ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ದೋಚುತ್ತ, ಅಧಃಪತನದತ್ತ ನೂಕುತ್ತಿದೆ. ರಾಜ್ಯದ ಸಂಪತ್ತನ್ನು ಹಾಳು ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ನವದೆಹಲಿ (ಅ.01): ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ದೋಚುತ್ತ, ಅಧಃಪತನದತ್ತ ನೂಕುತ್ತಿದೆ. ರಾಜ್ಯದ ಸಂಪತ್ತನ್ನು ಹಾಳು ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹಾಗೂ ಬಿಲ್ ಪಾವತಿ ಬಗ್ಗೆ ಗುತ್ತಿಗೆದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಇದು ರಾಜ್ಯ ಸರ್ಕಾರದ ನಿಜ ಬಣ್ಣವನ್ನು ಬಯಲು ಮಾಡಿದೆ. ಅಭಿವೃದ್ಧಿ ಕಾಮಗಾರಿಗಳು ನಡೆದು ವರ್ಷಗಳೇ ಕಳೆದರೂ ಹಣ ನೀಡದೆ ಸತಾಯಿಸುತ್ತಿದೆ.
ಕಮಿಷನ್ ದಂಧೆಯಲ್ಲಿ ತೊಡಗಿ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರ ವಿರುದ್ಧ ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿ, ಮುಖ್ಯಮಂತ್ರಿಗೆ ಪತ್ರ ಬರೆದರೂ ಕಿಮ್ಮತ್ತಿಲ್ಲದಂತಾಗಿದೆ ಎಂದರು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅವೈಜ್ಞಾನಿಕ ಗ್ಯಾರಂಟಿಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ರಾಜ್ಯದ ಸಂಪತ್ತನ್ನೇ ಹಾಳು ಮಾಡಿದೆ ಎಂದು ಆರೋಪಿಸಿದರು. ಒಂದೆಡೆ ರಾಜ್ಯದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿ, ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಮತ್ತೊಂದೆಡೆ, ಗ್ಯಾರಂಟಿಗಳ ನೆಪದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ. ವರ್ಗಾವಣೆಯನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡಿದೆ ಎಂದು ಜೋಶಿ ಟೀಕಿಸಿದರು.
ವಿಕಸಿತ ಭಾರತಕ್ಕೆ ಶಕ್ತಿ
ಜಿಎಸ್‌ಟಿ ಸುಧಾರಣೆ ವಿಕಸಿತ ಭಾರತಕ್ಕೆ ಶಕ್ತಿ ನೀಡಲಿದೆ. ಯುಪಿಎ ಸರ್ಕಾರದ ಕಾಲಕ್ಕೆ ಹೋಲಿಸಿದರೆ ಕೊರೋನಾ, ಎರಡು ಯುದ್ಧಗಳು, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಡುವೆಯೂ ದೇಶದ ಆರ್ಥಿಕತೆ ಸುಧಾರಿಸಿದೆ. ವಿಶ್ವದ 4ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. 2047ರ ವೇಳೆಗೆ ದೇಶದ ಆರ್ಥಿಕತೆ 30 ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸುವ ಸಂಕಲ್ಪ ನಮ್ಮದಾಗಿದೆ ಎಂದು ಹೇಳಿದರು. ತೆರಿಗೆ ಇಳಿಕೆಯಿಂದ ವಾರ್ಷಿಕ ₹2.75 ಲಕ್ಷ ಕೋಟಿ ಸರ್ಕಾರಕ್ಕೆ ಆದಾಯ ಕಡಿಮೆಯಾಗಲಿದೆ. ಕೈಗೆಟಕುವ ತೆರಿಗೆಯಿಂದ ಬರುವ ಲಾಭವನ್ನು ಬಡವರಿಗೆ ಹಂಚಿಕೆ ಮಾಡಲು ಕೇಂದ್ರ ಬಯಸಿದ್ದು, ಶೇ. 5 ಹಾಗೂ ಶೇ. 18ರಂತೆ ಸ್ಲ್ಯಾಬ್ ಜಿಎಸ್‌ಟಿ ನಿಗದಿ ಪಡಿಸಲಾಗಿದೆ. ಈ ವಿನಾಯಿತಿಯಿಂದ ಜನರ ಕೈಯಲ್ಲಿ ₹1ರಿಂದ ₹1.5 ಲಕ್ಷ ಕೋಟಿ ಉಳಿತಾಯವಾಗಲಿದೆ ಎಂದು ತಿಳಿಸಿದರು.
ಸರಕು ಮತ್ತು ಸೇವಾ ತೆರಿಗೆ ಇಳಿಕೆಯಿಂದ ಆರ್ಥಿಕ ವ್ಯವಹಾರ ವೃದ್ಧಿಸುತ್ತದೆ. ಇದರಿಂದ ದೇಶದ ಜಿಡಿಪಿ ಹೆಚ್ಚಲಿದೆ ಎಂಬ ವಿಶ್ವಾಸವಿದೆ. ಜಿಎಸ್‌ಟಿ ಇಳಿಕೆಯಿಂದ ಜನರು ಖರ್ಚು ಜಾಸ್ತಿ ಮಾಡುತ್ತಾರೆ. ಇದರಿಂದ ಉತ್ಪಾದಕತೆ ಹೆಚ್ಚಿ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಬದಲಾವಣೆಯಿಂದ ಜಿಡಿಪಿಯಲ್ಲಿ ಶೇ. 0.3ರಿಂದ 0.6ರಷ್ಟು ವೃದ್ಧಿಯಾಗಲಿದೆ ಎಂದು ಎಸ್ ಆ್ಯಂಡ್ ಪಿ ರೇಟಿಂಗ್ ಏಜೆನ್ಸಿ ಅಂದಾಜಿಸಿದೆ ಎಂದರು. ಜಿಎಸ್‌ಟಿ ವಿನಾಯಿತಿ ಲಾಭವನ್ನು ವ್ಯಾಪಾರಸ್ಥರು ಗ್ರಾಹಕರಿಗೆ ವರ್ಗಾಯಿಸುವ ಕುರಿತಂತೆ ನಿಗಾ ವಹಿಸಲಾಗುತ್ತಿದ್ದು, ತಪ್ಪಿದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಈ ಹಿಂದೆ ಜಿಎಸ್‌ಟಿ ಜಾರಿ ಮಾಡಿದಾಗ ವಿರೋಧ ವ್ಯಕ್ತವಾಗಿತ್ತು. ಅದನ್ನು ತೆಗೆದು ಹಾಕುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
