ಸ್ಯಾಂಟ್ರೋ ರವಿ ಪಿತೂರಿಯಲ್ಲಿ ದೂರುದಾರನಾಗಿ ನೆಲಮಂಗಲದ ಪ್ರಕಾಶ್‌ ಹಾಗೂ ಕೃತ್ಯ ಎಸಗಿದ ಆರೋಪಿಯಾಗಿ ಬಿಟಿಎಂ ಲೇಔಟ್‌ನ ಶೇಖ್‌ ಕೈ ಜೋಡಿಸಿದ್ದು, ರವಿ ಆಮಿಷಕ್ಕೆ ಬಲಿಯಾಗಿ ಸುಳ್ಳು ದರೋಡೆ ಕೃತ್ಯದಲ್ಲಿ ಪ್ರಮುಖ ಪಾತ್ರವಹಿಸಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

(ಗಿರೀಶ್‌ ಮಾದೇನಹಳ್ಳಿ)
ಕನ್ನಡಪ್ರಭ ವಾರ್ತೆ ಬೆಂಗಳೂರು (ಫೆಬ್ರವರಿ 9, 2023): ತನ್ನ ಪತ್ನಿ ವಿರುದ್ಧ ಸುಳ್ಳು ದರೋಡೆ ಪ್ರಕರಣ ಸೃಷ್ಟಿಸಿದ್ದ ಸ್ಯಾಂಟ್ರೋ ರವಿ, ಈ ಪ್ರಕರಣದಲ್ಲಿ ಸಹಕರಿಸಿದವರಿಗೆ ಹಣ, ಸರ್ಕಾರಿ ಉದ್ಯೋಗ, ಹೊಸ ಆಟೋ ಕೊಡಿಸುವ ಆಮಿಷವೊಡ್ಡಿದ್ದ ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.

ಸ್ಯಾಂಟ್ರೋ ರವಿ ಪಿತೂರಿಯಲ್ಲಿ ದೂರುದಾರನಾಗಿ ನೆಲಮಂಗಲದ ಪ್ರಕಾಶ್‌ ಹಾಗೂ ಕೃತ್ಯ ಎಸಗಿದ ಆರೋಪಿಯಾಗಿ ಬಿಟಿಎಂ ಲೇಔಟ್‌ನ ಶೇಖ್‌ ಕೈ ಜೋಡಿಸಿದ್ದು, ರವಿ ಆಮಿಷಕ್ಕೆ ಬಲಿಯಾಗಿ ಸುಳ್ಳು ದರೋಡೆ ಕೃತ್ಯದಲ್ಲಿ ಪ್ರಮುಖ ಪಾತ್ರವಹಿಸಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಇದನ್ನು ಓದಿ: ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಬಿ ರಿಪೋರ್ಟ್‌ಗೆ ಸಿದ್ಧತೆ

ಸಾಲ ಕೊಡುವ ನೆಪದಲ್ಲಿ ಕರೆಸಿಕೊಂಡು ತನಗೆ ಚಾಕುವಿನಿಂದ ಇರಿದು ಹಣ ಮತ್ತು ಚಿನ್ನ ದೋಚಿದ್ದರು ಎಂದು ಸ್ಯಾಂಟ್ರೋ ರವಿ ಪತ್ನಿ ಹಾಗೂ ನಾದಿನಿ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕಾಶ್‌ ದೂರು ನೀಡಿದ್ದರೆ, ತಾನು ಕೃತ್ಯದಲ್ಲಿ ಪಾಲ್ಗೊಂಡಿದ್ದೆ ಎಂದು ಪೊಲೀಸರಿಗೆ ಶೇಖ್‌ ಶರಣಾಗಿದ್ದ. ದರೋಡೆ ಪ್ರಕರಣದಲ್ಲಿ ಸ್ಯಾಂಟ್ರೋ ಪತ್ನಿ ಹಾಗೂ ನಾದಿನಿ ಜತೆ ಶೇಖ್‌ನನ್ನು ಕಾಟನ್‌ಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಪ್ರವೀಣ್‌ ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ಜಾಮೀನು ಸಿಗದ ಜೈಲಿನಲ್ಲೇ ಶೇಖ್‌ ಇದ್ದಾನೆ.

