ರೇಣುಕಾಸ್ವಾಮಿ ಕೊಲೆ ಪ್ರಕರಣ(Renukaswamy murder case)ದ ವಿಚಾರಣೆ ವೇಳೆ, ತನಿಖಾಧಿಕಾರಿಗಳು ಸಲ್ಲಿಸಿದ ಪೆನ್‌ಡ್ರೈವ್ ಸಾಕ್ಷ್ಯ(Pendrive Digital evidence)ದ ಕುರಿತು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆದಿದೆ. ನ್ಯಾಯಾಲಯವು ಈ ಬಗ್ಗೆ ತನ್ನ ಆದೇಶವನ್ನು ಕಾಯ್ದಿರಿಸಿದೆ.
- ಸಿಟಿ ಸಿವಿಲ್ ಕೋರ್ಟಲ್ಲಿ ನಡೆಯುತ್ತಿರುವ ವಿಚಾರಣೆ
- ಪೆನ್‌ಡ್ರೈವ್ ಬಗ್ಗೆ ನಟ ದರ್ಶನ್ ಪರ ವಕೀಲರ ಆಕ್ಷೇಪ
ಬೆಂಗಳೂರು (ಜೂ.17): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ(Renukaswamy murder case)ಕ್ಕೆ ಸಂಬಂಧಿಸಿ ಪ್ರಾಷಿಕ್ಯೂಷನ್ (ತನಿಖಾಧಿಕಾರಿಗಳು) ಸಲ್ಲಿಸಿರುವ ಸಾಕ್ಷ್ಯಾಧಾರವನ್ನು ಒಳಗೊಂಡ ಪೆನ್ ಡ್ರೈವ್(Pendrive) ಅನ್ನು ದಾಖಲೆಯಾಗಿ ಗುರತಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಪ್ರಕಟಿಸಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ಮುಂದುವರಿಸಿತು.
ಈ ವೇಳೆ ನ್ಯಾಯಾಲಯವು ತನಿಖಾಧಿಕಾರಿಗಳು ಸಲ್ಲಿಸಿರುವ ಸಾಕ್ಷ್ಯಾಧಾರಗಳನ್ನು ಒಳಗೊಂಡ ಪೆನ್ ಡ್ರೈವ್ (ಡಿಜಿಟಲ್ ಸಾಕ್ಷ್ಯ) ಅನ್ನು ಸರ್ಕಾರಿ ವಿಶೇಷ ಅಭಿಯೋಜಕರ ಹಾಗೂ ಆರೋಪಿಗಳ ಪರ ವಕೀಲರ ಸಮ್ಮುಖದಲ್ಲಿ ಮುಚ್ಚಿದ ಲಕೋಟೆಯಿಂದ ಹೊರಗೆ ತೆರೆಯಿತು.
ನಂತರ ಪೆನ್ ಡ್ರೈವ್ ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿದೆಯೇ? ಎಂಬುದನ್ನು ಪರೀಕ್ಷಿಸಲು ಪೆನ್ ಡ್ರೈವ್ ನ್ಯಾಯಾಲಯದಲ್ಲಿ ಪ್ಲೇ ಮಾಡಲು (ವೀಕ್ಷಿಸಲು) ಬಯಸಿತು.
ಅದಕ್ಕೆ ದರ್ಶನ್(Darshan thoogudeepa) ಹಾಗೂ ಇತರೆ ಆರೋಪಿಗಳು ಆಕ್ಷೇಪಿಸಿ, ಪೆನ್ ಡ್ರೈವ್ ಡಿಜಿಟಲ್ ಸಾಕ್ಷ್ಯ.(Pen drive digital evidence) ಅದನ್ನು ಪರಿಗಣಿಸಬೇಕಾದರೆ ಸಾಕ್ಷ್ಯ ಕಾಯ್ದೆ ಸೆಕ್ಷನ್ 65 ಬಿ ಅನುಸಾರ ದೃಢೀಕೃತ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಆದರೆ, ತನಿಖಾಧಿಕಾರಿಗಳು ಪ್ರಮಾಣ ಪತ್ರವನ್ನು ಸಲ್ಲಿಸಿಲ್ಲ. ಅದರಂತೆ ಪೆನ್ ಡ್ರೈವ್ ಅನ್ನು ಸಾಕ್ಷ್ಯಧಾರವಾಗಿ ಗುರುತಿಸುವಂತಿಲ್ಲ ಎಂದು ಕೋರಿದರು.
