ಯುದ್ಧವು ಅಂತಿಮ ಆಯ್ಕೆಯೇ ಹೊರತು, ಮೊದಲನೆಯದಲ್ಲ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಯುದ್ಧಕ್ಕಿಂತ ಭದ್ರತೆ ಬಲವರ್ಧನೆ ಮುಖ್ಯ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ಇತರ ಆಯ್ಕೆಗಳು ವಿಫಲವಾದರೆ ಮಾತ್ರ ಯುದ್ಧ ಪರಿಗಣಿಸಬೇಕು ಎಂದಿದ್ದಾರೆ. ಕೇಂದ್ರದ ರಾಜತಾಂತ್ರಿಕ ಕ್ರಮಗಳನ್ನು ಸ್ವಾಗತಿಸಿದ್ದಾರೆ.
ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡುವ ಕುರಿತಾಗಿ ನಾನು ನೀಡಿದ ಹೇಳಿಕೆಯ ಬಗ್ಗೆ ಪರ -ವಿರೋಧದ ಚರ್ಚೆಗಳು ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಯುದ್ಧ ಎನ್ನುವುದು ಯಾವುದೇ ದೇಶದ ಅಂತಿಮ ಆಯ್ಕೆಯೇ ಹೊರತು, ಯುದ್ಧವೇ ಮೊದಲ ಇಲ್ಲವೇ ಏಕೈಕ ಆಯ್ಕೆಯಲ್ಲ. ಶತ್ರುವನ್ನು ಮಣಿಸುವ ಉಳಿದೆಲ್ಲ ಆಯ್ಕೆಗಳು ವಿಫಲವಾದಾಗ ಮಾತ್ರ ಯುದ್ಧಕ್ಕೆ ಹೊರಡಬೇಕು ಎಂದು ಪುನಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಗೆ ಬದ್ಧವಾಗಿ ನಿಂತಿರುವ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡದೇ ರಾಷ್ಟ್ರದ ಭದ್ರತೆಯನ್ನು ಬಿಗಿಗೊಳಿಸಿ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಭಾರೀ ಚರ್ಚೆಗಳು ಶುರುವಾದ ಬೆನ್ನಲ್ಲಿಯೇ ಮತ್ತೊಮ್ಮೆ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಅವರು' ಯುದ್ಧದ ಕುರಿತು ನಾನು ನೀಡಿದ ಹೇಳಿಕೆಯ ಬಗ್ಗೆ ಪರ - ವಿರೋಧದ ಚರ್ಚೆಗಳು ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಯುದ್ಧ ಎನ್ನುವುದು ಯಾವುದೇ ದೇಶದ ಅಂತಿಮ ಆಯ್ಕೆಯೇ ಹೊರತು, ಯುದ್ಧವೇ ಮೊದಲ ಇಲ್ಲವೇ ಏಕೈಕ ಆಯ್ಕೆಯಲ್ಲ. ಶತ್ರುವನ್ನು ಮಣಿಸುವ ಉಳಿದೆಲ್ಲ ಆಯ್ಕೆಗಳು ವಿಫಲವಾದಾಗ ಮಾತ್ರ ಯುದ್ಧಕ್ಕೆ ಹೊರಡಬೇಕು.
ಪಹಲ್ಗಾಮ್ ನಲ್ಲಿ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಗೆ ನಮ್ಮ ಗೂಢಚರ್ಯೆ ಮತ್ತು ಭದ್ರತಾ ವ್ಯವಸ್ಥೆಯ ವೈಫಲ್ಯ ಕಾರಣ ಎನ್ನುವುದು ದೇಶದ ಜನತೆಗೆ ಮತ್ತು ಕೇಂದ್ರ ಸರ್ಕಾರಕ್ಕೂ ಈಗ ಮನವರಿಕೆಯಾಗಿದೆ. ಮೊದಲು ಈ ಲೋಪವನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ಸಿಂಧೂ ನದಿ ಒಪ್ಪಂದದ ರದ್ದತಿಯೂ ಸೇರಿದಂತೆ ಕೇಂದ್ರ ಸರ್ಕಾರ ಕೆಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರ ಮುಂದೆ ಇದಕ್ಕಿಂತಲೂ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವ ಭರವಸೆ ನಮಗಿದೆ. ಅವುಗಳನ್ನೆಲ್ಲ ಬಹಿರಂಗ ಪಡಿಸುವ ಅಗತ್ಯವಿಲ್ಲ. ಅಂತಹ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರ ಇದೆ.
