ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಎಐ ಸ್ಪೀಡ್ ಡಿಟೆಕ್ಟರ್ ಐದೇ ದಿನಕ್ಕೆ ಸ್ಟಾಪ್: ಅಪಫಾತ ತಡೆ ಚಿಂತನೆ ಫ್ಲಾಪ್..?
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಳವಡಿಕೆ ಮಾಡಲಾಗಿದ್ದಕೃತಕ ಬುದ್ಧಿಮತ್ತೆ ಆಧಾರಿತ ಸ್ಪೀಡ್ ಡಿಟೆಕ್ಟರ್ ಐದೇ ದಿನದಲ್ಲಿ ಸ್ಟಾಪ್ ಆಗಿದೆ.
ಮಂಡ್ಯ (ಆ.02): ರಾಜ್ಯದ ಏಕೈಕ ಎಕ್ಸ್‌ಪ್ರೆಸ್ ವೇ ಎಂದು ಖ್ಯಾತಿಯಾಗಿರುವ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಗೆ ಅಳವಡಿಕೆ ಮಾಡಿಲಾಗಿದ್ದ ಕೃತಕ ಬುದ್ಧಿಮತ್ತೆ (ಎಐ) ಸ್ಪೀಡ್ ಡಿಟೆಕ್ಟರ್ ಕೇವಲ 5 ದಿನದಲ್ಲಿಯೇ ಕೈಕೊಟ್ಟಿದೆ. ಸ್ಪೀಡ್ ಡಿಕೆಕ್ಟ್ ಮಾಡದೇ ಸ್ಥಗಿತಗೊಂಡಿದ್ದು, ಅಪಘಾತ ತಡೆಯುವ ಪೊಲೀಸ್ ಇಲಾಖೆ ಯೋಜನೆಯು ಫ್ಲಾಪ್ ಆಗಿದೆಯೇ ಎಂಬ ಅನುಮಾನ ಕಂಡುಬರುತ್ತಿದೆ.
ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ರಾಜಧಾನಿ ಮೈಸೂರು ನಡುವೆ 145 ಕಿ.ಮೀ. ಮಾರ್ಗದಲ್ಲಿ ಅಪಘಾತಗಳ ಸಂಖ್ಯೆ ವಿಪರೀತವಾಗಿತ್ತು. ಇದನ್ನು ರಾಜ್ಯದ ಜನರು ಅಪಘಾತಗಳ ಹೆದ್ದಾರಿ ಎಂದೇ ಕರೆಯುತ್ತಿದ್ದರು. ಇನ್ನು ಅಪಘಾತ ನಿಯಂತ್ರಣ ಉದ್ದೇಶದಿಂದ ಬೈಕ್, ಆಟೋಗಳು ಹಾಗೂ ಟ್ರ್ಯಾಕ್ಟರ್ ಸೇರಿದಂತೆ ಹಲವು ಕಡಿಮೆ ವೇಗದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದಾದ ನಂತರ ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿ ಬಳಿ ಕೃತಕ ಬುದ್ಧಿಮತ್ತೆಯ (Artificial Intelligence) ಸ್ಪೀಡ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿತ್ತು.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮೊದಲ ಫೈನ್ ಕಟ್ಟಿದ ಬೈಕ್ ಸವಾರ ಇವರೇ..?
ಸ್ಪೀಡ್ ಡಿಟೆಕ್ಟರ್ ಮೂಲಕ ದಂಡ ವಿಧಿಸಲು ಕ್ರಮ: ದಶಪಥ ಹೆದ್ದಾರಿಯಲ್ಲಿ ಅಳವಡಿಕೆ ಮಾಡಲಾಗಿದ್ದು ಏಕೈಕ ಎಐ ಸ್ಪೀಡ್ ಡಿಟೆಕ್ಟರ್ ಅನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡಿದ್ದರು. ಪ್ರತಿ ವಾಹನಗಳೂ ಎಷ್ಟು ವೇಗದಲ್ಲಿ ಹೋಗುತ್ತವೆ ಹಾಗೂ ಅವುಗಳಿಗೆ ದಂಡ ವಿಧಿಸಲು ಅನುಕೂಲ ಆಗುವಂತೆ ಸ್ಪೀಡ್ ಡಿಟೆಕ್ಟರ್ ಅಳವಡಿಸಿ ದಂಡ ವಿಧಿಸಲು ಅನುಕೂಲ ಆಗುತ್ತಿತ್ತು. ಜೊತೆಗೆ, ವಾಹನ ಸವಾರರು ಸ್ಪೀಡ್ ಡಿಟೆಕ್ಟರ್ ನೋಡಿ ತಮ್ಮ ವಾಹನದ ವೇಗವನ್ನು ತಗ್ಗಿಸುತ್ತಿದ್ದರು. ಇದರಿಂದ ಅಪಘಾತಗಳ ಸಂಖ್ಯೆಯನ್ನೂ ನಿಯಂತ್ರಣ ಮಾಡಬಹುದು ಎಂದು ಪೊಲೀಸ್ ಇಲಾಖೆ ಆಲೋಚನೆಯನ್ನು ಮಾಡಿತ್ತು.
