15 ವರ್ಷ ಬೇರೆ ಇದ್ದ ದಂಪತಿಗೆ ಕೊನೆಗೂ ಡೈವೋರ್ಸ್ ಭಾಗ್ಯ!
15 ವರ್ಷಗಳ ಹಿಂದೆಯೇ ಬೇರ್ಪಟ್ಟು ಪ್ರತ್ಯೇಕವಾಗಿ ಜೀವನ ನಡೆಸುತ್ತಿರುವ ದಂಪತಿಯನ್ನು ಮತ್ತೆ ಒಂದಾಗಿಸಿ ವೈವಾಹಿಕ ಜೀವನ ಮುಂದುವರಿಸುವಂತೆ ಒತ್ತಾಯಿಸುವುದು ದುರಂತವಾಗಲಿದೆ. ಅವರ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆಯಾಗಲಿದೆ ಎಂದು ತೀರ್ಮಾನಿಸಿದ ಹೈಕೋರ್ಟ್, ಇಳಿವಯಸ್ಸಿನಲ್ಲಿರುವ ಪತಿ-ಪತ್ನಿಗೆ ವಿಚ್ಛೇದನ ಮಂಜೂರು ಮಾಡಿದೆ.

ವೆಂಕಟೇಶ್ ಕಲಿಪಿ
ಬೆಂಗಳೂರು (ಸೆ.11) : ಸಾಮರಸ್ಯ ಮತ್ತು ಹೊಂದಾಣಿಕೆ ಕೊರತೆಯಿಂದ ವಿಚ್ಛೇದನ ಕೋರುವವರನ್ನು ಒಂದುಗೂಡಿಸಲು ನ್ಯಾಯಾಲಯಗಳು ಶತಪ್ರಯತ್ನ ಮಾಡುವುದು ಸಹಜ. ಆದರೆ, 15 ವರ್ಷಗಳ ಹಿಂದೆಯೇ ಬೇರ್ಪಟ್ಟು ಪ್ರತ್ಯೇಕವಾಗಿ ಜೀವನ ನಡೆಸುತ್ತಿರುವ ದಂಪತಿಯನ್ನು ಮತ್ತೆ ಒಂದಾಗಿಸಿ ವೈವಾಹಿಕ ಜೀವನ ಮುಂದುವರಿಸುವಂತೆ ಒತ್ತಾಯಿಸುವುದು ದುರಂತವಾಗಲಿದೆ. ಅವರ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆಯಾಗಲಿದೆ ಎಂದು ತೀರ್ಮಾನಿಸಿದ ಹೈಕೋರ್ಟ್, ಇಳಿವಯಸ್ಸಿನಲ್ಲಿರುವ ಪತಿ-ಪತ್ನಿಗೆ ವಿಚ್ಛೇದನ ಮಂಜೂರು ಮಾಡಿದೆ.
ಕಳೆದ 28 ವರ್ಷಗಳ ಹಿಂದೆ ನೆರವೇರಿರುವ ವಿವಾಹವನ್ನು ಸಂಪೂರ್ಣವಾಗಿ ಕಡಿದುಕೊಳ್ಳಲು ತೀರ್ಮಾನಿಸಿದ ನಗರದ ದಂಪತಿ ಸಮ್ಮತಿ ಮೇರೆಗೆ ವಿಚ್ಛೇದನ ಕೋರಿ ಸಲ್ಲಿಸಿದ್ದ ಸಂಧಾನ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಚ್, ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿದೆ.
ಮತ್ತೊಬ್ಬರ ಜೊತೆ ಗಂಡ ಇರಬಾರದು; ವಿಚ್ಛೇದನ ಪಡೆದು ಬಾಯ್‌ಫ್ರೆಂಡ್ ಜತೆ ಮಗು ಮಾಡಿಕೊಂಡ ನಟಿ ಕಲ್ಕಿ!