ಇದನ್ನೂ ಓದಿ: ಪಾಕಿಸ್ತಾನ ಪ್ರಜೆಗಳ ವಾಪಸ್ ಕಳುಹಿಸಿ: ಗೃಹ ಸಚಿವ ಪರಮೇಶ್ವರ್
ಇದೇ ವೇಳೆ ಕೆಲವು ಕಿಡಿಗೇಡಿಗಳು ಯುದ್ಧೋನ್ಮಾದವನ್ನು ಸೃಷ್ಟಿಸಿ ದೇಶದೊಳಗಿನ ಸೌಹಾರ್ದತೆಯನ್ನು ಕಲಕುವ ಪ್ರಯತ್ನ ಮಾಡುತ್ತಿದ್ದು ಇಂತಹವರ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಇಂದು ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬಾಹ್ಯ ಶತ್ರುವನ್ನು ಎದುರಿಸಬೇಕಾದರೆ ಆಂತರಿಕವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕಾಗುತ್ತದೆ. ಪಾಕಿಸ್ತಾನ ಇಂದು ಆರ್ಥಿಕವಾಗಿ ದಿವಾಳಿಯಾಗಿರುವ ರೋಗಗ್ರಸ್ತ ದೇಶವಾಗಿದೆ. ಅವರು ಕಳೆದುಕೊಳ್ಳುವುದೇನೂ ಇಲ್ಲ, ಈ ಕಾರಣದಿಂದಾಗಿಯೇ ಜಗತ್ತಿನ ಬಲಾಢ್ಯ ರಾಷ್ಟ್ರವಾಗಿ ಬೆಳೆಯುತ್ತಿರುವ ಭಾರತ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ಈ ಸಂದರ್ಭದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳು ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ಖಂಡಿಸಿ ಭಾರತದ ಪರವಾಗಿ ನಿಂತಿವೆ. ಈ ಬೆಳವಣಿಗೆಯನ್ನು ಭಾರತ ಸದುಪಯೋಗಪಡಿಸಿಕೊಂಡು ಪಾಕಿಸ್ತಾನ ಮುಂದೆಂದೂ ಇಂತಹ ದುಸ್ಸಾಹಸಕ್ಕೆ ಕೈಹಾಕದಂತೆ ತಕ್ಕ ಪಾಠ ಕಲಿಸಬೇಕಾಗಿದೆ' ಎಂದು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಹೇಳಿಕೆ ಸಂಪೂರ್ಣ ವಿವರ:
ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಜೊತೆ ಯುದ್ಧ ಅನಗತ್ಯ. ಅದರ ಬದಲು ಭದ್ರತೆಯನ್ನು ಬಿಗಿಗೊಳಿಸಿ. ರಾಜ್ಯದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ನೀಡಿರುವ ಸೂಚನೆಯನ್ನು ನಾವು ಪಾಲಿಸುತ್ತೇವೆ. ಈ ನಿಟ್ಟಿನಲ್ಲಿ ಕೇಂದ್ರಕ್ಕೆ ನಾವು ಅಗತ್ಯ ಸಹಕಾರ ಕೊಡುತ್ತೇವೆ. ರಾಜ್ಯದಲ್ಲಿ ಎಷ್ಟು ಜನ ಪಾಕಿಸ್ತಾನದ ಪ್ರಜೆಗಳಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಇರುವ ಸಾಧ್ಯತೆ ಇದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಈಗ ಏನ್ಮಾಡಿದರೂ 26 ಜೀವ ವಾಪಸ್ ತರಲಾದೀತೆ?: ಸಿದ್ದರಾಮಯ್ಯ
ಉಗ್ರರ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ. ನಾವು ಯಾವತ್ತೂ ಯುದ್ಧದ ಪರ ಇಲ್ಲ. ನಾವು ಯಾವಾಗಲೂ ಶಾಂತಿಯ ಪರ. ಯುದ್ಧದ ಬದಲು ಭದ್ರತೆಯನ್ನು ಬಿಗಿಗೊಳಿಸಬೇಕಿದೆ. ಯುದ್ಧದ ಬಗ್ಗೆ ಯೋಚನೆ ಬೇಡ. ಅದರ ಬದಲು ಭದ್ರತೆಯನ್ನು ಬಿಗಿ ಮಾಡಿ ಎಂದು ಸಲಹೆ ನೀಡಿದರು. ಕಾಶ್ಮೀರದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ. ಅಲ್ಲಿ ಭದ್ರತೆ ಇದೆ ಎಂದು ನಂಬಿಕೊಂಡು ಜನ ಕಾಶ್ಮೀರಕ್ಕೆ ಹೋದರು. ಆದರೆ, ಅಲ್ಲಿ ಭದ್ರತಾ ವೈಫಲ್ಯ ಉಂಟಾಗಿದೆ. ಹಾಗಾದರೆ, ಇವರು ಇಷ್ಟು ದಿನ ಮಾಡಿದ್ದು ಬರಿ ಭಾಷಣನಾ? ಈಗ ಏನೇ ಕ್ರಮ ಕೈಗೊಂಡರೂ ಹೋದ 26 ಜೀವಗಳನ್ನು ವಾಪಸ್ ತರಲು ಸಾಧ್ಯನಾ? ಎಂದು ಕಿಡಿಕಾರಿದರು.
