ಕೊಬ್ಬರಿ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು 2 ಸ್ತರದಲ್ಲಿ ಹೆಚ್ಚಳ ಮಾಡಿದೆ. ಇದು 2026ರಿಂದ ಅನ್ವಯವಾಗಲಿದೆ. ಈ ಕ್ರಮದಿಂದ ಕರ್ನಾಟಕ ಸೇರಿ ದೇಶದ ಎಲ್ಲಾ ಕೊಬ್ಬರಿ ಬೆಳೆಗಾರರಿಗೆ ಲಾಭವಾಗಲಿದೆ.
ನವದೆಹಲಿ : ಕೊಬ್ಬರಿ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು 2 ಸ್ತರದಲ್ಲಿ ಹೆಚ್ಚಳ ಮಾಡಿದೆ. ಇದು 2026ರಿಂದ ಅನ್ವಯವಾಗಲಿದೆ. ಈ ಕ್ರಮದಿಂದ ಕರ್ನಾಟಕ ಸೇರಿ ದೇಶದ ಎಲ್ಲಾ ಕೊಬ್ಬರಿ ಬೆಳೆಗಾರರಿಗೆ ಲಾಭವಾಗಲಿದೆ. ಹೋಳು ಕೊಬ್ಬರಿಯ ಎಂಎಸ್‌ಪಿಯಲ್ಲಿ 445 ರು. ಏರಿಕೆ ಮಾಡಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 12,027 ರು. ನಿಗದಿಪಡಿಸಲಾಗಿದೆ.
12,500 ರು. ಮಾಡಲಾಗಿದೆ
ಉಂಡೆ ಕೊಬ್ಬರಿಗೆ ನೀಡಲಾಗುವ ಬೆಂಬಲ ಬೆಲೆಯಲ್ಲಿ 400 ರು. ಹೆಚ್ಚಿಸಿ 12,500 ರು. ಮಾಡಲಾಗಿದೆ ಎಂದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯ ಬಳಿಕ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಎನ್‌ಎಎಫ್‌ಇಡಿ ಮತ್ತು ಎನ್‌ಸಿಸಿಎಫ್ ಇದೇ ಬೆಲೆಯನ್ನು ಅನುಸರಿಸಲಿವೆ. ಈ ಕ್ರಮದಿಂದ, ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಹಾಗೆ ಕೊಬ್ಬರಿ ಉತ್ಪಾದನೆಯನ್ನು ವೃದ್ಧಿಸಲು ಬೆಳೆಗಾರರಿಗೆ ಸಹಾಯವಾಗಲಿದೆ. ಪ್ರಸ್ತುತ ಹೋಳು ಕೊಬ್ಬರಿಗೆ ಕ್ವಿಂಟಲ್‌ಗೆ 11582 ರು. ಮತ್ತು ಉಂಡೆ ಕೊಬ್ಬರಿಗೆ 12100 ರು. ಬೆಂಬಲ ಬೆಲೆ ನೀಡಲಾಗುತ್ತಿದೆ.
ವಿಮಾ ವಲಯದಲ್ಲಿ 100% ವಿದೇಶಿ ಹೂಡಿಕೆಗೆ ಸಂಪುಟ ಅಸ್ತು
ನವದೆಹಲಿದೇಶದ ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು(ಎಫ್‌ಡಿಎ) ಶೇ.100ಕ್ಕೆ ಏರಿಸುವ ಮಸೂದೆಗೆ ಶುಕ್ರವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ.
ಹಣಕಾಸು ಕ್ಷೇತ್ರದ ಸುಧಾರಣೆಯ ಭಾಗವಾಗಿ, ಪ್ರಸ್ತುತ ಇರುವ ಶೇ.74 ಎಫ್‌ಡಿಐ ಪ್ರಮಾಣವನ್ನು ಶೇ.100ಕ್ಕೆ ಏರಿಸುವ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದರು. ಇದೀಗ ಲೋಕಸಭೆಯ ಬುಲೆಟಿನ್ ಪ್ರಕಾರ, ಅಧಿವೇಶನದಲ್ಲಿ ವಿಮಾ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ವೇಗ ತುಂಬುವ ವಿಮಾ ಕಾನೂನುಗಳು(ತಿದ್ದುಪಡಿ) ಮಸೂದೆ 2025ರ ಬಗ್ಗೆ ಚರ್ಚಿಸಲಾಗುವುದು. ಇದರ ಭಾಗವಾಗಿ ಎಫ್‌ಡಿಐಗೆ ಸಂಬಂಧಿಸಿದ ಮಸೂದೆಯೂ ಮಂಡನೆಯಾಗುವ ಸಾಧ್ಯತೆಯಿದೆ.