ಆಪ್ತರ ನೆರವು:
ತನ್ನ ಪತ್ನಿ ಹಾಗೂ ಮಗು ಜತೆ ನೆಲಮಂಗಲ ನಗರದಲ್ಲಿ ನೆಲೆಸಿದ್ದ ಪ್ರಕಾಶ್‌, ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಅದೇ ರೀತಿ ಬಿಟಿಎಂ ಲೇಔಟ್‌ನ ಕುಟುಂಬದ ವಾಸವಾಗಿದ್ದ ಶೇಖ್‌ ಸಹ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹಲವು ವರ್ಷಗಳಿಂದ ಈ ಇಬ್ಬರಿಗೆ ಸ್ಯಾಂಟ್ರೋ ರವಿ ಪರಿಚಯವಿತ್ತು. ಈ ಸ್ನೇಹದಲ್ಲಿ ಆಗಾಗ್ಗೆ ಸ್ಯಾಂಟ್ರೋ ರವಿ ಹೇಳಿದ ಕೆಲಸಗಳನ್ನು ಪ್ರಕಾಶ್‌ ಹಾಗೂ ಶೇಖ್‌ ಮಾಡುತ್ತಿದ್ದರು.

ಇದನ್ನೂ ಓದಿ: ಸ್ಯಾಂಟ್ರೋ ರವಿ ಕೇಸ್‌ನ ತನಿಖಾಧಿಕಾರಿ ದಿಢೀರ್‌ ವರ್ಗ!

ತನ್ನ ಮನೆಯಲ್ಲಿ ನಾಪತ್ತೆಯಾಗಿದ್ದ ‘ರಹಸ್ಯ ಮಾಹಿತಿಯ ಲ್ಯಾಟ್‌ಟಾಪ್‌’ ಪಡೆಯಲು ಸ್ಯಾಂಟ್ರೋ, 2022ರ ನವೆಂಬರ್‌ನಲ್ಲಿ ತನ್ನ ಪತ್ನಿ ಹಾಗೂ ನಾದಿನಿ ವಿರುದ್ಧ ಸುಳ್ಳು ದರೋಡೆ ಪ್ರಕರಣ ದಾಖಲಿಸಲು ಸಂಚು ರೂಪಿಸಿದ್ದ. ಇದಕ್ಕೆ ನಂಬಿಕಸ್ಥರನ್ನು ಬಳಸಿಕೊಳ್ಳುವಂತೆ ಇನ್ಸ್‌ಪೆಕ್ಟರ್‌ ಪ್ರವೀಣ್‌ ಸಹ ಸಲಹೆ ನೀಡಿದ್ದ. ಅಂತೆಯೇ ತನ್ನ ಸಹಚರ ಪ್ರಕಾಶ್‌ಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ರವಿ, ಆತನ ಮೂಲಕ ಪತ್ನಿ ವಿರುದ್ಧ ದೂರು ಕೊಡಿಸಲು ನಿರ್ಧರಿಸಿದ. ಬಳಿಕ ಕೃತ್ಯದಲ್ಲಿ ಪಾಲ್ಗೊಂಡಿದ್ದಾಗಿ ಹೇಳಿ ಶರಣಾಗುವಂತೆ ಮತ್ತೊಬ್ಬ ಸಹಚರ ಶೇಖ್‌ಗೆ ಹೊಸ ಆಟೋ ಕೊಡಿಸುವುದಾಗಿ ಹೇಳಿ ಬಳಸಿಕೊಂಡಿದ್ದ. ಅಲ್ಲದೆ ಮುಂಗಡವಾಗಿ ಇಬ್ಬರಿಗೆ ತಲಾ 20 ಸಾವಿರ ರು ಅನ್ನು ರವಿ ಕೊಟ್ಟಿದ್ದ ಎಂದು ಮೂಲಗಳು ಹೇಳಿವೆ.

