ಸ್ಯಾಂಟ್ರೋ ರವಿ ಕಿರುಕುಳ ತಡ್ಕೋಳೋಕಾಗ್ತಿಲ್ಲ, ಅಳಲು ತೋಡಿಕೊಂಡ ಮೈಸೂರು ಮಹಿಳಾ ಜೈಲರ್‌ಗಳು
ವೇಶ್ಯಾವಾಟಿಕೆ ದಂಧೆ ಹಾಗೂ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕಿರುಕುಳ ನೀಡುತ್ತಿದ್ದ ಅಪರಾಧಿ ಸ್ಯಾಂಟ್ರೋ ರವಿ, ಜೈಲಿನ ಅಧಿಕಾರಿಗಳಿಗೂ ಕಿರುಕುಳ ನೀಡುತ್ತಿದ್ದಾನೆ.
ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಮೈಸೂರು (ಆ.02): ವೇಶ್ಯಾವಾಟಿಕೆ, ವರ್ಗಾವಣೆ ದಂದೆಯಲ್ಲಿ ಸಿಕ್ಕಿಬಿದ್ದು ಜೈಲಲ್ಲಿರೊ ಕುಖ್ಯಾತ ಸ್ಯಾಂಟ್ರೋ ರವಿ ಕತೆ ಇದು. ಈಗ ಜೈಲಿನ ಹೊರಗಿದ್ದಾಗಲೂ ಅಧಿಕಾರಿಗಳನ್ನ ಗೋಳು ಹಾಕೊಂಡಿದ್ದ. ಈಗ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದರೂ ಅಲ್ಲಿನ ಜೈಲರ್‌ಗಳಿಗೆ ಈತನ ಕಿರುಕುಳ ತಪ್ಪುತ್ತಿಲ್ಲ. ಇದರಿಂದ ಬೇಸತ್ತಿರೋ ಮೈಸೂರು ಕೇಂದ್ರ ಕಾರಾಗೃಹದ ಅಧಿಕಾರಿಗಳು ಹೆಂಗಾದ್ರೂ ಮಾಡಿ ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ನ್ಯಾಯಾಲಯದ ಒರೆ ಹೋಗಿದ್ದಾರೆ.
ರಾಜ್ಯದ ಕುಖ್ಯಾತ ಆರೋಪಿ ಸ್ಯಾಂಟ್ರೋ ರವಿ ವರ್ಗಾವಣೆ ದಂಧೆ ಜೊತೆ ವೇಶ್ಯಾವಾಟಿಕೆ ಹಾಗೂ ಮದುವೆಯಾಗಿ ವಂಚನೆ ಸೇರಿ ಹಲವು ಆರೋಪ ಎದುರಿಸಿ ಕಳೆದ ಆರು ತಿಂಗಳಿಂದ ಮೈಸೂರು ಜೈಲಿನಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈತ ಜೈಲಿನಲ್ಲಿ ಅಧಿಕಾರಿಗಳನ್ನು ಹಾಗೂ ಸಹ ವಿಚಾರಣಾಧೀನ ಕೈದಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾನಂತೆ. ಯಾರ ಮಾತೂ ಕೇಳುತ್ತಿಲ್ಲವಂತೆ. ಅಧಿಕಾರಿಗಳನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾನಂತೆ. ಇದರಿಂದಾಗಿ ಜೈಲಿನ ಅಧಿಕಾರಿಗಳು ರೋಸಿಹೋಗಿದ್ದಾರೆ. ಹೀಗಾಗಿ, ಆತನನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಿ ಅಂತ ಕೋರ್ಟ್ ಮುಂದೆ ಮನವಿ ಮಾಡಿಕೊಂಡಿದ್ದಾರೆ.
ಹೊರಗೆ ಗಣ್ಯರು, ರಾಜಕಾರಣಿಗಳನ್ನು ಕಾಡುತ್ತಿದ್ದವನು ಈಗ ಜೈಲು ಸೇರಿದ್ದರೂ ತನ್ನ ಬುದ್ದಿ ಬಿಟ್ಟಿಲ್ಲ. ಮೈಸೂರು ಜೈಲಿನಲ್ಲಿ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈತಾನಂತೆ. ಆತನ ಕಾಟ ತಾಳಲಾರದೆ ಜೈಲು ಅಧಿಕಾರಿಗಳು ಕಂಗಾಲಾಗಿದ್ದಾರೆ. ಈಗಾಗಿ ಮೈಸೂರಿನ 6ನೇ ಅಪರ ಜಿಲ್ಲಾ ಮತ್ತು ಸತ್ರಾ ನ್ಯಾಯಾಧೀಶರಿಗೆ ಪತ್ರ ಬರೆದು ಸ್ಯಾಂಟ್ರೋ ರವಿಯನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಿ ಅಂತ ಕೇಳಿಕೊಂಡಿದ್ದಾರೆ. ಈ ಪತ್ರ ಬರೆದಿರೋದು ಮೈಸೂರು ಕೇಂದ್ರ ಕಾರಾಗೃಹ ಅಧಿಕಾರಿ ದಿವ್ಯ ಶ್ರೀ.