ದಂಪತಿ ಜೊತೆಗೆ ಸಮಾಲೋಚನೆ ನಡೆಸಿದ ನಂತರ ಅವರನ್ನು ಒಂದು ಮಾಡುವುದರ ಬದಲಿಗೆ 15 ವರ್ಷಗಳ ಹಿಂದೆಯೇ ಬೇರ್ಪಟ್ಟು ಸ್ವತಂತ್ರವಾಗಿ ಜೀವನ ನಡೆಸುತ್ತಿರುವ ಪತಿ-ಪತ್ನಿಗೆ ಉಳಿದ ಜೀವನವನ್ನು ಶಾಂತಿ-ನೆಮ್ಮದಿಯಿಂದ ಸಾಗಿಸಲು ಅನುವು ಮಾಡುವುದೇ ಒಳಿತು ಎಂಬ ತೀರ್ಮಾನಕ್ಕೆ ಬಂದ ಹೈಕೋರ್ಚ್ ಈ ಆದೇಶ ಮಾಡಿದೆ.
ಹಿರಿಯ ನಾಗರಿಕ ದಂಪತಿ:
ಪ್ರಕರಣದಲ್ಲಿ 15 ವರ್ಷಗಳ ಹಿಂದೆಯೇ ಪತಿ-ಪತ್ನಿ ಬೇರ್ಪಟ್ಟು, ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಅವರ ವೈವಾಹಿಕ ಸಂಬಂಧವು ದುರ್ಬಲವಾಗಿದೆ. ಪತಿ (62 ವರ್ಷ) ಹಿರಿಯ ನಾಗರಿಕರಾಗಿದ್ದಾರೆ. ಪತ್ನಿ ಸಹ ಹಿರಿಯ ನಾಗರಿಕರಾಗುವ ವಯಸ್ಸಿನ (58 ವರ್ಷ) ಅಂಚಿನಲ್ಲಿದ್ದಾರೆ. ಅವರು ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ಸಹ ನೋಡುವುದಿಲ್ಲ ಎಂಬುದು ನ್ಯಾಯಾಲಯಕ್ಕೆ ಸ್ಪಷ್ಟವಾಗಿದೆ. ಒಂದು ವೇಳೆ ಅವರನ್ನು ಒಂದುಗೂಡಿಸಿದರೆ, ಅದು ದಂಪತಿಗೆ ಹೆಚ್ಚು ನೋವು ಉಂಟುಮಾಡಲಿದೆ. ಅವರ ಸಾಮರಸ್ಯಕ್ಕೆ ಧಕ್ಕೆಯಾಗಲಿದೆ ಎಂದು ಆದೇಶದಲ್ಲಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಸಂಧಾನ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸುವುದರಿಂದ ದಂಪತಿ ತಮ್ಮ ಜೀವನವನ್ನು ಶಾಂತಿ ಮತ್ತು ಸಾಮರಸ್ಯದಿಂದ ಮುನ್ನಡೆಸಿಕೊಂಡು ಹೋಗಲು ಅನುವು ಮಾಡಿಕೊಟ್ಟಂತಾಗುತ್ತದೆ. ಆನಂದವೆಂದು ಪರಿಗಣಿಸಲ್ಪಟ್ಟಿರುವ ವಿವಾಹ ಸಂಬಂಧವು ಈಗ ನೊಗವಾಗಿ ಮಾರ್ಪಟ್ಟಿದೆ. ಆ ನೊಗದ ಹೊರೆಯನ್ನು ತೆಗೆದುಹಾಕಬೇಕು. ಅದು ಬಿಟ್ಟು ಅವರನ್ನು ಮತ್ತೆ ಒಂದಾಗಲು ಒತ್ತಾಯ ಮಾಡಿದರೆ, ಅದು ದುರಂತವಾಗಲಿದೆ. ಅದರಂತೆ ಸಂಧಾನ ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳಿಗೆ ಅನುಸಾರವೇ ವಿಚ್ಛೇದನ ಮಂಜೂರು ಮಾಡಲಾಗುತ್ತಿದೆ ಎಂದು ತೀರ್ಮಾನಿಸಿದ ಹೈಕೋಟ್, 1995ರ ಜೂ.5ರಂದು ಬೆಂಗಳೂರಿನಲ್ಲಿ ನಡೆದ ವಿವಾಹವನ್ನು ಅನೂರ್ಜಿತಗೊಳಿಸಿ, ವಿಚ್ಛೇದನ ಮಂಜೂರು ಮಾಡಿದೆ.
