ನನ್ನ, ಎಚ್.ಡಿ.ರೇವಣ್ಣ ಕುಟುಂಬ ಬೇರೆ ಬೇರೆ: ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ರೇವಣ್ಣ ಕುಟುಂಬ ಮತ್ತು ನನ್ನ ಕುಟುಂಬ ಅನೇಕ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದೆ. ಅವರು ಏನೇ ಮಾಡಿದರೂ ಅದಕ್ಕೆ ನಾನು ಜವಾಬ್ದಾರಿಯೂ ಅಲ್ಲ, ಪ್ರತಿಕ್ರಿಯಿಸಬೇಕಾಗಿಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಶಿವಮೊಗ್ಗ (ಏ.30): ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್ ಡ್ರೈವ್ ಪ್ರಕರಣದಲ್ಲಿ ನಮ್ಮ ಕುಟುಂಬವನ್ನು ಎಳೆತರುವುದು ಸರಿಯಲ್ಲ. ಎಚ್.ಡಿ.ರೇವಣ್ಣ ಕುಟುಂಬ ಮತ್ತು ನನ್ನ ಕುಟುಂಬ ಅನೇಕ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದೆ. ಅವರು ಏನೇ ಮಾಡಿದರೂ ಅದಕ್ಕೆ ನಾನು ಜವಾಬ್ದಾರಿಯೂ ಅಲ್ಲ, ಪ್ರತಿಕ್ರಿಯಿಸಬೇಕಾಗಿಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು. ಈ ವಿಷಯದಲ್ಲಿ ಕುಮಾರಸ್ವಾಮಿ ಹೆಸರು ಎಳೆತರುವುದು ಸರಿಯಲ್ಲ. ನನ್ನ ಮತ್ತು ದೇವೇಗೌಡರಿಗೆ ಸಂಬಂಧಿಸಿದ್ದಾಗಿದ್ದರೆ ನಮ್ಮ ಕುಟುಂಬ ಎಂದು ನಾನು ಉತ್ತರಿಸಬಹುದಿತ್ತು. ಇದು ನನಗೆ ಅಥವಾ ನಮ್ಮ ಕುಟುಂಬಕ್ಕೆ ಮಾತ್ರವಲ್ಲ ಇಡೀ ಸಮಾಜಕ್ಕೆ ಮುಜುಗರ ತರುವ ವಿಷಯ ಎಂದು ಹೇಳಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಎಸ್ಐಟಿ ರಚಿಸಿದೆ. ಇದರ ತನಿಖಾ ವರದಿ ಬರಲಿ. ಆ ಬಳಿಕ ನೋಡೋಣ. ಈ ನೆಲದ ಕಾನೂನು ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಎಲ್ಲರೂ ತಲೆಬಾಗಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ನಾನೀಗಲೇ ಹೇಳಿದ್ದೇನೆ. ಈ ವಿಷಯದಲ್ಲಿ ಯಾರನ್ನೂ ರಕ್ಷಿಸುವುದಾಗಲಿ, ಯಾವ ರೀತಿಯಲ್ಲೂ ವಹಿಸಿಕೊಳ್ಳುವ ಪ್ರಶ್ನೆಯಾಗಲಿ ಇಲ್ಲ ಎಂದರು.
ಪ್ರಜ್ವಲ್ ಪ್ರಕರಣವನ್ನು ಪ್ರಧಾನಿ ಮೋದಿ, ಬಿಜೆಪಿ ಹೊಣೆ ಹೊರಬೇಕೆಂಬುದು ಹಾಸ್ಯಾಸ್ಪದ: ಚೇತನ್ ಅಹಿಂಸಾ
ಇದೇ ವೇಳೆ ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆಯೇ ಎಂಬ ಪ್ರಶ್ನೆಗೆ, ಇರಬಹುದು. ಚುನಾವಣೆಗೆ ಮೂರು ದಿನ ಇರುವಾಗ ಈ ರೀತಿ ಪೆನ್ ಡ್ರೈವ್ ಹಂಚಲು ಕಾರಣ ಯಾರು? ಯಾಕಾಗಿ ಹಂಚಿದರು ಎಂದು ಪ್ರಶ್ನಿಸಿದರು. ಪ್ರಜ್ವಲ್ ವಿದೇಶಕ್ಕೆ ಹೋಗಿದ್ದಾರೆಂಬ ವಿಷಯ ಕುರಿತು, ನನಗೆ ಹೇಗೆ ಮಾಹಿತಿ ಇರಲು ಸಾಧ್ಯ? ಸರ್ಕಾರಕ್ಕೆ ಗೊತ್ತಿರಬೇಕು. ಸರ್ಕಾರ ಈ ವಿಷಯದಲ್ಲಿ ಮಾಹಿತಿ ನೀಡಬೇಕು. ಅವನೇನು ನಿತ್ಯ ಎಲ್ಲಿಗೆ ಹೋಗುತ್ತಾನೆ ಎಂದು ನನಗೆ ಹೇಳಿ ಹೋಗುತ್ತಾನೇನು ಎಂದು ಖಾರವಾಗಿ ಪ್ರಶ್ನಿಸಿದರು.