ಹಿಂದುಗಳು ತಮ್ಮ ಆತ್ಮರಕ್ಷಣೆಗಾಗಿ ಶಸ್ತ್ರ, ಆಯುಧ ಇಟ್ಟುಕೊಳ್ಳಿ. ತಮ್ಮ ರಕ್ಷಣೆಗಾಗಿ ಆಯುಧ ಇಟ್ಟುಕೊಳ್ಳಬೇಕು. ಎಲ್ಲ ಕಡೆ ಪೊಲೀಸರು ಬರೋದಕ್ಕೆ ಆಗೋದಿಲ್ಲ ಎಂದು ನಾರಾಯಣಸಾ ಭಾಂಡಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆ (ಅ.01): ‘ಹಿಂದುಗಳು ತಮ್ಮ ಆತ್ಮರಕ್ಷಣೆಗಾಗಿ ಶಸ್ತ್ರ, ಆಯುಧ ಇಟ್ಟುಕೊಳ್ಳಿ. ತಮ್ಮ ರಕ್ಷಣೆಗಾಗಿ ಆಯುಧ ಇಟ್ಟುಕೊಳ್ಳಬೇಕು. ಎಲ್ಲ ಕಡೆ ಪೊಲೀಸರು ಬರೋದಕ್ಕೆ ಆಗೋದಿಲ್ಲ. ಎಲ್ಲ ಕಡೆ ಪೊಲೀಸರು ಇರಲಿಕ್ಕೆ ಸಾಧ್ಯವಿಲ್ಲ. ಹೀಗಾಗಿ ಆಯುಧ ಮನೆಯಲ್ಲಿದ್ದರೆ ಅನ್ಯಾಯದ ವಿರುದ್ಧ ಎತ್ತಲಿಕ್ಕೆ ಬರುತ್ತದೆ ಅಲ್ಲವೆ?’ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಮೈಮೇಲೆ ಎರಗಿ ಬಂದಾಗ ರಕ್ಷಣೆ ಮಾಡಿಕೊಳ್ಳಬೇಕಲ್ಲವಾ? ನಮ್ಮನ್ನೇ ರಕ್ಷಣೆ ಮಾಡಿಕೊಳ್ಳದಿದ್ದರೆ ದೇಶ ಹೇಗೆ ರಕ್ಷಣೆ ಮಾಡೋದು? ಸಮಾಜ ರಕ್ಷಣೆ ಹೇಗೆ ಮಾಡೋದು? ಆಯುಧ ಪೂಜೆ ದಿನ ಎಲ್ಲರೂ ಆಯುಧ ಪೂಜೆ ಮಾಡಬೇಕು. ಆಯುಧ ಪೂಜೆ ಮಾಡೋದಕ್ಕೂ ಶಸ್ತ್ರ ಖರೀದಿಸಿ’ ಎಂದು ಕರೆ ನೀಡಿದರು.ಅಲ್ಲದೇ ‘ಸುಮ್ಮನೆ ಕಾರು ಜೀಪು ವಾಹನ ಪೂಜೆ ಮಾಡೋದಲ್ಲ. ಆಯುಧ ಪೂಜೆ ನಮ್ಮ ಸಂಸ್ಕೃತಿ. ಆಯುಧ ಇಲ್ಲದವರು ಆಯುಧ ಖರೀದಿ ಮಾಡಿ ಪೂಜೆ ಮಾಡಿ’ ಎಂದು ಸಲಹೆ ನೀಡಿದರು.

‘ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯಲ್ಲಿ ನವರಾತ್ರಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಪುರಾಣಕಾಲದಿಂದಲೂ ದೇವಾನು ದೇವತೆಗಳು ದುಷ್ಟರ ದಮನಕ್ಕಾಗಿ ಆಯುಧಗಳನ್ನು ಬಳಕೆ ಮಾಡಿರುವುದನ್ನು ನಾವು ಕೇಳಿದ್ದೇವೆ. ದೇಶ ಹಾಗೂ ಧರ್ಮದ ರಕ್ಷಣೆಗಾಗಿ ಮತ್ತು ನಮ್ಮಗಳ ಸ್ವಯಂ ರಕ್ಷಣೆಗಾಗಿ ಆಯುಧಗಳು ಅಗತ್ಯ ಆಯುಧಗಳ ಪೂಜೆಯೂ ಅಷ್ಟೇ ಮುಖ್ಯ. ನವರಾತ್ರಿ ಹಿನ್ನೆಲೆಯಲ್ಲಿ ನಾಳೆ ಆಯುಧ ಪೂಜೆ ಇದ್ದು, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಆಯುಧ ಪೂಜೆ ನೆರವೇರಿಸಬೇಕು. ಆಯುಧಗಳು ಇಲ್ಲದವರು ಖರೀದಿಸಿ ಶ್ರದ್ದಾ ಭಕ್ತಿಯಿಂದ ಪೂಜಿಸಬೇಕು’ ಎಂದು ಹೇಳಿದರು.

ಗಣತಿಯಲ್ಲಿ ಇಲ್ಲ ಸ್ಪಷ್ಟತೆ

‘ರಾಜ್ಯ ಸರ್ಕಾರ ಕೈಗೊಂಡಿರುವ ಗಣತಿ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವು ಕಾಣಿಸುತ್ತಿಲ್ಲ. ಹಲವಾರು ಗೊಂದಲಗಳಿಂದ ಕೂಡಿದ್ದು ಈಗಾಗಲೇ ಹಲವಾರು ಅಂಶಗಳನ್ನು ಸರ್ಕಾರ ಕೈ ಬಿಡುವ ಮೂಲಕ ಮುಜುಗರ ಅನುಭವಿಸಿದೆ. ಸರ್ಕಾರ ಸದ್ಯ ನಡೆಸುತ್ತಿರುವ ಗಣತಿ ಕಾರ್ಯದಲ್ಲಿ ಸಾಕಷ್ಟು ಗೊಂದಲಗಳಿವೆ. ಸರ್ಕಾರ ಈಗ ನಡೆಸುತ್ತಿರುವ ಗಣತಿ ಯಾವ ಪುರುಷಾರ್ಥಕ್ಕಾಗಿ?’ ಎಂದು ಪ್ರಶ್ನಿಸಿದರು. ‘ಗಣತಿ ಕಾರ್ಯದಿಂದ ಯಾವುದೇ ಪ್ರಯೋಜನ ಜನತೆಗೆ ಆಗುವುದಿಲ್ಲ. ರಾಜ್ಯದ ಜನತೆಯೂ ಅಷ್ಟಾಗಿ ಈ ಬಗ್ಗೆ ಆಸಕ್ತಿ ಹೊಂದಿಲ್ಲ. ಆದಾಗ್ಯೂ ಗಣತಿ ವಿರೋಧಿಸುವುದಿಲ್ಲ. ಗಣತಿದಾರರು ಬಂದಾಗ ಅಗತ್ಯ ಮಾಹಿತಿ ನೀಡುವೆ’ ಎಂದು ತಿಳಿಸಿದರು.