ಮದುವೆ ಮಂಟಪದಿಂದಲೇ ನೇರ ಪದವಿ ಪರೀಕ್ಷೆಗೆ ಹಾಜರಾದ ವಧು!
ಹಸೆಮಣೆ ಏರಿದ ಕೆಲವೇ ನಿಮಿಷಗಳಲ್ಲಿ ವರನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದ ನವವಧು ಎಲ್ಲರ ಗಮನ ಸೆಳೆದರು.
ಶಿವಮೊಗ್ಗ (ಸೆ.11) : ಹಸೆಮಣೆ ಏರಿದ ಕೆಲವೇ ನಿಮಿಷಗಳಲ್ಲಿ ವರನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದ ನವವಧು ಎಲ್ಲರ ಗಮನ ಸೆಳೆದರು. ಭರ್ಮಪ್ಪ ನಗರದ ಸತ್ಯವತಿ ಅವರ ವಿವಾಹ ಚೆನ್ನೈ ಮೂಲದ ಪ್ರಿಯಕರ ಫ್ರಾನ್ಸಿಸ್ ಎಂಬಾತನೊಂದಿಗೆ ಭಾನುವಾರ ಬೆಳಗ್ಗೆ ಸರಳವಾಗಿ ನೆರವೇರಿತು. ಹಸೆಮಣೆ ಏರಿ ಮದುವೆಯ ಪ್ರಮುಖ ಆಚರಣೆಗಳ ನೆರವೇರಿಸಿದ ಮರುಕ್ಷಣವೇ ನವವಧು ನೇರವಾಗಿ ಮದುವೆ ಮಂಟಪದಿಂದ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಬಿ.ಎ. ಅಂತಿಮ ವರ್ಷದ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಬರೆದಿದ್ದಾರೆ.
ಬೆಳಗ್ಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವವಧು ಸತ್ಯವತಿ, ಬೈಕ್‌ನಲ್ಲಿ ಹೂವಿನ ಹಾರ, ಆಭರಣಗಳ ಸಹಿತ ಪತಿಯೊಂದಿಗೆ ಮದುವೆ ಮಂಟಪದಿಂದ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು.
Shivamogga; ತಾಯಿಯ ಸಾವಿನ ನೋವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿನಿ
ಮದುವೆಗಾಗಿ ಅಲಂಕಾರಗೊಂಡಿದ್ದ ಸತ್ಯವತಿ ಅವರನ್ನು ಕಂಡ ಸ್ನೇಹಿತರೇ ಅಚ್ಚರಿಗೆ ಒಳಗಾಗುವ ಜತೆಗೆ ಮದುವೆ ಶುಭಾಶಯವನ್ನು ಸಹ ಕೋರಿದರು. ನವವಧುವಿನ ನಿರ್ಧಾರವನ್ನು ಸಹಪಾಠಿಗಳು ಮತ್ತು ಕಾಲೇಜಿನ ಉಪನ್ಯಾಸಕರು ಕೂಡ ಪ್ರಶಂಸಿಸಿದರು.
ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿರುವ ಫ್ರಾನ್ಸಿಸ್, ಸತ್ಯವತಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದರು. ಇನ್‌ಸ್ಟಾಗ್ರಾಂನಲ್ಲಿ ಪರಿಚಿತರಾಗಿ ಎರಡು ವರ್ಷ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು. ಹಿರಿಯರನ್ನು ಒಪ್ಪಿಸಿ ಪ್ರೇಮಿಗಳಿಬ್ಬರು ಸರಳ ವಿವಾಹ ಆಗಿರುವುದು ಕೂಡ ಹಲವರ ಮೆಚ್ಚುಗೆಗೆ ಪಾತ್ರವಾಯಿತು.
ಕೂಡ್ಲಿಗಿ: ತಂದೆ ಸಾವಿನ ದುಃಖದಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