ವಿಚಾರಣಾಧೀನ ಕೈದಿಯಾಗಿರುವ ಸ್ಯಾಂಟ್ರೋ ರವಿ ಜೈಲಿನ ಅಧಿಕಾರಿಗಳಿಗೆ ಗೌರವ ನೀಡದೆ ಅನುಚಿತವಾಗಿ ವರ್ತಿಸುತ್ತಿದ್ದಾನಂತೆ. ಕಾರಾಗೃಹದ ನಿಯಮಗಳನ್ನು ಪಾಲಿಸದೆ ಅಧಿಕಾರಿಗಳನ್ನು ಸತಾಯಿಸುತ್ತಿದ್ದಾನಂತೆ. ಅಷ್ಟೇ ಅಲ್ಲ ಅಧಿಕಾರಿಗಳಿಗೆ ಅವಾಚ್ಯ ಶಬ್ದದಿಂದ ನಿಂದಿಸುತ್ತಾನಂತೆ. ಸಹ ಕೈದಿಗಳ ಜೊತೆಯೂ ಸದಾ ಗಲಾಟೆ ಮಾಡುವ ಸ್ಯಾಂಟ್ರೋ ರವಿ ಜೈಲಿನ ಅಧಿಕಾರಿಗಳನ್ನು ಕಾಡುತ್ತಿದ್ದಾನಂತೆ. ಸ್ಯಾಂಟ್ರೋ ರವಿ ಕಾಟದಿಂದ ಬೇಸತ್ತ ಜೈಲು ಅಧಿಕಾರಿಗಳು ದಯಮಾಡಿ ಆತನಿಂದ ಮುಕ್ತಿ ಕೊಡಿಸಿ ಅಂತಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಅಂದ ಹಾಗೆ 6 ತಿಂಗಳ ಹಿಂದೆ ಸ್ಯಾಂಟ್ರೋ ರವಿ ವಿರುದ್ದ ಮಹಿಳೆಯೊಬ್ಬರು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ರು. ಅದರ ಬೆನ್ನು ಹತ್ತಿದ ಪೊಲೀಸರಿಗೆ ಸ್ಯಾಂಟ್ರೋ ರವಿಯ ಕರ್ಮಕಾಂಡಗಳು ಒಂದೊಂದೇ ಹೊರಗೆ ಬಂದಿದ್ದವು. ವರ್ಗಾವಣೆ ದಂಧೆ, ವೇಶ್ಯಾವಾಟಿಕೆ ಸೇರಿದಂತೆ ಸ್ಯಾಂಟ್ರೋ ರವಿಯ ಹಲವು ಕರಾಳ ಮುಖ ತೆರೆದುಕೊಂಡಿತ್ತು. ಅಷ್ಟೇ ಅಲ್ಲದೆ ಆತನಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳು ಮಂತ್ರಿಗಳ ಜೊತೆ ಇದ್ದ ನಿಕಟ ಸಂಪರ್ಕದ ಬಗ್ಗೆ ರಾಜ್ಯಾದ್ಯಂತ ಬಿಸಿ ಬಿಸಿ ಚರ್ಚೆಯಾಗಿತ್ತು.
ಈ ಸಂಬಂಧ ಹಲವು ಆಡಿಯೋ ವಿಡಿಯೋಗಳು ವೈರಲ್ ಆಗಿದ್ದವು. ಇದಾದ ನಂತರ ಮೈಸೂರು ಪೊಲೀಸರು ಉತ್ತರ ಭಾರತದಲ್ಲಿ ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕಳೆದ 6 ತಿಂಗಳಿನಿಂದ ಸ್ಯಾಂಟ್ರೋ ರವಿಗೆ ಜಾಮೀನು ಸಿಕ್ಕಿಲ್ಲ. ಆತ ಮೈಸೂರಿನ ಜೈಲಿನಲ್ಲೇ ಇದ್ದಾನೆ. ಆದ್ರೆ ಆತ ಜೈಲಿನ ಅಧಿಕಾರಿಗಳಿಗೆ ತಲೆ ನೋವಾಗಿದ್ದಾನೆ. ಅಲ್ಲ ಜೈಲಿನಲ್ಲಿ ಖೈದಿಗಳ ಮನ ಪರಿವರ್ತನೆ ಆಗುತ್ತೆ ಅಂದುಕೊಂಡ್ರೆ ಆತನನ್ನು ಬೆಂಗಳೂರಿನ ಜೈಲಿಗೆ ವರ್ಗಾವಣೆ ಮಾಡಿ ಅಂತಾ ಖುದ್ದು ಜೈಲು ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿರೋದು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಸದ್ಯ ನ್ಯಾಯಾಲಯ ಈ ಬಗ್ಗೆ ಯಾವುದೇ ತೀರ್ಪು ನೀಡಿಲ್ಲ.