ಒಂದೆಡೆ ಸಾಲುಸಾಲು ಮಟನ್‌ ಕಬಾಬ್‌, ಹಲೀಂನಂಥ ತರಹೇವಾರಿ ಖಾದ್ಯ ಸವಿಯುವ ಜನ, ಇನ್ನೊಂದೆಡೆ ಹಬ್ಬದ ಉಡುಗೆಗಳಿಗೆ ಭರ್ಜರಿ ಖರೀದಿ, ಮತ್ತೊಂದೆಡೆ ಗೃಹೋಪಯೋಗಿ ವಸ್ತುಗಳ ಮೇಳ...

ಬೆಂಗಳೂರು (ಏ.17) : ಒಂದೆಡೆ ಸಾಲುಸಾಲು ಮಟನ್‌ ಕಬಾಬ್‌, ಹಲೀಂನಂಥ ತರಹೇವಾರಿ ಖಾದ್ಯ ಸವಿಯುವ ಜನ, ಇನ್ನೊಂದೆಡೆ ಹಬ್ಬದ ಉಡುಗೆಗಳಿಗೆ ಭರ್ಜರಿ ಖರೀದಿ, ಮತ್ತೊಂದೆಡೆ ಗೃಹೋಪಯೋಗಿ ವಸ್ತುಗಳ ಮೇಳ...

ಇದು ಶಿವಾಜಿ ನಗರ(Shivajinagar)ದ ರಸೆಲ್‌ ಮಾರುಕಟ್ಟೆ(Russell Market,), ಚಾಂದನಿಚೌಕ್‌, ಫ್ರೇಜರ್‌ ಟೌನ್‌ ಫುಡ್‌ಸ್ಟ್ರೀಟ್‌ ಚಿತ್ರಣ. ರಂಜಾನ್‌ ಸಮೀಪಿಸುತ್ತಿದ್ದಂತೆ ಇಲ್ಲಿ ಹಬ್ಬ ರಂಗೇರುತ್ತಿದೆ. ಸಂಜೆ ಪ್ರಾರ್ಥನೆಯ ಬಳಿಕ ನಸುಕಿನವರೆಗೂ ಇಲ್ಲಿ ಲಕ್ಷಾಂತರ ಜನ ಸೇರುತ್ತಿದ್ದಾರೆ. ಮುಸಲ್ಮಾನರು ಮಾತ್ರವಲ್ಲದೆ ಇತರರು ಕೂಡ ಹೆಚ್ಚಾಗಿ ಆಗಮಿಸುತ್ತಿದ್ದಾರೆ. ತಮ್ಮಿಷ್ಟದ ಖಾದ್ಯ ಸವಿಯುವುದು, ಬಟ್ಟೆಬರೆ ಖರೀದಿಯಲ್ಲಿ ತೊಡಗಿ ಸಂಭ್ರಮಿಸುತ್ತಿದ್ದಾರೆ.

Ramzan 2023: ಬೆಂಗಳೂರಿನ ಫುಡ್ಡೀಸ್‌ ಈ ಫುಡ್ ಸ್ಟ್ರೀಟ್ ಮಿಸ್ ಮಾಡ್ದೆ ವಿಸಿಟ್ ಮಾಡಿ

ಮಳಿಗೆಗಳೆದುರು ದೊಡ್ಡದಾದ ಬೆಂಕಿ ಹಾಕಿ ಮಾಂಸವನ್ನು ಬೇಯಿಸುತ್ತಿದ್ದರೆ ಸುತ್ತಲೂ ಅದರ ಘಮ ಆವರಿಸುತ್ತಿದೆ. ಇದು ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರಿಸುತ್ತಿದೆ. ಅದರಲ್ಲೂ ಫ್ರೇಜರ್‌ ಟೌನ್‌ನಲ್ಲಿ ವಿದ್ಯುದೀಪಗಳ ಅಲಂಕಾರ ಈ ಮಳಿಗೆಗಳಿಗೆ ಹೊಸ ಮೆರುಗನ್ನೇ ನೀಡುತ್ತಿದೆ. ಮಟನ್‌ ಚಿಕನ್‌ ಸಮೋಸಾ, ಚಿಕನ್‌ ಕಬಾಬ್‌, ಶೀಖ್‌ ಕಬಾಬ್‌, ಮಟನ್‌ ಕಬಾಬ್‌, ಹಲೀಂ ತಿನಿಸಿಗೆ ಹೆಚ್ಚು ಬೇಡಿಕೆಯಿದೆ. ಮಟನ್‌, ಚಿಕನ್‌ ಹಾಗೂ ಬೀಫ್‌ ಹಲೀಂ, ಚಿಕನ್‌ ಮತ್ತು ಮಟನ್‌ ಹಲೀಂ ಸಾಕಷ್ಟುಬೇಡಿಕೆಯಿದೆ ಎಂದು ಅಂಗಡಿ ಮಾಲಿಕರು ತಿಳಿಸಿದರು.