ಜು.29ರಿಂದ ಕಾರ್ಯಾರಂಭ- ಆ.02ಕ್ಕೆ ಕಾರ್ಯ ಸ್ಥಗಿತ: ಐದೇ ದಿನಕ್ಕೆ ಕೈಕೊಟ್ಟ ಸ್ಪೀಡ್ ಡಿಟೆಕ್ಟರ್: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ (Expressway) ನಾಲ್ಕು ದಿನಗಳ ಹಿಂದಷ್ಟೆ ಅಳವಡಿಸಲಾಗಿದ್ದ ಸ್ಪೀಡ್ ಡಿಟೆಕ್ಟರ್‌ಗಳು ಇಂದು ಕೈಕೊಟ್ಟಿದೆ. ಮಂಡ್ಯದ (Mandya) ಉಮ್ಮಡಹಳ್ಳಿ ಗೇಟ್ ಬಳಿ ಸೋಲರ್‌ನಿಂದ ಕಾರ್ಯ ನಿರ್ವಹಿಸುವ ಸ್ಪೀಡ್ ಡಿಟೆಕ್ಟರ್ ಹಾಗೂ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ, ಈ ಕ್ಯಾಮೆರಾಗಳು ಐದು ದಿನಕ್ಕೆ ಹಾಳಾಗಿವೆ. ಲಕ್ಷಾಂತರ ರೂ. ವೆಚ್ಚದಲ್ಲಿ ಅಳವಡಿಕೆ ಮಾಡಲಾಗಿದ್ದ ಎಐ ಕ್ಯಾಮೆರಾಗಳ ಸ್ಪೀಡ್ ಡಿಟೆಕ್ಟರ್‌ಗಳು ಜುಲೈ 29 ರಿಂದ ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಈಗ ಐದೇ ದಿನದಲ್ಲಿ ಕೈಕೊಟ್ಟಿದ್ದು, ಸ್ಪೀಡ್ ಡಿಟೆಕ್ಟ್ ಮಾಡದೇ ಹಾಳಾಗಿವೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಿಷೇಧದ ಮೊದಲ ದಿನವೇ 137 ಕೇಸ್, 68,500 ರು.ದಂಡ ವಸೂಲಿ
ನೇರವಾಗಿ ಮೊಬೈಲ್‌ಗೆ ದಂಡ ಪಾವತಿ ಮೆಸೇಜ್: ಈ ಕುರಿತು ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ (Alok Kumar)ಅವರ ಅಣತಿಯಂತೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿತ್ತು. ವೇಗದ ಮಿತಿ ಮೀರಿದರೆ ವಾಹನದ ನಂಬರ್‌ನಿಂದ ಆರ್‌ಟಿಒ ಸಂಪರ್ಕ ಪಡೆದು ಮೊಬೈಲಿಗೆ ದಂಡ ಪಾವತಿಸುವಂತೆ ನೋಟಿಸ್ ಬರುವಂತೆ ತಂತ್ರಜ್ಞಾನ ರೂಪಿಸಲಾಗಿತ್ತು. ಈ ಸಂಬಂಧ ಟ್ವೀಟ್ ಮಾಡಿದ್ದ ಅಲೋಕ್ ಕುಮಾರ್, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳನ್ನು ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ಅಪಘಾತಗಳು ಮತ್ತು ಸಾವುನೋವುಗಳ ಸಂಖ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯವಾಗಲಿದೆ ಎಂದು ಬರೆದುಕೊಂಡಿದ್ದರು. ಈಗ ಸ್ಪೀಡ್ ಡಿಟೆಕ್ಟರ್ ಕೈಕೊಟ್ಟಿದ್ದು, ಅಪಘಾತ ನಿಯಂತ್ರಣ ಯೋಜನೆ ತಾತ್ಕಾಲಿಕ ಫ್ಲಾಪ್ ಆಗಿದೆ.