Shivamogga; ತಾಯಿಯ ಸಾವಿನ ನೋವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿನಿ
ತಾಯಿಯ ಸಾವಿನ ನೋವಿನಲ್ಲೂ ವಿದ್ಯಾರ್ಥಿನಿ ಯೊಬ್ಬಳು ಪರೀಕ್ಷೆ ಬರೆದು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಶಾಂತಪುರದಲ್ಲಿ ನಡೆದಿದೆ.
ವರದಿ : ರಾಜೇಶ್ ಕಾಮತ್, ಶಿವಮೊಗ್ಗ
ಶಿವಮೊಗ್ಗ (ಜು13): ತಾಯಿಯ ಸಾವಿನ ನೋವಿನಲ್ಲೂ ವಿದ್ಯಾರ್ಥಿನಿ ಯೊಬ್ಬಳು ಪರೀಕ್ಷೆ ಬರೆದು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಶಾಂತಪುರದಲ್ಲಿ ನಡೆದಿದೆ. ಅನಾರೋಗ್ಯದಿಂದ ಸಾವನ್ನಪ್ಪಿದ ತಾಯಿಯ ಶವ ಮನೆಯಲ್ಲಿದ್ದರೂ ನೋವಿನಲ್ಲೇ ವಿದ್ಯಾರ್ಥಿನಿಯೋರ್ವಳು ಪ್ರವೇಶ ಪರೀಕ್ಷೆ ಬರೆದಿದ್ದಾಳೆ. ಕೋಡೂರು ಗ್ರಾಪಂ ವ್ಯಾಪ್ತಿಯ ಶಾಂತಪುರ ಗ್ರಾಮದ ನಾಗರಾಜ್ ಎಂಬುವವರ ಪತ್ನಿ ಅನುರಾಧ (45) ಎಂಬ ಮಹಿಳೆ ಸೋಮವಾರ ತೀವ್ರ ರಕ್ತದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದರಿಂದ ಮೃತ ಮಹಿಳೆಯ ಶವವನ್ನು ಶಾಂತಪುರದ ಮನೆಗೆ ತರಲಾಯಿತು ಆದರೆ ಮಂಗಳವಾರ ಮೃತ ಮಹಿಳೆ ಅನುರಾಧ ರವರ ಮಗಳು ಸ್ಫೂರ್ತಿ ಬಿ ಎಸ್ ಸಿ ಕೃಷಿ ಪದವಿಗೆ ಕೃಷಿ ಕೋಟಾದಲ್ಲಿ ಪ್ರವೇಶ ಪಡೆಯಲು ಪ್ರಾಯೋಗಿಕ ಪರೀಕ್ಷೆ ಇತ್ತು. ಅಮ್ಮನ ಶವ ಮನೆಯಲ್ಲಿದ್ದರೂ ಹಿರಿಯರ ಮನವೊಲಿಸಿ ನೋವಿನಲ್ಲೇ ಪರೀಕ್ಷೆ ಬರೆದಿದ್ದಳು. ನಂತರ ಮನೆಗೆ ಬಂದ ಮೇಲೆ ಅಮ್ಮನ ಶವಸಂಸ್ಕಾರದಲ್ಲಿ ಪಾಲ್ಗೊಂಡಳು.
ಸ್ಪೂರ್ತಿ ಶಿವಮೊಗ್ಗದ ಮಹೇಶ್ ಪಿಯು ಕಾಲೇಜಿನಲ್ಲಿ ಶೇ. 90 ಅಂಕ ಪಡೆದು ಸಿಇಟಿ ಬರೆದಿದ್ದಾಳೆ. ಬಿ ಎಸ್ ಸಿ ಕೃಷಿ ಪದವಿ ಮಾಡುವ ಕನಸು ಹೊಂದಿದ್ದ ಈಕೆ ಇಂತಹ ನೋವಿನ ಸಂದರ್ಭದಲ್ಲೂ ಪರೀಕ್ಷೆ ಬರೆಯುವ ಮೂಲಕ ಹಲವರಿಗೆ ಮಾದರಿಯಾಗಿದ್ದಾಳೆ. ಇವಳ ಕುಟುಂಬದ ದುಃಖದ ನಡುವೆಯೂ ಸ್ಪೂರ್ತಿ ತೆಗೆದುಕೊಂಡ ನಿರ್ಧಾರಕ್ಕೆ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.