ಪೂರ್ವ ಯೋಜಿತ ಸಂಚಿನಂತೆ ತನಗೆ ಐದು ಲಕ್ಷ ರೂ. ಸಾಲ ಕೊಡುವುದಾಗಿ 2022ರ ನವೆಂಬರ್‌ 23 ರಂದು ಮೆಜೆಸ್ಟಿಕ್‌ ಸಮೀಪದ ಖೋಡೆ ಸರ್ಕಲ್‌ಗೆ ಬರುವಂತೆ ಸ್ಯಾಂಟ್ರೋ ರವಿ ಪತ್ನಿ ಸೂಚಿಸಿದ್ದರು. ಅಂತೆಯೇ ನಾನು ಅಲ್ಲಿಗೆ ಹೋದಾಗ ನನ್ನ ಮೇಲೆ ಹಲ್ಲೆ ನಡೆಸಿ 13 ಗ್ರಾಂ ಚಿನ್ನದ ಸರ ಹಾಗೂ 9 ಸಾವಿರ ರು. ಹಣ ದೋಚಿ ರವಿ ಪತ್ನಿ, ನಾದಿನಿ ಹಾಗೂ ಅವರ ಸ್ನೇಹಿತರ ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಕಾಟನ್‌ಪೇಟೆ ಠಾಣೆಗೆ ಪ್ರಕಾಶ್‌ ದೂರು ನೀಡಿದ್ದರು. ಮರು ದಿನ ಪೊಲೀಸರಿಗೆ ಶೇಖ್‌ ಶರಣಾಗಿದ್ದ. ಈ ದೂರಿನ ಮೇರೆಗೆ ಮೈಸೂರಿಗೆ ತೆರಳಿ ಸ್ಯಾಂಟ್ರೋ ರವಿ ಪತ್ನಿ ಹಾಗೂ ನಾದಿನಿಯನ್ನು ಪೊಲೀಸರು ಬಂಧಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದನ್ನೂ ಓದಿ: ಪತ್ನಿ ಮೇಲೆ ಸುಳ್ಳು ಕೇಸ್‌: ಸ್ಯಾಂಟ್ರೋ ತಪ್ಪೊಪ್ಪಿಗೆ

ಮೈಸೂರಿಗೆ ಪರಾರಿ:
ಈ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದ ಬಳಿಕ ಸ್ಯಾಂಟ್ರೋ ಪತ್ನಿ, ತನ್ನ ಪತಿ ವಿರುದ್ಧ ಮೈಸೂರಿನ ಪೊಲೀಸರಿಗೆ ದೌರ್ಜನ್ಯ ದೂರು ದಾಖಲಿಸಿದ್ದರು. ಆಗ ತನ್ನ ಮೇಲೆ ಕಾಟನ್‌ಪೇಟೆ ಠಾಣೆಯಲ್ಲಿ ರವಿ ಪಿತೂರಿಯಿಂದ ಸುಳ್ಳು ದರೋಡೆ ಪ್ರಕರಣ ದಾಖಲಾಗಿತ್ತು ಎಂದು ದೂರಿದ್ದರು. ಈ ಬಗ್ಗೆ ತನಿಖೆ ಆರಂಭಿಸುತ್ತಿದ್ದಂತೆ ಭಯಗೊಂಡು ಮೈಸೂರಿಗೆ ಪರಾರಿಯಾಗಿದ್ದ ಪ್ರಕಾಶ್‌ನನ್ನು ಪತ್ತೆ ಹಚ್ಚಿ ಕರೆತಂದು ವಿಚಾರಿಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಅಧಿಕಾರಿ ಜತೆ ಸಂಬಂಧಕ್ಕೆ ಪತ್ನಿಗೆ ಸ್ಯಾಂಟ್ರೋ ಒತ್ತಡ..!