ಪತ್ನಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿ:
ರೂಪಾ ಮತ್ತು ರವೀಂದ್ರ (ಹೆಸರು ಬದಲಿಸಲಾಗಿದೆ) 1995ರ ಜೂ.5ರಂದು ಮದುವೆಯಾಗಿದ್ದರು. ದಂಪತಿಗೆ ಮಕ್ಕಳು ಇಲ್ಲ. 2007ರವರೆಗೆ ಸಂಸಾರ ನಡೆಸಿದ್ದ ಅವರು, ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. 2011ರಲ್ಲಿ ಕ್ರೌರ್ಯ ಮತ್ತು ಪರಿತ್ಯಾಗ ಆಧಾರದಲ್ಲಿ ಹಿಂದು ವಿವಾಹ ಕಾಯ್ದೆ ಸೆಕ್ಷನ್ 13(1)(ಎ)(ಬಿ) ಅಡಿ ವಿಚ್ಛೇದನ ಕೋರಿ ರೂಪಾ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 2018ರ ಏ.16ರಂದು ಕೌಟುಂಬಿಕ ನ್ಯಾಯಾಲಯವು ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಇದರಿಂದ ರೂಪಾ ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಪೋಷಕರ ವಿಚ್ಛೇದನದಿಂದ ಖಿನ್ನತೆ : 7ನೇ ತರಗತಿ ಬಾಲಕ ಸಾವಿಗೆ ಶರಣು
ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಾಗ ಜಂಟಿ ಮೆಮೋ ಸಲ್ಲಿಸಿದ ದಂಪತಿ, 15 ವರ್ಷಗಳಿಂದ (2007) ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇವೆ. ಸ್ವತಂತ್ರವಾಗಿ ಜೀವನ ಸಾಗಿಸುತ್ತಿದ್ದೇವೆ. ಇಬ್ಬರ ನಡುವೆ ಹೊಂದಾಣಿಕೆ ಕೊರತೆಯಿದೆ. ಸಾಮರಸ್ಯ ಇಲ್ಲವಾಗಿದ್ದು, ಅದನ್ನು ಸರಿಪಡಿಸಲಾಗದು. ಮತ್ತೆ ಒಂದಾಗುವ ಯಾವುದೇ ಸಾಧ್ಯತೆ ಇಲ್ಲ. ಪರಸ್ಪರ ದೂರ ಇರಲು ಬಯಸಿದ್ದೇವೆ. ಹಿತೈಷಿಗಳು, ಹಿರಿಯರು, ಸಂಬಂಧಿಕರು, ಸ್ನೇಹಿತರೊಂದಿಗೆ ಸಲೋಚನೆ ನಡೆಸಿ, ನಮ್ಮ ನಡುವಿನ ವಿವಾದವನ್ನು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದೇವೆ. ವಿಚ್ಛೇದನ ಪಡೆಯಲು ಸಮ್ಮತಿಯಿದೆ. ಹಾಗಾಗಿ, ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿ ಉಳಿದ ಜೀವನವನ್ನು ಶಾಂತಿ-ನೆಮ್ಮದಿಯಿಂದ ಸಾಗಿಸಲು ನಮಗೆ ಅನುಮತಿ ನೀಡಬೇಕು ಎಂದು ಕೋರಿದ್ದರು.