Asianet Suvarna News Asianet Suvarna News

ಭಾರತ ಸೂಪರ್ ಪವರ್ ಆಗುತ್ತಿದೆ, ನಾವಿಲ್ಲಿ ಭಿಕ್ಷೆ ಬೇಡುವಂತಾಗಿದೆ: ಪಾಕಿಸ್ತಾನ ನಾಯಕ

ಭಾರತ ಹಾಗೂ ಪಾಕಿಸ್ತಾನದ ಈಗಿನ ಆರ್ಥಿಕ ಸ್ಥಿತಿಗತಿಗಳನ್ನು ಹೋಲಿಕೆ ಮಾಡಿ ಅಲ್ಲಿನ ನಾಯಕರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗಾದ್ರೆ ಪಾಕಿಸ್ತಾನದ ನಾಯಕ ಏನ್ ಹೇಳಿದ್ದಾರೆ? 

Today India aspires to be a superpower while we struggle to avert bankruptcy Top Pakistan leader anu
Author
First Published Apr 30, 2024, 11:36 AM IST

ಇಸ್ಲಾಮಾಬಾದ್ (ಏ.30):  ಪಾಕಿಸ್ತಾನದ ಆರ್ಥಿಕ ಸ್ಥಿತಿಯನ್ನು ಭಾರತದೊಂದಿಗೆ ತುಲನೆ ಮಾಡಿ ಅಲ್ಲಿನ ರಾಜಕೀಯ ನಾಯಕರೊಬ್ಬರು ನೀಡಿರುವ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜಮಿಯತ್ ಉಲೆಮ-ಇಸ್ಲಾಂ ಫಝ್ಲ (ಜೆಯುಐ-ಎಫ್) ಮುಖ್ಯಸ್ಥ ಹಾಗೂ ಪಾಕಿಸ್ತಾನದ ಬಲಪಂಥೀಯ ಇಸ್ಲಾಮಿಕ ನಾಯಕ ಮೌಲನ ಫಜ್ಲುರ್ ರೆಹಮಾನ್ ತನ್ನ ದೇಶವನ್ನು ನೆರೆಯ ಭಾರತದೊಂದಿಗೆ ಹೋಲಿಕೆ ಮಾಡಿ, ಸ್ವಾತಂತ್ರ್ಯದ ನಂತರದಲ್ಲಿ ಈ ಎರಡೂ ರಾಷ್ಟ್ರಗಳ ಅಭಿವೃದ್ಧಿಯಲ್ಲಿನ ಭಿನ್ನತೆಯನ್ನು ಬೊಟ್ಟು ಮಾಡಿ ತೋರಿಸಿದ್ದಾರೆ. ಇಂದು ಭಾರತ ವಿಶ್ವದ ಸೂಪರ್ ಪವರ್ ಆಗುವತ್ತ ಹೆಜ್ಜೆ ಹಾಕುತ್ತಿದೆ. ಆದರೆ, ನಾವು ದಿವಾಳಿಯಾಗೋದನ್ನು ತಪ್ಪಿಸಲು ಹೆಣಗಾಡುತ್ತಿದ್ದೇವೆ ಎಂದಿದ್ದಾರೆ. 

'ಭಾರತ ಹಾಗೂ ನಮ್ಮನ್ನು ಹೋಲಿಕೆ ಮಾಡಿ ನೋಡುವ. ಈ ಎರಡೂ ರಾಷ್ಟ್ರಗಳು ಒಂದೇ ದಿನ ಸ್ವಾತಂತ್ರ್ಯ ಪಡೆದವು. ಇಂದು ಭಾರತ ಸೂಪರ್ ಪವರ್ ಆಗುವ ಆಕಾಂಕ್ಷೆ ಹೊಂದಿದೆ. ಆದರೆ, ನಾವು ದಿವಾಳಿಯಾಗೋದ್ರಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದೇವೆ' ಎಂದು ನ್ಯಾಷನಲ್ ಅಸೆಂಬ್ಲಿಯಲ್ಲಿ ರೆಹಮಾನ್ ಹೇಳಿಕೆ ನೀಡಿದ್ದಾರೆ. ಅಲ್ಲದೆ, ದೇಶದ ರಾಜಕೀಯ ವ್ಯವಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಬಲ ವ್ಯವಸ್ಥೆ ಪ್ರಯತ್ನಿಸುತ್ತಿರೋದನ್ನು ಅವರು ಟೀಕಿಸಿದರು. 

