ರಾಜ್ಯದಲ್ಲಿ ತುಳು ಭಾಷೆಗೆ 2ನೇ ಅಧಿಕೃತ ಸ್ಥಾನಮಾನ ನೀಡಿದ ಬೆನ್ನಲ್ಲೇ, ಉರ್ದು ಭಾಷೆಗೂ ಇದೇ ಮಾನ್ಯತೆ ನೀಡುವಂತೆ ಎಸ್‌ಡಿಪಿಐ ಆಗ್ರಹಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಉರ್ದು ಬಳಕೆ, ಶಿಕ್ಷಕರ ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉರ್ದುವಿಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ.
ಮೈಸೂರು (ಸೆ.21): ರಾಜ್ಯದಲ್ಲಿ ತುಳು ಭಾಷೆಗೆ 2ನೇ ಅಧಿಕೃತ ಭಾಷಾ ಅಧಿಕೃತ ಸ್ಥಾನಮಾನ ನೀಡಿದ ಬೆನ್ನಲ್ಲಿಯೇ, ಈಗ ಉರ್ದು ಭಾಷೆಗೂ ಅಧಿಕೃತ ಭಾಷಾ ಸ್ಥಾನಮಾನ ನೀಡುವಂತೆ ಎಸ್‌ಡಿಪಿಐ (SDPI) ರಾಜ್ಯಧ್ಯಕ್ಷ ಅಬ್ದುಲ್ ಮಜೀದ್ ಅವರು ಮುಖ್ಯಮಂತ್ರಿಗಳಿಗೆ ಅಧಿಕೃತವಾಗಿ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
ಕರ್ನಾಟಕದಲ್ಲಿ ಲಕ್ಷಾಂತರ ಜನರು ಮಾತನಾಡುವ ಉರ್ದು ಭಾಷೆಗೆ ಸರ್ಕಾರದ ಮಟ್ಟದಲ್ಲಿ ಸೂಕ್ತ ಮಾನ್ಯತೆ ನೀಡಬೇಕು ಎಂದು ಎಸ್‌ಡಿಪಿಐ ಒತ್ತಾಯಿಸಿದೆ. ತೆಲಂಗಾಣ ಸೇರಿದಂತೆ ಇತರ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಉರ್ದುವಿಗೆ ಅಧಿಕೃತ ಸ್ಥಾನಮಾನ ಕಲ್ಪಿಸಬೇಕು ಎಂದು ಅಬ್ದುಲ್ ಮಜೀದ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಹಲವು ಪೂರಕ ಅಂಶಗಳನ್ನು ಸರ್ಕಾರಕ್ಕೆ ಒದಗಿಸಿದ್ದಾರೆ.
ಸರ್ಕಾರದ ಮುಂದೆ ಎಸ್‌ಡಿಪಿಐ ಪ್ರಮುಖ ಬೇಡಿಕೆಗಳು:
ಅಧಿಕೃತ ಸ್ಥಾನಮಾನ: ರಾಜ್ಯದಲ್ಲಿ ತೆಲಂಗಾಣ ಮಾದರಿಯನ್ನು ಅನುಸರಿಸಿ ಉರ್ದುವಿಗೆ ಅಧಿಕೃತ ಭಾಷಾ ಸ್ಥಾನಮಾನ ನೀಡಬೇಕು.
ಕನ್ನಡಕ್ಕೆ ಧಕ್ಕೆಯಿಲ್ಲ: ಉರ್ದುವಿಗೆ ಅಧಿಕೃತ ಸ್ಥಾನಮಾನ ನೀಡುವುದರಿಂದ ರಾಜ್ಯದ ಆಡಳಿತ ಭಾಷೆಯಾದ ಕನ್ನಡಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ ಎಂದು ಎಸ್‌ಡಿಪಿಐ ಸ್ಪಷ್ಟಪಡಿಸಿದೆ.
ಸರ್ಕಾರಿ ಸೇವೆಗಳು: ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಉರ್ದುವಿನಲ್ಲೂ ಅರ್ಜಿಗಳು ಹಾಗೂ ಇಲಾಖಾ ಮಾಹಿತಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು.
ಶಿಕ್ಷಣ ಕ್ಷೇತ್ರ: ರಾಜ್ಯದಲ್ಲಿ ಪ್ರಸ್ತುತ 4,236 ಉರ್ದು ಮಾಧ್ಯಮ ಶಾಲೆಗಳಿದ್ದು, ಅಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.
ಸ್ಪರ್ಧಾತ್ಮಕ ಪರೀಕ್ಷೆಗಳು: ಸರ್ಕಾರದ ನೇಮಕಾತಿ ಅಧಿಸೂಚನೆಗಳು ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಮತ್ತು ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ಉರ್ದುವಿನಲ್ಲೂ ಲಭ್ಯವಾಗುವಂತೆ ಒತ್ತಾಯಿಸಲಾಗಿದೆ.
ತುಳು ಭಾಷಾ ಹೋರಾಟಕ್ಕೆ ಜಯ ಸಿಕ್ಕ ಬೆನ್ನಲ್ಲೇ ಈಗ ಉರ್ದು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವಂತೆ ಕೇಳಿರುವ ಎಸ್‌ಡಿಪಿಐ ಬೇಡಿಕೆ ರಾಜ್ಯದಲ್ಲಿ ಯಾವ ರೀತಿಯ ಚರ್ಚೆಗೆ ಗ್ರಾಸವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.