ವಿಮಾ ಕ್ಷೇತ್ರವು ಇಲ್ಲಿಯವರೆಗೆ ಎಫ್‌ಡಿಐ ಮೂಲಕ 82,000 ಕೋಟಿ ರು. ಪಡೆದಿದೆ.
ಇನ್ನು ಯುಜಿಸಿ, ಎಐಸಿಟಿಇ ಬದಲು ಏಕ ಉನ್ನತ ಶಿಕ್ಷಣ ನಿಯಂತ್ರಕ?
ನವದೆಹಲಿ: ದೇಶದಲ್ಲಿರುವ ಯುಜಿಸಿ, ಎಐಸಿಟಿಇಯಂತಹ ಬೇರೆ ಬೇರೆ ಉನ್ನತ ಶಿಕ್ಷಣ ನಿಯಂತ್ರಕಗಳನ್ನು ಸಂಯೋಜಿಸಿ ಒಂದೇ ನಿಯಂತ್ರಕ ಸಂಸ್ಥೆ ರಚಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದಿಸಿದೆ.
ಜತೆಗೆ, ಭಾರತೀಯ ಉನ್ನತ ಶಿಕ್ಷಣ ಆಯೋಗ ಮಸೂದೆ ಎಂದಿದ್ದ ಹೆಸರನ್ನು ವಿಕಸಿತ ಭಾರತ ಶಿಕ್ಷಾ ಅಧಿಕಾರಿ ಮಸೂದೆ ಎಂದು ಬದಲಿಸಲಾಗಿದೆ.ಇದರೊಂದಿಗೆ, ತಾಂತ್ರಿಕೇತರ ಉನ್ನತ ಶಿಕ್ಷಣದ ಮೇಲ್ವಿಚಾರಣೆ ನಡೆಸುವ ಯುಜಿಸಿ, ತಾಂತ್ರಿಕ ಶಿಕ್ಷಣದ ನಿಯಂತ್ರಕ ಎಐಸಿಟಿಇ ಹಾಗೂ ಶಿಕ್ಷಕರ ಶಿಕ್ಷಣಕ್ಕಾಗಿ ನಿಯಂತ್ರಕ ಸಂಸ್ಥೆ ಎನ್‌ಸಿಟಿಇ ಬದಲು ಇನ್ನು ಒಂದೇ ನಿಯಂತ್ರಕವನ್ನು ರಚಿಸಲಾಗುವುದು. ಆದರೆ ವೈದ್ಯಕೀಯ ಹಾಗೂ ಕಾನೂನು ಕಾಲೇಜುಗಳು ಇದರ ಅಡಿ ಬರುವುದಿಲ್ಲ.ಹೊಸ ಸಂಸ್ಥೆಗೆ ನಿಯಂತ್ರಣ, ಮಾನ್ಯತೆ ನೀಡುವಿಕೆ ಮತ್ತು ವೃತ್ತಿಪರ ಮಾನದಂಡಗಳನ್ನು ನಿಗದಿಪಡಿಸುವ ಜವಾಬ್ದಾರಿ ನೀಡಲಾಗುವುದು. ಆದರೆ ನಿಧಿಸಂಗ್ರಹಣೆಗೆ ಸಂಬಂಧಿಸಿದ ಕೆಲಸವನ್ನು ಇದು ಮಾಡುವುದಿಲ್ಲ.
‘ನರೇಗಾ’ ಹೆಸರು ಬದಲು: ಇನ್ನು ‘ಪೂಜ್ಯ ಬಾಪು ರೋಜಗಾರ್ ಯೋಜನೆ’
ನವದೆಹಲಿ: ಕೇಂದ್ರದಲ್ಲಿ ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಎಂ-ನರೇಗಾ) ಹೆಸರು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ.ಇದಕ್ಕೆ ಈಗ ‘ಪೂಜ್ಯ ಬಾಪು ರೋಜಗಾರ್ ಯೋಜನೆ’ ಎಂದು ನಾಮಕರಣ ಮಾಡಿದ್ದು, ಶುಕ್ರವಾರ ನಡೆದ ಸಭೆಯಲ್ಲಿ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ, ಜತೆಗೆ ಬರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ಖಾತ್ರಿ ಕೂಲಿಯನ್ನು 125ಕ್ಕೆ ಹೆಚ್ಚಿಸಲಾಗಿದೆ.
