ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯಿಂದ (SIR) ತಮ್ಮ ಮತಬ್ಯಾಂಕ್‌ಗೆ ಸೇರಿದ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರ ಹೆಸರುಗಳು ಕೈಬಿಡುವ ಆತಂಕ. ಕಾಂಗ್ರೆಸ್(Congress) ಇದೆ. ಇದನ್ನು ತಡೆಯಲು, ರಾಜ್ಯಾದ್ಯಂತ ಜೂ.23 ರಿಂದ ಜೂ.30 ರವರೆಗೆ ಐದು ಬೃಹತ್ ಜಾಗೃತಿ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದೆ

ಬೆಂಗಳೂರು (ಜೂ.17): ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷ(Congress Legislature Party)ದಲ್ಲಿ ತೀವ್ರ ಆತಂಕ ವ್ಯಕ್ತವಾಗಿದ್ದು, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಸೇರಿ ಕಾಂಗ್ರೆಸ್‌ನ ಮತ ಬ್ಯಾಂಕ್‌ ಮತಹಕ್ಕಿನಿಂದ ದೂರವಾಗದಂತೆ ಎಚ್ಚರವಹಿಸಲು ತೀರ್ಮಾನಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕಾಗಿ ರಾಜ್ಯಾದ್ಯಂತ ಮತದಾರರಿಗೆ ಜಾಗೃತಿ ಮೂಡಿಸಲು ಜೂ.23 ರಿಂದ ಜೂ.30 ರವರೆಗೆ ಐದು ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.

ಬಿಎಲ್‌ಎಗಳ ಮೂಲಕ ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಿಂದ ಅರ್ಹರು ಹೊರಗುಳಿಯದಂತೆ ಎಚ್ಚರವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಡದಿಯ ವಂಡರ್‌ ಲಾ ರೆಸಾರ್ಟ್‌ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಎಸ್‌ಐಆರ್‌ ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದರು.

ಕಾಂಗ್ರೆಸ್‌ ಮೈಮರೆತರೆ ಎಸ್‌ಐಆರ್‌ನಿಂದ ತುಂಬಾ ಅಪಾಯವಿದೆ. ಕಾಂಗ್ರೆಸ್‌ಗೆ ಮತ ಬ್ಯಾಂಕ್‌ ಆಗಿರುವ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ. ಹೀಗಾಗಿ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಬಿಎಲ್‌ಎಗಳ ಮೂಲಕ ಎಸ್‌ಐಆರ್‌ ಬಗ್ಗೆ ಎಚ್ಚರವಹಿಸಬೇಕು. ಬ್ಲಾಕ್‌ ಮಟ್ಟಕ್ಕೆ ಹೋಗಿ ಕೆಲಸ ಮಾಡಬೇಕು. ಯಾವ ಮತದಾರರ ಹೆಸರನ್ನೂ ಪಟ್ಟಿಯಿಂದ ತೆಗೆಯುತ್ತಿದ್ದರೂ ಅದನ್ನು ಉಳಿಸಲು ಅಗತ್ಯವಿರುವ ದಾಖಲೆ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ರಾಜ್ಯದ 5 ಕಡೆ ಜನಜಾಗೃತಿ ಸಮಾವೇಶ:

ಮತದಾರರ ಕಡೆಗೆ ನಡೆಯಲು ಕಾಂಗ್ರೆಸ್‌ ತೀರ್ಮಾನಿಸಿದ್ದು, ಬೃಹತ್ ಜಾಗೃತಿ ಅಭಿಯಾನ ನಡೆಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಿದೆ. ನಾಲ್ಕೂ ಕಂದಾಯ ವಿಭಾಗ ಸೇರಿ ಐದು ಕಡೆ ಬೃಹತ್‌ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.

ಜೂ.23 ರಂದು ಮಂಗಳೂರು ನಗರ, ಜೂ.25 ಹುಬ್ಬಳ್ಳಿ ನಗರ, ಜೂ.27 ರಂದು ಮೈಸೂರು, ಜೂ.29 ರಂದು ಕಲಬುರಗಿ ಹಾಗೂ ಜೂ.30 ರಂದು ಬೆಂಗಳೂರು ನಗರದಲ್ಲಿ ಬೃಹತ್‌ ಜಾಗೃತಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆಗೆ ಸಜ್ಜಾಗಿ-ಶಾಸಕರಿಗೆ ಸಿಎಂ ಸೂಚನೆ:

ಶಾಸಕರು ಜಿಪಂ, ತಾಪಂ, ಗ್ರಾಪಂ, ಜಿಬಿಎ ಚುನಾವಣೆ ಸಜ್ಜಾಗುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳು ಸವಾಲಿನ ದಿನಗಳಾಗಿದ್ದು, ಪಂಚಾಯಿತಿ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ವಿಧಾನಸಭೆ ಚುನಾವಣೆವರೆಗೆ ಎಚ್ಚರವಹಿಸಿ ಕೆಲಸ ಮಾಡಬೇಕು ಎಂದು ತಿಳಿಸಿರುವುದಾಗಿ ಹೇಳಲಾಗಿದೆ.