಂಧ್ರದಲ್ಲಿ ಬಾಯ್ಕಾಟ್ ಭೀತಿಯ ನಡುವೆಯೂ ಪವನ್ ಕಲ್ಯಾಣ್ ಅವರು ಚಿತ್ರದ ಪರವಾಗಿ ಧ್ವನಿ ಎತ್ತಿದ್ದಾರೆ. ‘ಕನ್ನಡ ಸಿನಿಮಾಗಳಿಗೆ ನಾವು ತೊಂದರೆ ಕೊಡುವುದು ಸರಿಯಲ್ಲ. ನಾವು ಒಳ್ಳೆಯ ಹೃದಯ ಮತ್ತು ರಾಷ್ಟ್ರೀಯ ಭಾವನೆಯಿಂದ ಯೋಚಿಸಬೇಕು. ಕನ್ನಡದ ಕಂಠೀರವ ಡಾ. ರಾಜ್‌ಕುಮಾರ್ ಅವರಿಂದ ಹಿಡಿದು ಕಿಚ್ಚ ಸುದೀಪ್, ಉಪೇಂದ್ರ, ಶಿವರಾಜ್‌ಕುಮಾರ್, ರಿಷಬ್ ಶೆಟ್ಟಿವರೆಗೆ ಎಲ್ಲರಿಗೂ ತೆಲುಗು ಜನರು ಯಾವಾಗಲೂ ಬೆಂಬಲ ನೀಡಿದ್ದಾರೆ. ನಾವು ಸಹೋದರತ್ವದಿಂದ ಮುಂದುವರಿಯಬೇಕು’ ಎಂದಿದ್ದಾರೆ. ಆಂಧ್ರದಲ್ಲಿ ಟಿಕೆಟ್ ದರ ಹೆಚ್ಚಳಕ್ಕೂ ಹಸಿರು ನಿಶಾನೆ ಸಿಕ್ಕಿದೆ.
ಅಮೆರಿಕದಲ್ಲೂ ಕ್ರೇಜ್: ಕರ್ನಾಟಕದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅತ್ಯಧಿಕ ಟಿಕೆಟ್ ಮಾರಾಟದ ದಾಖಲೆ ಬರೆದಿರುವ ಈ ಸಿನಿಮಾದ ಬಗ್ಗೆ ಅಮೆರಿಕ ಸೇರಿದಂತೆ ಹೊರದೇಶಗಳಲ್ಲೂ ಕ್ರೇಜ್ ಹೆಚ್ಚಿದೆ. ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, 3 ಕೋಟಿ ರು.ಗಳಷ್ಟು ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಇಲ್ಲಿ ‘ಕಾಂತಾರ 1’ ಸಿನಿಮಾ ಒಟ್ಟು 80 ಕೋಟಿ ರು.ಗೂ ಅಧಿಕ ಗಳಿಕೆ ಮಾಡುವ ನಿರೀಕ್ಷೆ ಇದೆ.
ಕಾಂತಾರ ಚಾಪ್ಟರ್-1 ಪ್ರಥಮಗಳು
- 7ಕ್ಕೂ ಅಧಿಕ ಭಾಷೆಗಳಲ್ಲಿರುವ ಕಾಂತಾರ-1 ಸಿನಿಮಾ 30 ದೇಶಗಳಲ್ಲಿ ಏಕಕಾಲಕ್ಕೆ ತೆರೆಗೆ
- ಇಷ್ಟೊಂದು ದೇಶ, ಭಾಷೇಲಿ ಬಿಡುಗಡೆ ಕನ್ನಡ ಚಿತ್ರೋದ್ಯಮ ಇತಿಹಾಸದಲ್ಲೇ ಮೊದಲು
- ಬುಕಿಂಗ್ ಆರಂಭವಾದ ಮೊದಲ 34 ನಿಮಿಷದಲ್ಲೇ 10 ಸಾವಿರ ಟಿಕೆಟ್‌ಗಳು ಬುಕ್ಕಿಂಗ್
- ಇಷ್ಟೊಂದು ವೇಗದಲ್ಲಿ ಟಿಕೆಟ್ ಖರೀದಿಸಲ್ಪಟ್ಟ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿ
- ದೇಶಾದ್ಯಂತ ಟಿಕೆಟ್‌ಗಳ ಅಡ್ವಾನ್ಸ್ ಬುಕಿಂಗ್‌ನಿಂದಲೇ ಭರ್ಜರಿ 11 ಕೋಟಿ ರು. ಗಳಿಕೆ
- ಅಮೆರಿಕದಲ್ಲೇ ಈ ’ ಸಿನಿಮಾ ಒಟ್ಟು 80 ಕೋಟಿ ರು.ಗೂ ಅಧಿಕ ಗಳಿಕೆ ಮಾಡುವ ನಿರೀಕ್ಷೆ