ರೆಹಮಾನ ತನ್ನ ಈ ಹಿಂದಿನ ಪ್ರತಿಸ್ಪರ್ಧಿ ಪಾಕಿಸ್ತಾನ ತೆಹ್ರೀಕ್ -ಇ-ಇನ್ಸಾಫ್ (ಪಿಟಿಐ) ಪಕ್ಷಕ್ಕೆ ಬೆಂಬಲ ಸೂಚಿಸಿದರು.  ಸಭೆಗಳನ್ನು ಆಯೋಜಿಸಲು ಪಿಟಿಐಗೆ ಹಕ್ಕಿದೆ ಎಂದು ಭಾಷಣದ ಸಂದರ್ಭದಲ್ಲಿ  ರೆಹಮಾನ್ ಪ್ರತಿಪಾದಿಸಿದರು. ಇನ್ನು ಈ ಹಿಂದಿನ ಚುನಾವಣೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಆ ಪ್ರಕ್ರಿಯೆಯ ನ್ಯಾಯಸಮ್ಮತೆ ಬಗ್ಗೆ ಪ್ರಶ್ನಿಸಿದರು. ಅಲ್ಲದೆ, ಪಾಕಿಸ್ತಾನದ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಬದ್ಧತೆಯನ್ನು ನಿರ್ವಹಣೆ ಮಾಡಬೇಕಾದ ಅಗತ್ಯವನ್ನು ಎತ್ತಿ ಹೇಳಿದರು.

ಪಿಟಿಐ ಬಹುಮತವನ್ನು ಸಂಸತ್ತಿನಲ್ಲಿ ಒಪ್ಪಿಕೊಂಡು, ಅವರಿಗೆ ಸರ್ಕಾರ ರಚನೆಗೆ ಅನುವು ಮಾಡಿಕೊಡುವಂತೆ ಈಗ ಅಧಿಕಾರದಲ್ಲಿರುವ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್ ) ಹಾಗೂ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಸಮ್ಮಿಶ್ರ ಸರ್ಕಾರವನ್ನು ರೆಹಮಾನ್ ಒತ್ತಾಯಿಸಿದ್ದಾರೆ.

'ಅಸಾದ್ ಕ್ವೈಸರ್ ಬೇಡಿಕೆ ಸರಿಯಾಗಿದೆ. ಹಾಗೆಯೇ ರ್ಯಾಲಿ ಆಯೋಜಿಸೋದು ಪಿಟಿಐ ಹಕ್ಕಾಗಿದೆ' ಎಂದು ಭಾಷಣದಲ್ಲಿ ರೆಹಮಾನ್ ಪ್ರತಿಪಾದಿಸಿದರು. 

ರಾಜಕೀಯ ವಿಚಾರಗಳ ಜೊತೆಗೆ ರೆಹಮಾನ್, ದೇಶದ ಆಡಳಿತ ನಿರ್ವಹಣೆಯಲ್ಲಿ ಸಂಸ್ಥೆ ಹಾಗೂ ಅಧಿಕಾರಿಗಳ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ರಾಜಕೀಯ ನಿರ್ಧಾರ ಕೈಗೊಳ್ಳುವುದು ಹಾಗೂ ಬದ್ಧತೆಯಲ್ಲಿನ ಅಸಮತೋಲನವನ್ನು ಟೀಕಿಸಿದರು. 