ಈ ಯೋಜನೆಯು ಗ್ರಾಮೀಣ ಭಾಗಗಳಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ವರ್ಷಕ್ಕೆ ಕನಿಷ್ಠ 125 ದಿನಗಳ ಉದ್ಯೋಗ ಖಾತ್ರಿಯನ್ನು ನೀಡುತ್ತದೆ. ಈ ಯೋಜನೆಗಾಗಿ 1.5 ಲಕ್ಷ ಕೋಟಿ ರು.ಗೂ ಅಧಿಕ ಅನುದಾನವನ್ನು ಮೀಸಲಿರಿಸಲು ಯೋಜಿಸಲಾಗಿದೆ.
71 ಹಳೆಯ ಕಾನೂನು ರದ್ದತಿಗೆ ಕೇಂದ್ರ ಸಂಪುಟ ಅಸ್ತು
ನವದೆಹಲಿ: ಸಂವಿಧಾನದಲ್ಲಿದ್ದರೂ ಅಪ್ರಸ್ತುತವಾದ, ಬಳಕೆಯಿಲ್ಲದ ಅಥವಾ ಹಳೆಯ 71 ಕಾನೂನುಗಳನ್ನು ರದ್ದುಪಡಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.ಈ 71 ಕಾನೂನುಗಳ ಪೈಕಿ 65 ತಿದ್ದುಪಡಿ ಕಾಯ್ದೆಗಳಾಗಿದ್ದು, 6 ಪ್ರಧಾನ ಕಾಯ್ದೆಗಳಾಗಿವೆ. ರದ್ದುಪಡಿಸಲು ಇಚ್ಛಿಸಿರುವ ಕಾನೂನುಗಳ ಪೈಕಿ ಕನಿಷ್ಠ 1 ಬ್ರಿಟಿಷ್ ಕಾಲದ ಕಾನೂನು ಇದೆ.
ಮೋದಿ ಸರ್ಕಾರ ಬಂದ ನಂತರ ಈವರೆಗೆ 1562 ಹಳೆ ಕಾನೂನುಗಳನ್ನು ಪುಸ್ತಕದಿಂದ ತೆಗೆದುಹಾಕಲಾಗಿದೆ.ಈ ಬಗ್ಗೆ ಹೇಳಿಕೆ ನೀಡಿದ ಅಧಿಕಾರಿಗಳು, ‘ಹಳೆ ಕಾನೂನುಗಳ ರದ್ದತಿಗೆ ಸಿದ್ಧವಾಗಿರುವ ಮಸೂದೆಯನ್ನು ಬ್ರಿಟಿಷರ ಕಾಲದ ಎಲ್ಲ ವಸಾಹತು ಕಾನೂನುಗಳನ್ನು ರದ್ದುಗೊಳಿಸಲು ಯೋಜಿಸಿಲ್ಲ. ಬದಲಿಗೆ ಅನಗತ್ಯ ಕಾನೂನುಗಳನ್ನು ತೆಗೆದು ಹಾಕಲು ರೂಪಿಸಲಾಗಿದೆ’ ಎಂದಿದ್ದಾರೆ.
ಅಣು ಕ್ಷೇತ್ರಕ್ಕೆ ಖಾಸಗಿ ಪ್ರವೇಶ-ಮಸೂದೆಗೆ ಸಂಪುಟ ಅಸ್ತು:ದೇಶದಲ್ಲಿ ಅತ್ಯಂತ ಕಠಿಣ ನಿರ್ಬಂಧಗಳನ್ನು ಹೊಂದಿರುವ ಅಣುಶಕ್ತಿ ಕ್ಷೇತ್ರಕ್ಕೆ ಖಾಸಗಿ ಪಾಲುದಾರರ ಪ್ರವೇಶಕ್ಕೆ ಅನುಕೂಲವಾಗುವಂತಹ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದಿಸಿದೆ.
‘ಭಾರತವನ್ನು ಪರಿವರ್ತಿಸಲು ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ (ಶಾಂತಿ) ಮಸೂದೆಗೆ ಒಪ್ಪಿಗೆ ಸೂಚಿಸಿದೆ.ಕಳೆದ ಫೆಬ್ರವರಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಣುಕ್ಷೇತ್ರದಲ್ಲಿ ಖಾಸಗಿ ಪ್ರವೇಶದ ಕುರಿತು ಘೋಷಿಸಿದ್ದರು.