ಸ್ವಾದಿಷ್ಟ, ಪೌಷ್ಟಿಕಾಂಶದಿಂದ ಕೂಡಿರುವ ಇರಾನ್‌ ಮೂಲದ ಈ ಖಾದ್ಯದ ಮಳೆಗೆಯೆದುರು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಇದರ ಜತೆಗೆ ಬಾಂಗುಡೆ ಫ್ರೈ, ಏಡಿ ಸೇರಿ ವಿವಿಧ ಮೀನುಗಳ ತಿನಿಸಿಗೂ ಅಷ್ಟೇ ಡಿಮ್ಯಾಂಡ್‌ ಇದೆ.

ಹಬ್ಬದ ವಿಶೇಷ ಸಿಹಿ ತಿನಿಸಿಗಳಿಗೂ ಜನ ಮಾರುಹೋಗುತ್ತಿದ್ದಾರೆ, ಶೀರ್‌ ಕುರ್ಮಾ, ರಸ್‌ಮಲಾಯಿ, ಖೀರು, ದೂದ್‌ ಕಾ ಸೇಮಿಯಾ, ಬಾದಾಮ್‌ ಸ್ಪೆಷಲ್‌ ಫಾಲೂದಾ ಸಿಹಿ ತಿನಿಸುಗಳಿಗೂ ಬೇಡಿಕೆಯಿದೆ. ಮುಂಬೈ, ಕೊಲ್ಕತಾದ ವಿಶೇಷ ಶ್ಯಾವಿಗೆಗಳನ್ನು ಜನ ಖರೀದಿ ಮಾಡಿ ಹಬ್ಬದ ಅಡುಗೆಗಾಗಿ ಕೊಂಡೊಯ್ಯುತ್ತಿದ್ದಾರೆ. ಜೊತೆಗೆ ಸಮೀಪವೇ ಇರುವ ಚಹಾ ಮಳಿಗೆಗಳಲ್ಲಿ ಹತ್ತಾರು ಬಗೆಯ ಚಹಾಗಳನ್ನು ಹೀರುತ್ತಿರುವುದು ಕಂಡುಬರುತ್ತಿದೆ.

ಹೋಟೆಲ್‌ ಮಾಲಿಕ ಶೌಕತ್‌ ಅಹ್ಮದ್‌, ರಂಜಾನ್‌ ಮಾಸಕ್ಕಾಗಿ ತಿಂಗಳ ಮೊದಲೇ ತಯಾರಿ ಮಾಡಿಕೊಳ್ಳುತ್ತೇವೆ. ಈ ಬಾರಿ ವಿಶೇಷವಾಗಿ ಮಾರುಕಟ್ಟೆಯಲ್ಲಿ ಗ್ರಾಹಕರು ಕಾಣಸಿಗುತ್ತಿದ್ದು, ವ್ಯಾಪಾರ ಉತ್ತಮವಾಗಿ ನಡೆದಿದೆ ಎಂದರು.

ರಂಜಾನ್ ಸ್ಪೆಷಲ್‌, ಆಹಾರ ಪ್ರಿಯರ ಸ್ವರ್ಗವಾದ ಫ್ರೇಜರ್ ಟೌನ್‌ನ ಫುಡ್ ಸ್ಟ್ರೀಟ್

ಬಟ್ಟೆಬರೆಗೆ ಬೇಡಿಕೆ

ಇನ್ನು ಪಕ್ಕದಲ್ಲೇ ಇರುವ ಕಮರ್ಷಿಯಲ್‌ ಸ್ಟ್ರೀಟ್‌ ಟೆಕ್ಸ್‌ ಮಾರ್ಚ್‌ಗಳಲ್ಲಿ ರಾಶಿರಾಶಿಯಾಗಿ ಬಟ್ಟೆಬರೆ ಲಭ್ಯವಾಗುತ್ತಿದೆ. ಇಲ್ಲಿ ಕೈಗೆಟಕುವ ದರದಲ್ಲಿ ಬಟ್ಟೆಬರೆಗಳನ್ನು ಕೊಳ್ಳಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಪಾದರಕ್ಷೆ, ಆರ್ಟಿಫಿಶಲ್‌ ಆಭರಣಗಳು ಸಿಗುತ್ತಿವೆ. ಕರ್ನಾಟಕ ನ್ಯೂ ಇವನಿಂಗ್‌ ಬಝಾರ್‌ನಲ್ಲಿ ರಂಜಾನ್‌ಗಾಗಿ ಹಬ್ಬದ ಜುಬ್ಬಾ ಪೈಜಾಮಾ, ವಿಶೇಷ ವಿನ್ಯಾಸದ ಬುರ್ಖಾ, ಹಿಜಾಬ್‌, ನಿಖಾಬ್‌ಗಳು ಜೋರಾಗಿ ಮಾರಾಟವಾಗುತ್ತಿವೆ ಎಂದು ವ್ಯಾಪಾರಸ್ಥರು ತಿಳಿಸಿದರು. ಇದಲ್ಲದೆ, ಪಾತ್ರೆ ಪಗಡೆ, ಗೃಹೋಪಯೋಗಿ ವಸ್ತುಗಳ ಮಾರಾಟ ಕೂಡ ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿಯಾಗಿ ನಡೆದಿದೆ.