ಇನ್ನು ನೆರೆಯ ಭಾರತದೊಂದಿಗೆ ಹೋಲಿಕೆ ಮಾಡುವ ಮೂಲಕ ಪಾಕಿಸ್ತಾನದಲ್ಲಿನ ಆರ್ಥಿಕ ಸವಾಲುಗಳ ಬಗ್ಗೆ ರೆಹಮಾನ ಬೆಳಕು ಚೆಲ್ಲಿದ್ದಾರೆ. ಅಲ್ಲದೆ, ಆಡಳಿತ ನಿರ್ವಹಣೆಯಲ್ಲಿ ಇಸ್ಲಾಮಿಕ ನೀತಿಗಳನ್ನು ಎತ್ತಿ ಹಿಡಿಯಬೇಕಾದ ಮಹತ್ವವನ್ನು ಒತ್ತಿ ಹೇಳಿದ್ದಾರೆ. 

ಪಾಕಿಸ್ತಾನದ ರಾಜಕೀಯ ವ್ಯವಸ್ಥೆಯಲ್ಲಿ ಪಿಟಿಐಗೆ ಜೆಯುಐ-ಎಫ್ ನಾಯಕ ಬೆಂಬಲ ಸೂಚಿಸಿರೋದು ಮೈತ್ರಿಕೂಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ. ಈ ಹಿಂದೆ ಪಿಟಿಐ ಬದ್ಧ ವೈರಿ ಹಾಗೂ ಇಮ್ರಾನ್ ಖಾನ್ ಅವರ ಟೀಕಾಕಾರರಾಗಿದ್ದ ರೆಹಮಾನ್ ಅವರು ಪಿಟಿಐ ಜೊತೆಗೆ ಸಂಧಾನ ಮಾಡಿಕೊಂಡಿರೋದು ದೇಶದೊಳಗಿನ ಸಂಕೀರ್ಣ ರಾಜಕೀಯ ವ್ಯವಸ್ಥೆಯಲ್ಲಿ ಬಲಿಷ್ಠವಾದ ರಾಜಕೀಯ ಸ್ಥಾನಮಾನ ಸೃಷ್ಟಿಸುವ ನಿರೀಕ್ಷೆಯಿದೆ. 

ಭಾರತದ ಜೊತೆ ಪುನಃ ವ್ಯಾಪಾರ ಶುರು: ಪ್ರಧಾನಿಗೆ ಪಾಕ್‌ ಉದ್ಯಮಿಗಳ ಸಲಹೆ

ಭಾರತದೊಂದಿಗ ಸ್ಥಗಿತಗೊಂಡಿರುವ ವ್ಯಾಪಾರ ವಹಿವಾಟನ್ನು ಪುನಾರಂಭ ಮಾಡುವಂತೆ ಪಾಕಿಸ್ತಾನ ಉದ್ಯಮಿಗಳು, ಪ್ರಧಾನಿ ಶೆಹಬಾಜ್‌ ಷರೀಫ್‌ಗೆ ಇತ್ತೀಚೆಗಷ್ಟೇ ಮನವಿ ಮಾಡಿದ್ದರು. ಇಂಥ ಪ್ರಯತ್ನ ಕುಸಿದು ಬಿದ್ದಿರುವ ದೇಶದ ಆರ್ಥಿಕತೆಗೆ ಮತ್ತೆ ಜೀವ ತುಂಬಲಿದೆ ಎಂದು ಉದ್ಯಮಿಗಳು ಸಲಹೆ ನೀಡಿದ್ದರು. ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಉದ್ಯಮಿಗಳು ಈ ಬೇಡಿಕೆ ಇರಿಸಿದ್ದಾರೆ. ಭಾರತದ ಜತೆ ಮರಳಿ ವ್ಯವಹಾರ ಶುರು ಮಾಡಬೇಕು. ಆಗ ಪಾಕಿಸ್ತಾನದ ಆರ್ಥಿಕತೆಗೆ ಶಕ್ತಿ ದೊರೆಯುತ್ತದೆ. ಉಭಯ ದೇಶಗಳ ನಡುವೆ ವೈಮನಸ್ಯ ಬದಿಗೊತ್ತಿ ಮತ್ತೆ ವ್ಯಾಪಾರ ವ್ಯವಹಾರಗಳು ಶುರುವಾಗಬೇಕು. ಇದಕ್ಕೆ ಪಾಕ್‌ ಪ್ರಧಾನಿ ಶೆಹಬಾಜ್‌ ಮುಂದಾಗಬೇಕು ಎಂದು ಉದ್ಯಮಿಗಳು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios