ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ, ಭತ್ತ ಮಾರಾಟ ಮಾಡಿದ ಲಕ್ಷಾಂತರ ರೈತರಿಗೆ ರಾಜ್ಯ ಸರ್ಕಾರ ಇನ್ನೂ 1,714 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಮುಂಗಾರು ಬಿತ್ತನೆಗೆ ಹಣವಿಲ್ಲದೆ ರೈತರು ಪರದಾಡುತ್ತಿದ್ದು, ಬಾಕಿ ಹಣ ಪಾವತಿಗೆ ಒತ್ತಡ ಹೆಚ್ಚಾದ ನಂತರ ಸರ್ಕಾರ 650 ಕೋಟಿ ರೂ. ಬಿಡುಗಡೆ ಮಾಡಿದೆ.

  • ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಜೂ.17): ಕನಿಷ್ಠ ಬೆಂಬಲ ಬೆಲೆ ಯೋಜನೆ (ಎಂಎಸ್‌ಪಿ)ಅಡಿ ರಾಜ್ಯದಲ್ಲಿ ಜೋಳ, ರಾಗಿ, ಭತ್ತ ಮಾರಾಟ ಮಾಡಿದ್ದ ಒಂದು ಲಕ್ಷಕ್ಕೂ ಅಧಿಕ ರೈತರಿಗೆ ರಾಜ್ಯ ಸರ್ಕಾರ ಇನ್ನೂ ಬರೊಬ್ಬರಿ 1,714 ಕೋಟಿ ರು. ಪಾವತಿ ಬಾಕಿ ಉಳಿಸಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಂಎಸ್‌ಪಿ ಅಡಿ ರಾಗಿ ಮಾರಾಟ ಮಾಡಿದ್ದ 1.02 ಲಕ್ಷ ರೈತರಿಗೆ 1,611 ಕೋಟಿ ರು. ಬಾಕಿ ಉಳಿಸಿಕೊಂಡಿದ್ದು ವರದಿಯಾದ ಬೆನ್ನಲ್ಲೇ ಜೋಳ ಮಾರಾಟ ಮಾಡಿದ್ದ 28 ಸಾವಿರಕ್ಕೂ ಅಧಿಕ ರೈತರಿಗೆ ರಾಜ್ಯ ಸರ್ಕಾರ 767 ಕೋಟಿ ರು. ಪಾವತಿಸದಿರುವುದು ಬೆಳಕಿಗೆ ಬಂದಿದೆ. ಭತ್ತ, ಜೋಳ ಬೆಳೆಗಾರರು ಸೇರಿ ಒಟ್ಟಾರೆ 1.40 ಲಕ್ಷಕ್ಕೂ ಅಧಿಕ ರೈತರಿಗೆ ಒಟ್ಟು 2,364 ಕೋಟಿ ರು. ಪಾವತಿಯಾಗಬೇಕಿತ್ತು. ಬಾಕಿ ಹಣ ಪಾವತಿಗೆ ಪ್ರತಿಪಕ್ಷಗಳು, ರೈತರಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ಮಂಗಳವಾರ ಸರ್ಕಾರ 650 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ.

ಮುಂಗಾರು ಪ್ರಾರಂಭವಾಗಿದ್ದು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ. ಎಂಎಸ್‌ಪಿ ಹಣ ಪಾವತಿ ಆಗದಿರುವುದರಿಂದ ಭೂಮಿ ಹಸನು ಮಾಡಲು, ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕ ಖರೀದಿ ಮಾಡಲು, ಕಾರ್ಮಿಕರಿಗೆ ಕೂಲಿ ನೀಡಲೂ ಹಣವಿಲ್ಲದೆ ರೈತರು ಪರದಾಡುವಂತಾಗಿದೆ. ಶೀಘ್ರ ಬಾಕಿ ಹಣ ಬಿಡುಗಡೆಗೊಳಿಸಬೇಕು ಎಂಬ ಆಗ್ರಹ ಅನ್ನದಾತರಿಂದ ಕೇಳಿಬಂದಿದೆ.

ಜೋಳದ ಹಣ ಶೇ.94 ರಷ್ಟು ಬಾಕಿ:

ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ಜೋಳಕ್ಕೆ 3699 ರು. ಬೆಂಬಲ ಬೆಲೆ ನಿಗದಿ ಮಾಡಿದ್ದು, ಹಿಂಗಾರಿನಲ್ಲಿ 27,622 ರೈತರು ಹಾಗೂ ಮುಂಗಾರಿನಲ್ಲಿ 18,522 ರೈತರು ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದು ಒಟ್ಟಾರೆ 802 ಕೋಟಿ ರು. ಮೌಲ್ಯದ 2.16 ಲಕ್ಷ ಮೆಟ್ರಿಕ್‌ ಟನ್‌ ಜೋಳ ಮಾರಾಟ ಮಾಡಿದ್ದಾರೆ. ಆದರೆ ಇದರಲ್ಲಿ ಕೇವಲ 34 ಕೋಟಿ ರು.(ಶೇ.6) ಮಾತ್ರ ರೈತರಿಗೆ ಸಂದಾಯವಾಗಿತ್ತು.

ಬಳ್ಳಾರಿ ಜಿಲ್ಲೆಯಲ್ಲಿ ಹಿಂಗಾರು ಜೋಳ ಮಾರಾಟ ಮಾಡಿದ 8,550 ರೈತರ 160 ಕೋಟಿ ರು. ಬಾಕಿ ಇದೆ. ರಾಯಚೂರಿನ 14,370 ರೈತರಿಗೆ 278 ಕೋಟಿ ರು, ವಿಜಯನಗರದ 1,093 ರೈತರ 29 ಕೋಟಿ ರು. ಬಾಕಿ ಉಳಿಸಿಕೊಳ್ಳಲಾಗಿದೆ. ಮುಂಗಾರು ಜೋಳದ ವಿಷಯಕ್ಕೆ ಬರುವುದಾದರೆ, ಪ್ರಮುಖವಾಗಿ ಬಳ್ಳಾರಿಯ 5125, ರಾಯಚೂರಿನ 3763, ಹಾವೇರಿಯ 1154 ರೈತರು ಸೇರಿ 10,259 ರೈತರು ಜೋಳ ಮಾರಾಟ ಮಾಡಿದ್ದಾರೆ. ಇದರಲ್ಲಿ ಶೇ.51.64 ರಷ್ಟು ಮಾತ್ರ ಹಣ ಸಂದಾಯವಾಗಿದೆ.

1 ವಾರದಲ್ಲಿ ಹಣ ಬಿಡುಗಡೆ ಆಗದಿದ್ರೆ ರಸ್ತೆ ತಡೆ: ಎಚ್ಚರಿಕೆ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜೋಳ ಮಾರಾಟ ಮಾಡಿ ಮೂರು ತಿಂಗಳಾಗುತ್ತಿದ್ದರೂ ಹಣ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಮಂಗಳವಾರ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ವಾರದಲ್ಲಿ ಇನ್ನುಳಿದ ಬಾಕಿ ಹಣ ಬಿಡುಗಡೆ ಆಗದಿದ್ದರೆ ರಸ್ತೆ ತಡೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್‌ ಸ್ಪಷ್ಟಪಡಿಸಿದರು.

‘ಕನ್ನಡ ಪ್ರಭ’ದೊಂದಿಗೆ ಮಾತನಾಡಿದ ಅವರು, ಮುಂಗಾರು ಪ್ರಾರಂಭವಾಗಿದ್ದು ಬಿತ್ತನೆ ಕಾರ್ಯಗಳಿಗೆ ಹಣವಿಲ್ಲದೆ ರೈತರು ಪರದಾಡುವಂತಾಗಿದೆ. ವಾರದೊಳಗೆ ಎಂಎಸ್‌ಪಿ ಬಾಕಿ ಹಣವನ್ನು ಸರ್ಕಾರ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ರಸ್ತೆ ನಡೆಸಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕನ್ನಡಪ್ರಭ ವರದಿ ಬೆನ್ನಲ್ಲೇ

650 ಕೋಟಿ ರು. ಬಿಡುಗಡೆ1 ಲಕ್ಷ ರಾಗಿ ರೈತರಿಗೆ 1611 ಕೋಟಿ ರುಪಾಯಿ ಬಾಕಿ’ ಎಂದು ಜೂ.3 ರಂದೇ ‘ಕನ್ನಡ ಪ್ರಭ’ ವಿಶೇಷ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. ಅದರ ಬೆನ್ನಲ್ಲೇ ಸರ್ಕಾರ ಇದಿಗ 650 ಕೋಟಿ ರು. ಹಣ ರೈತರ ಖಾತೆಗೆ ಜಮೆ ಮಾಡಿದೆ. ಈ ಹಣವನ್ನು ಹಿರಿತನದ ಆಧಾರದಲ್ಲಿ ಎರಡು ದಿನದೊಳಗೆ ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುವುದು ಎಂದು ಮೂಲಗಳು ಸ್ಪಷ್ಟಪಡಿಸಿವೆ. ಈ ವರದಿ ಪ್ರಸ್ತಾಪಿಸಿ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ ಸೇರಿ ರೈತರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.