ಜಾತಿ ಗಣತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ಛಿದ್ರ ಮಾಡಲು ಸಿದ್ದರಾಮಯ್ಯ ಸರ್ಕಾರ ಹೊರಟಿದೆ. ಶೇ.99 ರಷ್ಟು ಈ ವರದಿ ಬಿಡುಗಡೆಯಾಗಲ್ಲ. ಒಂದು ವೇಳೆ ವರದಿ ಜಾರಿಗೊಳಿಸಿದರೆ ಸಿದ್ದರಾಮಯ್ಯ ತಮ್ಮ ಸ್ಥಾನ ಕಳೆದುಕೊಳ್ಳುವುದು ನಿಶ್ಚಿತ ಎಂದು ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.

ಶಿವಮೊಗ್ಗ (ಸೆ.30): ಜಾತಿ ಗಣತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ಛಿದ್ರ ಮಾಡಲು ಸಿದ್ದರಾಮಯ್ಯ ಸರ್ಕಾರ ಹೊರಟಿದೆ. ಶೇ.99 ರಷ್ಟು ಈ ವರದಿ ಬಿಡುಗಡೆಯಾಗಲ್ಲ. ಒಂದು ವೇಳೆ ವರದಿ ಜಾರಿಗೊಳಿಸಿದರೆ ಸಿದ್ದರಾಮಯ್ಯ ತಮ್ಮ ಸ್ಥಾನ ಕಳೆದುಕೊಳ್ಳುವುದು ನಿಶ್ಚಿತ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಜಾತಿ ಗಣತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ಛಿದ್ರ ಮಾಡುವ ಸಂಚು ಮಾಡಿದೆ. ಸಚಿವ ಸಂಪುಟ ಸಭೆಯಲ್ಲೇ ಬಹುತೇಕ ಸಚಿವರು ಈ ಸಮೀಕ್ಷೆಯನ್ನು ವಿರೋಧಿಸಿದ್ದಾರೆ. ಸಮೀಕ್ಷೆ ಸಾಧು ಸಂತರಲ್ಲೂ ಬಿರುಕನ್ನುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತರ ಬಗ್ಗೆ ಸಚಿವ ಈಶ್ವರ ಖಂಡ್ರೆ ಸಮೀಕ್ಷೆ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಗೊಂದಲ ಮೂಡಿಸಿದ್ದಾರೆ. ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಬೇಕು ಎಂದು ಮನವಿ ಮಾಡಿದ ಅವರು ವೀರಶೈವ ಸಮಾಜವನ್ನು ಛಿದ್ರ ಮಾಡಿದ ಶ್ರೇಯಸ್ಸು ಕಾಂಗ್ರಸ್ಸಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು. ಯಾವುದೇ ಪೂರ್ವ ತಯಾರಿ ಇಲ್ಲದೆ ಜಾತಿ ಸಮೀಕ್ಷೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈಗಾಗಲೇ 185 ಕೋಟಿ ರು. ವೆಚ್ಚದ ಕಾಂತರಾಜ ವರದಿಯನ್ನು ಸಿದ್ದರಾಮಯ್ಯ ಹಾಳು ಮಾಡಿದ್ದಲ್ಲದೆ ಈಗ 420 ಕೋಟಿ ರು ವೆಚ್ಚದಲ್ಲಿ ಸಮೀಕ್ಷೆ ಮಾಡಿ ಅದರ ವರದಿಯನ್ನು ಬಿಡುಗಡೆ ಮಾಡುವ ತಾಕತ್ತೂ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಟೀಕಿಸಿದರು.

ಹಿಂದೂ ಸಮಾಜ ಒಡೆಯುವುದೇ ಕಾಂಗ್ರೆಸ್‌ ಅಜೆಂಡಾ

ಹಿಂದೂ ಸಮಾಜ ಒಡೆಯುವುದೇ ಕಾಂಗ್ರೆಸ್‌ ಸರ್ಕಾರದ ಮುಖ್ಯ ಅಜೆಂಡಾವಾಗಿದ್ದು, ಜಾತಿ ಜನಗಣತಿ ಹೆಸರಿನಲ್ಲಿ ಹಿಂದೂ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಜಾತಿ ಜನಗಣತಿಯ ವಿವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22ರಿಂದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಗಣತಿಯನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಗಣತಿಯನ್ನು ಜಾತಿ ಗಣತಿಯನ್ನಾಗಿ ಪರಿವರ್ತಿಸಿ ಧರ್ಮ ಒಡೆಯುವ ಕೆಲಸಕ್ಕೆ ಮತ್ತೊಮ್ಮೆ ಕೈಹಾಕಿದೆ. ಈ ಹಿಂದೆ ನಡೆಸಿದ ಕಾಂತರಾಜ್ ವರದಿಯನ್ನೇ ಯಥಾವತ್ತಾಗಿ ಜಾರಿಗೆ ತರುತ್ತೇನೆ ಎಂದು ಹೇಳುತ್ತಿದ್ದ ಸಿದ್ದರಾಮಯ್ಯನವರು ನಂತರ ಹೈಕಮಾಂಡ್ ಒತ್ತಡಕ್ಕೆ ಮಣಿದು ಮತ್ತೆ ಜನಗಣತಿ ಮಾಡುವುದಾಗಿ ಹೇಳಿದ್ದರು.

150 ಕೋಟಿಗೂ ಅಧಿಕ ಹಣವನ್ನು ವ್ಯಯಿಸಿ ಮಾಡಿದ ಗಣತಿಯನ್ನು ಕಸದ ಬುಟ್ಟಿಗೆ ಎಸೆದು ಈಗ ಮತ್ತೆ ಸುಮಾರು 420 ಕೋಟಿ ರು. ವೆಚ್ಚದಲ್ಲಿ ಗಣತಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು. ಈ ಹಿಂದಿನ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಜಾತಿ ಪಟ್ಟಿಯಲ್ಲಿ ಮತಾಂತರಗೊಂಡ ಹಿಂದೂಗಳಿಗಾಗಿಯೇ ಹೆಚ್ಚುವರಿ ಜಾತಿಗಳನ್ನು ಸೃಷ್ಟಿಸಿ ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಈ ರೀತಿ ಸುಮಾರು 50ಕ್ಕೂ ಹೆಚ್ಚು ಜಾತಿಗಳನ್ನು ಕ್ರಿಶ್ಚಿಯನ್ ಧರ್ಮದ ಹೆಸರಿನಲ್ಲಿ ಸೇರಿಸಿ ಹಿಂದೂಯೇತರ ಧರ್ಮೀಯರ ಜನಸಂಖ್ಯೆಯನ್ನು ವ್ಯವಸ್ಥಿತವಾಗಿ ಹೆಚ್ಚು ತೋರಿಸುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.