ಅದಕ್ಕೆ ಉತ್ತರಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ಅವರು, ವಿಚಾರಣೆ ಸಂದರ್ಭದಲ್ಲಿ ಸಾಕ್ಷ್ಯ ಕಾಯ್ದೆ ಸೆಕ್ಷನ್ 65 ಬಿ ಅನುಸಾರ ದೃಢೀಕೃತ ಪ್ರಮಾಣ ಪತ್ರವನ್ನು ಸಲ್ಲಿಸಲಾಗುವುದು. ಪೆನ್ ಡ್ರೈವ್ ಅನ್ನು ಸಾಕ್ಷ್ಯಾಧಾರವಾಗಿ ಗುರುತಿಸಬೇಕು ಎಂದು ಕೋರಿದರು.
ಈ ಕುರಿತಂತೆ ವಿಶೇಷ ಸರ್ಕಾರಿ ವಕೀಲರು ಹಾಗೂ ಆರೋಪಿಗಳ ಪರ ವಕೀಲರು ಸುಮಾರು ಸಮಯ ವಾದ- ಪ್ರತಿವಾದ ಆಲಿಸಿದರು.
ಅಂತಿಮವಾಗಿ ನ್ಯಾಯಾಧೀಶರು, ಪೆನ್ ಡ್ರೈವ್ ಅನ್ನು ಸಾಕ್ಷ್ಯಾಧಾರವಾಗಿ ಗುರತಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಬುಧವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದರು.
ಇದೇ ವೇಳೆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಮ್ಮ ಖುದ್ದು ಹಾಜರಾತಿಗೆ ಆದೇಶಿಸಬೇಕು ಎಂದು ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದರು.
ಸಾಕ್ಷಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ನಾನು ನನ್ನ ಪರ ವಕೀಲರ ಜೊತೆ ಕೆಲವೊಂದು ಮಾಹಿತಿಗಳನ್ನು ಹಂಚಿಕೊಳ್ಳಬೇಕಿದೆ. ಹಾಗಾಗಿ, ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ತಮಗೆ ಅನುಮತಿ ನೀಡುವಂತೆ ಅರ್ಜಿಯಲ್ಲಿ ದರ್ಶನ್ ಕೋರಿದರು.
ವಿಚಾರಣೆಗೆ ಕರೆದಾಗ ಕೇಸ್‌ನ ಎಲ್ಲಾ ವಕೀಲರು ಹಾಜರಾಗಲು ನಿರ್ದೇಶನ
ಪ್ರಕರಣದ ಕೆಲ ಆರೋಪಿಗಳ ಪರ ವಕೀಲರು, ದಿನನಿತ್ಯದ ಆಧಾರದಲ್ಲಿ ವಿಚಾರಣೆ ನಡೆದರೆ, ಹಾಜರಾಗಲು ತಮಗೆ ಕಷ್ಟವಾಗುತ್ತದೆ. ಸಾಕ್ಷಿಗಳ ಹೇಳಿಕೆ ಪಟ್ಟಿಯನ್ನು ಪರೀಕ್ಷೆಗೆ ಒಳಪಡಿಸಲು ತಮಗೆ ಸಲ್ಲಿಸಲು ಪ್ರಾಸಿಕ್ಯೂಷನ್ ಗೆ ಸೂಚಿಸಲು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸುಪ್ರೀಂಕೋರ್ಟ್ ನಿರ್ದೇಶನದಂತೆ ತ್ವರಿತಗತಿಯಲ್ಲಿ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕು. ಪ್ರತಿ ನಿತ್ಯದ ವಿಚಾರಣೆ ನಡೆಸಲು ಸೋಮವಾರವಷ್ಟೇ ನ್ಯಾಯಾಲಯ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸುವ ನಿಟ್ಟಿನಲ್ಲಿ ಪ್ರಕರಣವನ್ನು ವಿಚಾರಣೆಗೆ ಕರೆದಾಗ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಕೀಲರು ತಪ್ಪದೇ ಹಾಜರಾಗಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.


